ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಜೆಪಿ ತೊರೆದು ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈಗೆ ವ್ಯಾಪಕ ಜನ ಬೆಂಬಲ; ಕೇವಲ 24 ಗಂಟೆಗಳಲ್ಲೇ 14 ಲಕ್ಷ ಮಂದಿ ನೋಂದಣಿ

Annamalai Launches New Movement: ಕೆ. ಅಣ್ಣಾಮಲೈ ಬಿಜೆಪಿಯನ್ನು ತೊರೆದು ತಮ್ಮದೇ ಆದ ರಾಜಕೀಯ ಆಂದೋಲನವನ್ನು ಪ್ರಾರಂಭಿಸುವ ಬಗ್ಗೆ ಘೋಷಿಸಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಸುಮಾರು 14 ಲಕ್ಷ ಜನರು ಅವರ ಹೊಸ ಆಂದೋಲನಕ್ಕೆ ಸೇರ್ಪಡೆಗೊಂಡಿದ್ದಾರೆ.

ಕೆ. ಅಣ್ಣಾಮಲೈ (ಸಂಗ್ರಹ ಚಿತ್ರ)

ಚೆನ್ನೈ, ಜೂ. 6: ಕೆ. ಅಣ್ಣಾಮಲೈ (Annamalai) ಬಿಜೆಪಿ ತೊರೆದು ತಮ್ಮದೇ ಆದ ರಾಜಕೀಯ ಆಂದೋಲನವನ್ನು ಪ್ರಾರಂಭಿಸುವ ಬಗ್ಗೆ ಘೋಷಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ಸುಮಾರು 14 ಲಕ್ಷ ಜನರು ಅವರ ಹೊಸ ಆಂದೋಲನಕ್ಕೆ ಸೇರ್ಪಡೆಗೊಂಡರು. ತಮಿಳುನಾಡು ಚುನಾವಣೆ ಸಮಯದಲ್ಲೇ ಅಣ್ಣಾಮಲೈ ಅವರಿಗೆ ಬಿಜೆಪಿಯೊಂದಿಗೆ ಬಿಕ್ಕಟ್ಟು ಉಂಟಾಗಿದೆ ಎನ್ನಲಾಗಿದೆ. ಚುನಾವಣೆ ನಂತರ ಅದು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪಕ್ಷಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ರಾಜೀನಾಮೆಯನ್ನು ಅಂಗೀಕರಿಸಿದರು.

ತಮ್ಮ ರಾಜೀನಾಮೆ ಪತ್ರದಲ್ಲಿ ಅಣ್ಣಾಮಲೈ, “18 ತಿಂಗಳಲ್ಲಿ ಪಕ್ಷದ ಉನ್ನತ ನಾಯಕತ್ವದೊಂದಿಗೆ ನಡೆಸಿದ ಅನೇಕ ಮಾತುಕತೆಗಳು ಮತ್ತು ನಾನು ವ್ಯಕ್ತಪಡಿಸಿದ ಭಿನ್ನಾಭಿಪ್ರಾಯಗಳನ್ನು ನೆನಪಿಸಿಕೊಳ್ಳುತ್ತೇನೆ. ತಮಿಳುನಾಡಿನಲ್ಲಿ ಬೆಳವಣಿಗೆ-ಕೇಂದ್ರಿತ ಹಾಗೂ ಸಾಂಸ್ಕೃತಿಕ ಮೌಲ್ಯಗಳಲ್ಲಿ ಬೇರೂರಿರುವ ರಾಜಕೀಯದ ಭವಿಷ್ಯದ ಕುರಿತು ನನ್ನ ನಿರಂತರ ಅಭಿಪ್ರಾಯಗಳಿಂದ ಉನ್ನತ ನಾಯಕತ್ವದ ಮೇಲೆ ಮತ್ತಷ್ಟು ಭಾರ ಹಾಕಲು ನಾನು ಬಯಸುವುದಿಲ್ಲ. ಪಕ್ಷದ ಹಿರಿಯ ನಾಯಕರೊಂದಿಗೆ ನಡೆಸಿದ ಚರ್ಚೆಗಳ ಬಳಿಕ, ತಮಿಳುನಾಡಿನ ವಿಚಾರದಲ್ಲಿ ನಮ್ಮ ದೃಷ್ಟಿಕೋನಗಳು ಹೊಂದಿಕೆಯಾಗುತ್ತಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ” ಎಂದು ಅವರು ತಿಳಿಸಿದ್ದರು.

ಅಣ್ಣಾಮಲೈ ನಾಗರಿಕ ಸೇವೆಗಳನ್ನು ತೊರೆದು 2020ರಲ್ಲಿ ಬಿಜೆಪಿ ಸೇರಿದರು. ಪಕ್ಷಕ್ಕೆ ಸೇರಿದ ವಾರಗಳಲ್ಲಿ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಕೇವಲ ಒಂದು ವರ್ಷದ ನಂತರ, 37ನೇ ವಯಸ್ಸಿನಲ್ಲಿ ರಾಜ್ಯ ಘಟಕದ ಮುಖ್ಯಸ್ಥರಾಗಿ ಬಡ್ತಿ ನೀಡಲಾಯಿತು.

ರಾಜ್ಯದಲ್ಲಿನ ಕಾಂಗ್ರೆಸ್‌ ಸ್ಥಿತಿ ತಮಿಳುನಾಡಿನಲ್ಲಿ ಬಿಜೆಪಿಯದ್ದು; ಅಣ್ಣಾಮಲೈ ಬೆನ್ನಲ್ಲೇ ರಾಜೀನಾಮೆ ಘೋಷಿಸಿದ ಪ್ರಮುಖ ನಾಯಕರು

ಸಾಮಾನ್ಯ ವ್ಯಕ್ತಿಯೊಬ್ಬರು ರಾಜಕೀಯಕ್ಕೆ ಪ್ರವೇಶಿಸುವುದೇ ದೊಡ್ಡ ವಿಷಯ ಎಂದು ಅವರು ಹೇಳಿದರು. ತಮ್ಮ ಹೊಸ ರಾಜಕೀಯ ಸಂಘಟನೆಯನ್ನು ಅವರು ಸ್ಪಷ್ಟ, ಸೈದ್ಧಾಂತಿಕ ದೃಷ್ಟಿಕೋನ ಹೊಂದಿರುವ ಸಾಮಾನ್ಯ ಜನರ ರಾಜಕೀಯ ಪಕ್ಷ ಎಂದು ಬಣ್ಣಿಸಿದರು. ವ್ಯಕ್ತಿ ಪೂಜೆ ಮತ್ತು ಕುಟುಂಬ ರಾಜಕೀಯಕ್ಕೆ ಅಂತ್ಯ ಹಾಡಲು ಯುವಜನತೆ ತಮ್ಮೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು. ನಾವು ಬದಲಾವಣೆಯ ರಾಜಕೀಯವನ್ನು ಕಟ್ಟುತ್ತಿದ್ದೇವೆ. ಮುಂದಿನ ಪೀಳಿಗೆಗಳಿಗಾಗಿ ಭದ್ರ ಅಡಿಪಾಯ ಹಾಕುತ್ತಿದ್ದೇವೆ ಎಂದು ಹೇಳಿದರು.

ಈ ಚಳವಳಿಯನ್ನು ಹಂತ ಹಂತವಾಗಿ ನಿರ್ಮಿಸಲು ತಾಳ್ಮೆ ಮತ್ತು ಸಂಯಮ ಅಗತ್ಯವಿದೆ ಎಂದು ಅಣ್ಣಾಮಲೈ ಹೇಳಿದರು. ಈಗ ನಮ್ಮ ಗುರಿಗಳು ಇನ್ನಷ್ಟು ದೊಡ್ಡದಾಗಿವೆ. ನಿಜವಾದ ಬದಲಾವಣೆಯನ್ನು ತರಬಲ್ಲ ರಾಜಕೀಯದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

‘ನಾವು ನಾಯಕರು’ ಎಂಬ ಶೀರ್ಷಿಕೆಯ ಆಂದೋಲನದ ವೆಬ್‌ಸೈಟ್‍ಗೆ ಕೇವಲ 24 ಗಂಟೆಗಳಲ್ಲಿ 14 ಲಕ್ಷ ಜನರು ನೋಂದಣಿಯಾಗಿದ್ದಾರೆ. ತಮ್ಮ ಆಂದೋಲನವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಸ್ಪರ್ಧಿಸಲಿದೆ ಎಂದು ಅಣ್ಣಾಮಲೈ ದೃಢಪಡಿಸಿದರು. ಭವಿಷ್ಯಕ್ಕಾಗಿ ಅನೇಕ ಹೊಸ ನಾಯಕರನ್ನು ಸಿದ್ಧಪಡಿಸಲು ಸಹ ಇದು ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.