Raghava Sharma Nidle Column: ಅಣ್ಣಾಮಲೈ ಹೃದಯಕ್ಕೆ ಹತ್ತಿರವಾಗಿದ್ದ ಬಿಜೆಪಿ ಭಾರವಾಗಿದ್ದೇಕೆ ?
ರಾಜಕಾರಣ, ಚುನಾವಣೆಗಳು ಸಾಂಪ್ರದಾಯಿಕ ಶೈಲಿಯನ್ನು ಕಳಚಿ ಹೊಸ ರೂಪಾಂತರಕ್ಕೆ ತೆರದುಕೊಳ್ಳಲೇಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ, ತಮಿಳು ನಾಡಿನಾಚೆಗಿನ ಶಿಕ್ಷಿತ ಮತದಾರ ವರ್ಗಕ್ಕೂ ಅಣ್ಣಾಮಲೈ ಬಗ್ಗೆ ವಿಶೇಷ ಅಭಿಮಾನ ಹುಟ್ಟಿದ್ದು ಸುಳ್ಳೇನಲ್ಲ. ಆದರೆ, ಬಿಜೆಪಿ ಜತೆಗಿನ ಪಯಣವನ್ನು ಅವರೀಗ ಅಂತ್ಯ ಗೊಳಿಸುವ ಸನಿಹದಲ್ಲಿದ್ದಾರೆ.
-
ಜನಪಥ
ಅಣ್ಣಾಮಲೈ ಹೊರ ನಡೆದರೆ ತ.ನಾಡು ಬಿಜೆಪಿಯಲ್ಲಿ ಶೂನ್ಯ ಆವರಿಸಬಹುದು. ವಿಶ್ವಾಸಾರ್ಹ ನಾಯಕನೊಬ್ಬನ ನಿರ್ಗಮನ ಪಕ್ಷಕ್ಕೆ ಮತ್ತಷ್ಟು ಹಾನಿ ಮಾಡುವ ಸಾಧ್ಯತೆ ಹೆಚ್ಚು. ಬಹುಶಃ ಅಣ್ಣಾಮಲೈ ಜತೆ ಕೈಜೋಡಿಸಲು ತ.ನಾಡು ಬಿಜೆಪಿ ಬೆಂಬಲಿಸುವ ಅನೇಕ ಮಂದಿ ಈಗಾಗಲೇ ನಿರ್ಧಾರ ಮಾಡಿರಬಹುದು. ಮುಂದಿನ ದಿನಗಳಲ್ಲಿ ಸಂಖ್ಯೆ ಹೆಚ್ಚಲೂಬಹುದು.
ಕೆ.ಅಣ್ಣಾಮಲೈ ಅವರು ಪೊಲೀಸ್ ವೃತ್ತಿ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು 6 ವರ್ಷಗಳ ಹಿಂದೆ ಯಾರೂ ನಿರೀಕ್ಷಿಸಿರಲಿಲ್ಲ. ಖಡಕ್ ಪೊಲೀಸ್ ಅಧಿಕಾರಿಯಾಗಿ ತಮ್ಮ ಇತಿಮಿತಿಯಲ್ಲಿ ಜನಸೇವೆ ಮಾಡುತ್ತಿದ್ದ ಅಣ್ಣಾಮಲೈ ಕಾರ್ಯಾಂಗಕ್ಕಿಂತ ಶಾಸಕಾಂಗ ಪ್ರವೇಶಿಸಿದರೆ ಸಮಾಜದಲ್ಲಿ ಸೂಕ್ತ ಬದಲಾವಣೆ ತರಲು ಸಾಧ್ಯ ಎಂದು ನಂಬಿದ್ದರಿಂದಲೇ ರಾಜಕೀಯ ಪ್ರವೇಶ ಮಾಡಿದ್ದರು. ಅವರ ಆಯ್ಕೆ ಬಿಜೆಪಿಯಾಗಿದ್ದರಿಂದ ಬಿಜೆಪಿ ವಿರೋಧಿ ಗಳಿಂದ ವ್ಯಾಪಕ ಟೀಕೆ-ಟಿಪ್ಪಣಿಗಳನ್ನು ಎದುರಿಸಿದ್ದರು. ಅವರಿಗೆ ಆಗ ತಮ್ಮ ಹಾದಿಯ ಬಗ್ಗೆ ಅವರಿಗೆ ಸ್ಪಷ್ಟತೆ ಮತ್ತು ಸೈದ್ಧಾಂತಿಕ ಬದ್ಧತೆಯಿತ್ತು.
2020ರಲ್ಲಿ ಕೇಂದ್ರ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಗ ನಾನು ಅವರನ್ನು ಪತ್ರಿಕೆ ಮತ್ತು ಸುದ್ದಿ ವಾಹಿನಿಗೆ ಸಂದರ್ಶನ ಮಾಡಿದ್ದೆ. ನಂತರವೂ ಅನೇಕ ಸಂದರ್ಭಗಳಲ್ಲಿ ಮಾತನಾಡಿದ್ದುಂಟು. ಸಿಂಗಂ ಎಂದು ಕರ್ನಾಟಕದಾದ್ಯಂತ ಪ್ರಸಿದ್ಧಿಯಾಗಿ, ಆ ಪ್ರಸಿದ್ಧಿಯ ಅಲೆಯಲ್ಲಿ ತೇಲುವ ಬದಲು ರಾಜಕೀಯದ ಹಾದಿ ತುಳಿದದ್ದಕ್ಕಾಗಿ ಅವರು ಅಂದು ನೀಡಿದ್ದ ಕಾರಣಗಳು ಹಾಗೂ ಆ ವಿಷಯದ ಕುರಿತು ಅವರಿಗಿದ್ದ ಕ್ಲಾರಿಟಿ ನನ್ನಂತೆ ಅನೇಕರನ್ನು ಬಹುವಾಗಿ ಸೆಳೆದಿತ್ತು.
ವೈಚಾರಿಕ ತಿಳುವಳಿಕೆ-ಸ್ಪಷ್ಟತೆ ಇರುವಂತಹ ವ್ಯಕ್ತಿಗಳನ್ನು ಎದುರು ನೋಡುತ್ತಿರುವ ಈ ತಲೆಮಾರಿನ ನಿರ್ದಿಷ್ಟ ಮತದಾರ ವರ್ಗ ಅಣ್ಣಾಮಲೈರಂತಹ ನಾಯಕತ್ವವನ್ನೇ ಬಯಸುತ್ತಿದ್ದಾರೆ. ಇತ್ತೀಚಿನ ಚುನಾವಣಾ ಫಲಿತಾಂಶಗಳು ಅದನ್ನೇ ಸಾರುತ್ತಿವೆ.
ರಾಜಕಾರಣ, ಚುನಾವಣೆಗಳು ಸಾಂಪ್ರದಾಯಿಕ ಶೈಲಿಯನ್ನು ಕಳಚಿ ಹೊಸ ರೂಪಾಂ ತರಕ್ಕೆ ತೆರದುಕೊಳ್ಳಲೇಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ, ತಮಿಳು ನಾಡಿ ನಾಚೆಗಿನ ಶಿಕ್ಷಿತ ಮತದಾರ ವರ್ಗಕ್ಕೂ ಅಣ್ಣಾಮಲೈ ಬಗ್ಗೆ ವಿಶೇಷ ಅಭಿಮಾನ ಹುಟ್ಟಿದ್ದು ಸುಳ್ಳೇನಲ್ಲ. ಆದರೆ, ಬಿಜೆಪಿ ಜತೆಗಿನ ಪಯಣವನ್ನು ಅವರೀಗ ಅಂತ್ಯಗೊಳಿಸುವ ಸನಿಹ ದಲ್ಲಿದ್ದಾರೆ.
ಇದನ್ನೂ ಓದಿ: Raghava Sharma Nidle Column: ಕುರ್ಚಿ ಕಾಳಗ: ದಿಲ್ಲಿ ಅಂಗಳದಲ್ಲಿ ಗೆದ್ದವರು ಯಾರು ?
ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಏತನ್ಮಧ್ಯೆ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್‌ಗೆ ಹಠಾತ್ ಬುಲಾವ್ ನೀಡಿರುವ ದಿಲ್ಲಿ ನಾಯಕರು, ಅಣ್ಣಾಮಲೈರನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನದಲ್ಲಿದ್ದಾರೆ.
ಬಿಜೆಪಿಯಿಂದ ಹೊರಬರುವ ಮತ್ತು ಹೊಸ ರಾಜಕೀಯ ಸಂಘಟನೆ ಸ್ಥಾಪಿಸುವ ಚಿಂತನೆ ಬಗ್ಗೆ 10-12 ದಿನಗಳ ಮುಂಚೆಯೇ ತಮ್ಮ ಆಪ್ತರನೇಕರಿಗೆ ಅಣ್ಣಾಮಲೈ ತಿಳಿಸಿದ್ದರು. ಬಹುಶಃ ತಮ್ಮ ನಿರ್ಧಾರದ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳು ಏನು ಬರುತ್ತವೆ ಎಂದು ತಿಳಿದುಕೊಳ್ಳುವ ಉದ್ದೇಶವೂ ಇದರ ಹಿಂದಿರಬಹುದು. ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಸಾಧಿಸಿದರೂ, ಅಣ್ಣಾಮಲೈಗೆ ರಾಜ್ಯಸಭೆ ಸದಸ್ಯತ್ವದ ಜತೆಗೆ ಕೇಂದ್ರ ಕ್ಯಾಬಿನೆಟ್ ಸಚಿವ ಸ್ಥಾನದ ಆಫರನ್ನೂ ನೀಡಲಾಗಿತ್ತು.
ಇಲ್ಲವೇ ರಾಜ್ಯಸಭೆ ಸದಸ್ಯತ್ವದ ಜತೆಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಿ ಎಂದೂ ತಿಳಿಸಲಾಗಿತ್ತು. ಆದರೆ, ಈ ಎರಡನ್ನೂ ಅಣ್ಣಾಮಲೈ ತಿರಸ್ಕರಿಸಿದ್ದರು. ತಮ್ಮ ನಿರೀಕ್ಷೆ ಹಾಗೂ ಮಹತ್ವಾಕಾಂಕ್ಷೆಗೆ ಪೂರಕವಾದ ಸ್ವಾತಂತ್ರ್ಯ ಪಕ್ಷದಲ್ಲಿ ಸಿಗಲಿಲ್ಲ ಎನ್ನುವುದು ಅವರ ತೀವ್ರ ತರಹದ ಅಸಮಾಧಾನಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಕಾರಣವೇನೇ ಇದ್ದರೂ, ಬಿಜೆಪಿಗೆ ರಾಜೀನಾಮೆ ನೀಡುತ್ತಿರುವ ಅಣ್ಣಾಮಲೈ ಕ್ರಮ ಆರ್‌ಎಸ್‌ಎಸ್ ಮುಖಂಡರಿಗೂ ಅಸಮಾಧಾನ ಉಂಟುಮಾಡಿದೆ.
6 ವರ್ಷಗಳ ಬಿಜೆಪಿ ಸಖ್ಯದಿಂದ ಅಣ್ಣಾಮಲೈ ಸಾಕಷ್ಟು ಕಲಿತಿರಬಹುದು. ಜನರೊಂದಿಗೆ ಸಾಮಾನ್ಯನಂತೆ ಬೆರೆಯಲು ವೇದಿಕೆ ಒದಗಿಸಿದ ಪಕ್ಷಕ್ಕೆ ಸದಾ ಆಭಾರಿಯಾಗಿದ್ದೇನೆ ಎಂಬ ನರೇಟಿವ್ ರೂಪಿಸುವ ಸಲುವಾಗಿಯೇ ಅವರು ದೆಹಲಿ ಪ್ರವಾಸ ಕೈಗೊಂಡಿರಬಹುದು. ಎಷ್ಟೆಂದರೂ ಅವರೂ ಒಬ್ಬ ರಾಜಕಾರಣಿ ಮತ್ತು ಕಾರ್ಡ್ ಪ್ಲೇ ಮಾಡುವುದು ಅವರಿಗೂ ಗೊತ್ತಿಲ್ಲದೇನಿಲ್ಲ.
ಅಣ್ಣಾಮಲೈ ದೃಷ್ಟಿಕೋನಕ್ಕೆ ತಕ್ಕುದಾಗಿ ಪಕ್ಷ ನಡೆದುಕೊಳ್ಳಲಿಲ್ಲ ಮತ್ತು ಪಕ್ಷದಲ್ಲಿ ಅಗತ್ಯ ಸ್ವಾತಂತ್ರ್ಯ ಸಿಗಲಿಲ್ಲ ಎಂದು ಬೆಂಬಲಿಗರು ವಾದಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರೆ ನಾಯಕರ ಬಗ್ಗೆ ವಿಶೇಷ ಅಭಿಮಾನ ವ್ಯಕ್ತಪಡಿಸುತ್ತಲೇ ಪಕ್ಷ ತೊರೆಯಲು ಮುಂದಾಗಿರುವ ಅಣ್ಣಾಮಲೈ, ವಿದಾಯವನ್ನೂ ಗೌರವಯುತ ಪ್ರಕ್ರಿಯೆ ಮೂಲಕ ನಡೆಸಿದ್ದಾರೆ ಎಂಬ ಸಾರ್ವಜನಿಕ ಗ್ರಹಿಕೆ ರೂಪಿಸುತ್ತಿದ್ದಾರೆ. ಈ ನಡೆ ಅವರ ಮೇಲಿನ ಸಾರ್ವಜನಿಕ ಅಭಿಮಾನವನ್ನು ದುಪ್ಪಟ್ಟು ಮಾಡಿರುವುದು ಸುಳ್ಳಲ್ಲ. ಸದ್ಯಕ್ಕೆ ಕೇಂದ್ರ ಬಿಜೆಪಿ ನಾಯಕರೇ ವಿಲನ್‌ಗಳ ಸ್ಥಾನದಲ್ಲಿ ನಿಲ್ಲಬೇಕಾಗಿದೆ.
ಬಿಜೆಪಿ ಸೇರ್ಪಡೆಯಾದ ದಿನದಿಂದಲೂ ತಮಿಳುನಾಡಿನ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ವಿರೋಧಿಸುತ್ತಿದ್ದ ಅಣ್ಣಾಮಲೈ, ಈ ಎರಡೂ ಪಕ್ಷಗಳ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅರಾಜಕ ನಡೆಗಳನ್ನು ಹಲವು ಬಾರಿ ಬಯಲಿಗೆಳೆಯುವ ಯತ್ನ ಮಾಡಿದ್ದರು.
ಈ ಇಬ್ಬರೊಂದಿಗೆ ಹೊಂದಾಣಿಕೆ (ಮೈತ್ರಿ) ಮಾಡಿಕೊಂಡು ರಾಜಕೀಯ ಮಾಡಲು ಸಾಧ್ಯ ವೇ ಇಲ್ಲ. ನಾವು ಸ್ವತಂತ್ರ ಶಕ್ತಿಯಾಗಿ ಹೋರಾಟ ಮಾಡೋಣ ಎನ್ನುವುದು ಅವರ ಖಚಿತ ನಿಲುವಾಗಿತ್ತು. ದಿಲ್ಲಿ ನಾಯಕರಿಗೆ ಇದನ್ನು ಮನವರಿಕೆ ಮಾಡುವ ಯತ್ನವನ್ನೂ ಅನೇಕ ಬಾರಿ ಮಾಡಿದ್ದರು ಕೂಡ.
ಆದರೆ ದಿಲ್ಲಿ ದೊರೆಗಳ ಭಿನ್ನ ನಿಲುವು ಅಣ್ಣಾಮಲೈಗೆ ಸರಿ ಕಾಣುತ್ತಿರಲಿಲ್ಲ. ೨೦೨೪ರ ಲೋಕಸಭೆ ಚುನಾವಣೆಗೆ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳಬೇಕೆಂದು ಬಿಜೆಪಿ ಹೈಕಮಾಂಡ್ ಬಯಸಿತ್ತು. ಅದನ್ನೂ ಅಣ್ಣಾಮಲೈ ಒಪ್ಪಿಕೊಂಡಿರಲಿಲ್ಲ. ಎಐಎಡಿಎಂಕೆ ನಾಯಕರ ಸ್ವಜನಪಕ್ಷಪಾತ, ಸ್ವಾರ್ಥ ರಾಜಕಾರಣದ ವಿರುದ್ಧ ಆಂದೋಲನ ಮಾದರಿ ಯಲ್ಲಿ ಹೋರಾಟ ನಡೆಸುತ್ತಿದ್ದ ವ್ಯಕ್ತಿಗೆ ಚುನಾವಣೆ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೋ ಎಂದರೆ ಹೇಗೆ ತಾನೇ ಒಪ್ಪಿಕೊಳ್ಳುವುದು? ತಮಿಳುನಾಡು ವಿಷಯದಲ್ಲಿ ಬಿಜೆಪಿ ನಾಯಕರದ್ದು ತೋರ್ಪಡಿಕೆಯ ಸೈದ್ಧಾಂತಿಕ ಬದ್ಧತೆ ಎಂದು ಭಾಸವಾದರೆ, ಅಣ್ಣಾಮಲೈ ಮಾತ್ರ ಭಿನ್ನ ಚಿಂತನೆಯ ನಾಯಕ, ಸೈದ್ಧಾಂತಿಕವಾಗಿ ಗಟ್ಟಿಗ ಎಂಬ ಸಂದೇಶ ರವಾನೆಯಾಯಿತು.
ಮೊನ್ನೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಎಐಎಡಿಎಂಕೆ ಜತೆ ಮೈತ್ರಿ ಬೇಡ ಎಂದು ಅಣ್ಣಾಮಲೈ ವಾದಿಸಿದ್ದರು. ತಮ್ಮ ಮಾತಿಗೆ ಬೆಲೆ ಇಲ್ಲ ಎಂದಾಗ ಪಕ್ಷದ ಪ್ರಚಾರ ಕಾರ್ಯಗಳಿಂದ ದೂರ ಸರಿಯಲು ನಿರ್ಧರಿಸಿದ್ದರು. ಆದರೂ ಮನವೊಲಿಸಿ, ಚುನಾವಣೆ ಪ್ರಚಾರಕ್ಕೆ ಕರೆ ತರಲಾಯಿತು. ನಾವು ಸ್ವತಂತ್ರವಾಗಿ ಸ್ಪರ್ಧಿಸಬೇಕು ಎಂಬ ಅಣ್ಣಾಮಲೈ ಅನಿಸಿಕೆಯನ್ನು ಗೃಹ ಸಚಿವ ಅಮಿತ್ ಶಾ ಕಿವಿಗೆ ಹಾಕಿಕೊಳ್ಳಲಿಲ್ಲ ಎನ್ನುವುದು ಅಣ್ಣಾ ಮಲೈ ಬೆಂಬಲಿಗರ ವಾದ. ಎಐಎಡಿಎಂಕೆ ಸಖ್ಯವಿಲ್ಲದೆ ಬಿಜೆಪಿ ಸೀಟು ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ದಿಲ್ಲಿ ನಾಯಕರ ಲೆಕ್ಕಾಚಾರವಾಗಿತ್ತು. ಆದರೆ, ಎಐಎಡಿಎಂಕೆ ಮತ್ತು ಡಿಎಂಕೆ ಯಂತಹ ಸಾಂಪ್ರದಾಯಿಕ ಪಕ್ಷಗಳ ಸ್ವಾರ್ಥ ರಾಜಕಾರಣದಿಂದ ಬೇಸತ್ತಿದ್ದ ತಮಿಳುನಾಡು ಜನತೆ, ಚಿತ್ರನಟ ವಿಜಯ್ ಜೋಸೆಫ್ ನೇತೃತ್ವದ ಟಿವಿಕೆಯನ್ನು ಆಯ್ಕೆ ಮಾಡುವ ಮೂಲಕ ಎರಡೂ ದ್ರಾವಿಡ ಪಕ್ಷಗಳನ್ನು ತಿರಸ್ಕರಿಸಿದರು.
ಚುನಾವಣಾ ಪ್ರಚಾರ ಸಂದರ್ಭದ ಇದನ್ನು ಗ್ರಹಿಸಿದ್ದ ಅಣ್ಣಾಮಲೈ, ಟಿವಿಕೆ ಪಕ್ಷ ಜನರ ಮನಸ್ಸನ್ನು ಗೆದ್ದಿರುವ ಲಕ್ಷಣಗಳು ಕಾಣಿಸುತ್ತಿವೆ. ಅವರು ದೊಡ್ಡ ಸಂಖ್ಯೆಯಲ್ಲಿ ಸೀಟು ಗಳನ್ನು ಗೆದ್ದರೂ ಅಚ್ಚರಿ ಇಲ್ಲ ಎಂದು ಆಪ್ತರೊಂದಿಗೆ ಹೇಳಿಕೊಂಡಿದ್ದರು. ಅಂದರೆ, ಬಿಜೆಪಿಯ ಇತರೆ ನಾಯಕರಿಗಿಂತ ಅಣ್ಣಾಮಲೈ ತ.ನಾಡಿನ ನಾಡಿಮಿಡಿತ ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ದಿಲ್ಲಿ ನಾಯಕರಿಗೆ ಇದು ಅರ್ಥವಾಗಿರಲಿಲ್ಲ.
ಒಂದು ವೇಳೆ, ಅಣ್ಣಾಮಲೈಗೆ ಮತ್ತೊಮ್ಮೆ ಪೂರ್ತಿ ಅಧಿಕಾರ ನೀಡಿ, ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದರೆ, ಗೌರವಯುತ ಫಲಿತಾಂಶವನ್ನಾದರೂ ಕಂಡುಕೊಳ್ಳಬಹುದಿತ್ತು ಎಂದು ಅನೇಕರಿಗೆ ಅನಿಸಿದ್ದುಂಟು. ಆದರೆ, ರಾಷ್ಟ್ರೀಯ ಪಕ್ಷ ಎಂದ ಮೇಲೆ ರಾಷ್ಟ್ರ ನಾಯಕರು ಹೇಳಿದಂತೆ ನಡೆದುಕೊಳ್ಳಬೇಕಾಗುತ್ತದೆ.
ತಮ್ಮ ಅಸಮಾಧಾನ, ಬೇಸರವನ್ನು ಬಹಿರಂಗವಾಗಿ ತೋರ್ಪಡಿಸಿಕೊಳ್ಳದ ಅಣ್ಣಾಮಲೈ ಪಕ್ಷಕ್ಕಾಗಿ ಪ್ರಚಾರ ನಡೆಸಿದರು. ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದರು. ಬಹುಶಃ ಫಲಿತಾಂಶಕ್ಕೆ ಮುನ್ನವೇ ಅಣ್ಣಾಮಲೈ ತಮ್ಮ ಭವಿಷ್ಯದ ರಾಜಕೀಯ ಹಾದಿ ಬಗ್ಗೆ ತೀರ್ಮಾನ ಮಾಡಿದ್ದರು ಅನಿಸುತ್ತದೆ. ಒಂದು ವಾರದ ಹಿಂದೆ ಕರ್ನಾಟಕದ ತಮ್ಮ ಸ್ನೇಹಿತರೊಬ್ಬರನ್ನು ಭೇಟಿ ಮಾಡಿದ್ದಾಗಲೂ ಅವರು ಈ ವಿಷಯ ತಿಳಿಸಿದ್ದರು.
ಹೊಸ ಪಕ್ಷ ಕಟ್ಟುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಅಣ್ಣಾಮಲೈ 2020ರಲ್ಲಿ ಬಿಜೆಪಿ ಸೇರ್ಪಡೆ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಹಿರಿಯ ನಾಯಕ ಸಿ.ಟಿ. ರವಿ, ಯುವ ನಾಯಕ ದಶರಥ ವಯಲಾಯ ಅವರ ವ್ಯಾಪಕ ಶ್ರಮವಿತ್ತು.
ಅಣ್ಣಾಮಲೈ ಬಿಜೆಪಿ ಸೇರಿದ್ದು ಭಾರೀ ಅಚ್ಚರಿಗೆ ಕಾರಣವಾಗಿತ್ತಾದರೂ, ಅದು ಬಿಜೆಪಿಯ ವರ್ಚಸ್ಸು ವೃದ್ಧಿಗೆ ಕಾರಣವಾಗಿತ್ತು. ಮೇಲಾಗಿ ರಾಜಕೀಯವಾಗಿ ಬೆಳೆಯಲು ಅಣ್ಣಾ ಮಲೈಗೂ ಸೂಕ್ತ ವೇದಿಕೆಯೊಂದು ದೊರಕಿತ್ತು. ಆದರೆ, ಕಳೆದ 6 ವರ್ಷಗಳಲ್ಲಿ ತಮಿಳು ನಾಡು ಬಿಜೆಪಿಯಲ್ಲಿ ನಿರೀಕ್ಷಿಸಿದ ಮಟ್ಟಿಗೆ ಬದಲಾವಣೆ ತರಲು ಅವರಿಂದ ಸಾಧ್ಯವಾಗ ಲಿಲ್ಲ ಮತ್ತು ಕೆಲ ವಿಷಯಗಳಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವೂ ಅವರಲ್ಲಿ ಇರಲಿಲ್ಲ.
ಅಣ್ಣಾಮಲೈ ಜನಪ್ರಿಯತೆ ತಮಿಳುನಾಡಿನಾಚೆಯೂ ಇತ್ತು ಮತ್ತು ಇದೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ವಿಚಾರಗಳ ಮೇಲೆ ಅವರಿಗಿರುವ ಹಿಡಿತ ಹಾಗೂ ಜ್ಞಾನ ಬಿಜೆಪಿಯ ಅನೇಕ ನಾಯಕರಲ್ಲಿಲ್ಲ. ಶ್ರೀಸಾಮಾನ್ಯನಿಗೆ ಸಂಬಂಧಿಸಿದ ವಿಚಾರಗಳಿಂದ ಹಿಡಿದು ಕಾರ್ಪೊರೇಟ್ ಹಂತದವರೆಗಿನ ವಿಚಾರಗಳ ಬಗ್ಗೆ ಅರಳುಹುರಿದಂತೆ ಮಾತನಾಡುವ ಅಣ್ಣಾಮಲೈ ಭಾರತೀಯ ಸಮಾಜವನ್ನು ಆಳದಿಂದ ಅರ್ಥಮಾಡಿಕೊಂಡಿದ್ದಾರೆ.
ದೇಶ ಅಧಿಕಾರಶಾಹಿಯ ಆಳ-ಅಗಲ ಅರಿತುಕೊಂಡಿರುವ ಅವರು, ನಿಸ್ಸಂದೇಹವಾಗಿ ರಾಜಕೀಯ ಪಕ್ಷಗಳ ಬಹುದೊಡ್ಡ ಆಸ್ತಿ. ಬಹುಶಃ ಇದೇ ಕಾರಣಕ್ಕಾಗಿ, ಅಮಿತ್ ಶಾ ಮತ್ತು ನಿತಿನ್ ನಬಿನ್ ತ.ನಾಡು ಬಿಜೆಪಿ ರಾಜ್ಯಾಧ್ಯಕ್ಷರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸುತ್ತಿದ್ದಾರೆ. ಜಾತಿ-ಧರ್ಮಗಳನ್ನೊಳಗೊಂಡ ಸಾಂಪ್ರದಾಯಿಕ ರಾಜಕಾರಣಕ್ಕೆ ಕಟ್ಟುಬೀಳುವ ಮನಸ್ಥಿತಿಯಲ್ಲಂತೂ ಅಣ್ಣಾಮಲೈ ಇದ್ದಂತಿಲ್ಲ.
ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಹೊಸ ರಾಜಕಾರಣದ ಶೈಲಿಯನ್ನು ಅಳವಡಿಸಿ ಕೊಂಡು ಜನರನ್ನು ತಲುಪುವುದು ಅಣ್ಣಾಮಲೈ ಗುರಿ. ಬಿಜೆಪಿ ತೊರೆಯುವುದು ಅನಿವಾರ್ಯವಾದಲ್ಲಿ ಅವರು ತಮ್ಮ ‘ವಿ ದ ಲೀಡರ್ಸ್’ ಸಂಘಟನೆ ಮೂಲಕ ಜನ ಸಂಪರ್ಕ ಆರಂಭಿಸಲಿದ್ದು, ನಂತರದಲ್ಲಿ ರಾಜಕೀಯ ಪಕ್ಷ ಸ್ಥಾಪಿಸುವುದು ನಿಶ್ಚಿತ.
ಸದ್ಯ ಪೊಲಿಟಿಕಲ್ ಸ್ಟಾರ್ಟಪ್ ಟಿವಿಕೆಯನ್ನು ಅಧಿಕಾರಕ್ಕೇರಿಸಿರುವ ತಮಿಳುನಾಡಿನಲ್ಲಿ, ಅಣ್ಣಾಮಲೈ ಅವರಿಂದ ಸ್ಥಾಪನೆಯಾಗುವ ಮತ್ತೊಂದು ಪೊಲಿಟಿಕಲ್ ಸ್ಟಾರ್ಟಪ್ ಪ ರ್ಯಾಯ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬಹುದು. ಇದು ಸಾಂಪ್ರದಾಯಿಕ ದ್ರಾವಿಡ ರಾಜಕಾರಣ ಮಾಡುತ್ತಿರುವ ಎಐಎಡಿಎಂಕೆ ಮತ್ತು ಡಿಎಂಕೆ ಅಸ್ತಿತ್ವಕ್ಕೆ ಹಾನಿ ಮಾಡಲೂ ಬಹುದು.
ಬಿಜೆಪಿಯಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ, ಪ್ರತಿಭೆಗಳನ್ನು ಬಳಸಿಕೊಳ್ಳುವಲ್ಲಿ ಪಕ್ಷ ಎಡವುತ್ತಿದೆ ಅಥವಾ ಉದ್ದೇಶಪೂರ್ವಕವಾಗಿ ಪ್ರತಿಭೆಗಳನ್ನು ದೂರವಿಡಲಾಗುತ್ತಿದೆ ಎಂಬ ಆರೋಪಗಳಿಗೆ ಅಣ್ಣಾಮಲೈ ಅವರನ್ನೂ ಕೆಲವರು ಉದಾಹರಣೆಯನ್ನಾಗಿ ಕೆಲವರು ನೀಡಬಹುದು. ಆದರೆ, ರಾಜ್ಯಸಭೆ ಸದಸ್ಯತ್ವದ ಜತೆ ಕೇಂದ್ರ ಸಚಿವರನ್ನಾಗಿ ಮಾಡುತ್ತೇವೆ
ದಿಲ್ಲಿ ನಾಯಕರು ಭರವಸೆ ನೀಡಿರುವುದೂ ಉಲ್ಲೇಖಾರ್ಹ. ಹಾಗಾದರೆ, ನಿಜಕ್ಕೂ ಅಣ್ಣಾ ಮಲೈ ಮನಸ್ಸಿನನಿದೆ? ಅವರಿಗೆ ಬೇಕಿರುವುದೇನು? ಸದ್ಯಕ್ಕದು ನಿಗೂಢ. ಅಣ್ಣಾ ಮಲೈ ಹೊರ ನಡೆದರೆ ತ.ನಾಡು ಬಿಜೆಪಿಯಲ್ಲಿ ಶೂನ್ಯ ಆವರಿಸಲಿದೆ. ವಿಶ್ವಾಸಾರ್ಹ ನಾಯಕ ನೊಬ್ಬನ ನಿರ್ಗಮನ ಪಕ್ಷಕ್ಕೆ ಹಾನಿ ಮಾಡುವ ಸಾಧ್ಯತೆಯೇ ಹೆಚ್ಚು.
ಬಹುಶಃ ಅಣ್ಣಾಮಲೈ ಜತೆ ಕೈಜೋಡಿಸಲು ತ.ನಾಡು ಬಿಜೆಪಿ ಬೆಂಬಲಿಸುವ ಅನೇಕ ಮಂದಿ ಈಗಾಗಲೇ ನಿರ್ಧಾರ ಮಾಡಿರಬಹುದು. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಲೂ ಬಹುದು. ಬಿಜೆಪಿಗೆ ಅಣ್ಣಾಮಲೈ ಅನಿವಾರ್ಯವೇ ವಿನಃ, ಅಣ್ಣಾಮಲೈಗೆ ಬಿಜೆಪಿ ಅನಿವಾರ್ಯವಲ್ಲ.
ಹೀಗಾಗಿ, ಪ್ರತ್ಯೇಕ ಪಕ್ಷ ಸ್ಥಾಪನೆ ಸರಿಯಾದ ನಡೆ ಎನ್ನುವುದು ಅವರ ಅಭಿಮಾನಿಗಳ ಮಾತು. ಅಣ್ಣಾಮಲೈ ಟ್ಯಾಲೆಂಟೆಡ್ ರಾಜಕಾರಣಿ ಮತ್ತು ಮಾಸ್ಟರ್ ಸ್ಟ್ರಾಟಜಿ. 6 ವರ್ಷಗಳ ರಾಜಕೀಯ ಹೋರಾಟ, ಪಾದಯಾತ್ರೆ, ಪ್ರಚಾರ, ಸಂಘಟನಾ ಕಾರ್ಯಗಳ ಮೂಲಕ ಜನರ ನಾಡಿಮಿಡಿತವನ್ನು ಚೆನ್ನಾಗಿಯೇ ಅರ್ಥೈಸಿಕೊಂಡಿದ್ದಾರೆ. ಅವರು ಬಿಜೆಪಿಯ ಉಳಿಯು ತ್ತಾರಾ? ಪ್ರಧಾನಿ ಮೋದಿಯವರು ಅಣ್ಣಾಮಲೈ ಮನವೊಲಿಸುತ್ತಾರಾ? ಕಾದು ನೋಡೋಣ.