ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೋಕಸಭಾ ಚುನಾವಣೆ ತಯಾರಿ, ಬಿಜೆಪಿ ತೊರೆದ ತಕ್ಷಣವೇ ರಾಜಕೀಯ ಚಳುವಳಿ ಪ್ರಾರಂಭಿಸಿದ ಅಣ್ಣಾಮಲೈ

ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆ. ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ರಾಜಕೀಯ ಚಳುವಳಿಗೆ ಕರೆ ನೀಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಇದು ತಮ್ಮ ಸಾರ್ವಜನಿಕ ಜೀವನ ಮತ್ತು ರಾಜಕೀಯ ಪ್ರಯಾಣದ ಮುಂದಿನ ಹಂತ ಎಂದು ಹೇಳಿ, ಯುವಕರು ಮತ್ತು ಸಾಮಾನ್ಯ ಜನರು ತಮ್ಮೊಂದಿಗೆ ಸೇರುವಂತೆ ಕರೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯತ್ತ ದೃಷ್ಟಿ ನೆಟ್ಟ ಅಣ್ಣಾಮಲೈ?

ಸಂಗ್ರಹ ಚಿತ್ರ -

ನವದೆಹಲಿ: ಭಾರತೀಯ ಜನತಾ ಪಕ್ಷಕ್ಕೆ (BJP) ರಾಜೀನಾಮೆ ನೀಡಿದ ಬೆನ್ನಲ್ಲೇ ಕೆ. ಅಣ್ಣಾಮಲೈ (K. Annamalai) ಅವರು ತಮಿಳುನಾಡಿನಲ್ಲಿ (tamilnadu) ರಾಜಕೀಯ ಚಳುವಳಿಗೆ ಕರೆ ನೀಡಿದ್ದಾರೆ. ಇದು ತಮ್ಮ ಸಾರ್ವಜನಿಕ ಜೀವನ ಮತ್ತು ರಾಜಕೀಯ ಪ್ರಯಾಣದ ಮುಂದಿನ ಹಂತ ಎಂದು ಬಣ್ಣಿಸಿರುವ ಅವರು ಯುವಕರು ಮತ್ತು ಸಾಮಾನ್ಯ ಜನರು ತಮ್ಮೊಂದಿಗೆ ಸೇರುವಂತೆ ಕರೆ ನೀಡಿದ್ದಾರೆ. ದೆಹಲಿಯಲ್ಲಿ (delhi) ಶುಕ್ರವಾರ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು.

ತಮಿಳುನಾಡಿನ ರಾಜಕೀಯದಲ್ಲಿ ಬಿಜೆಪಿಯ ಉತ್ತಮ ಮುಖವಾಗಿ ಗುರುತಿಸಿಕೊಂಡಿದ್ದ ಅಣ್ಣಾಮಲೈ ಅವರು ಬಿಜೆಪಿ ತೊರೆದ ಮರುಕ್ಷಣವೇ ತಮ್ಮ ರಾಜಕೀಯ ಚಳುವಳಿಯನ್ನು ಪ್ರಾರಂಭಿಸಿದ್ದಾರೆ. ಇದಕ್ಕಾಗಿ ಅವರು ಮೊದಲು ತಮ್ಮ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ವಿವರಗಳನ್ನು ಬದಲಾಯಿಸಿದರು.

ಅಣ್ಣಾಮಲೈ ರಾಜೀನಾಮೆ ಅಂಗೀಕರಿಸಿದ ಬಿಜೆಪಿ; ಇಂದೇ ಹೊಸ ಪಕ್ಷದ ಘೋಷಣೆ ಮಾಡ್ತಾರಾ ಸಿಂಗಂ?

ಪೊಲೀಸ್ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ಬಳಿಕ ರಾಜಕಾರಣಿಯಾಗಿ ಬಿಜೆಪಿ ಸೇರಿದರು. ಕಳೆದ ವಾರದಿಂದ ಅವರ ರಾಜೀನಾಮೆ ಸುದ್ದಿ ಎದ್ದಿದ್ದು, ಇದು ಶುಕ್ರವಾರ ದೃಢಪಟ್ಟಿದೆ. ದೆಹಲಿಯಲ್ಲಿ ಬಿಜೆಪಿಯ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿ, ಬಿಜೆಪಿಯೊಂದಿಗೆ ಸೌಹಾರ್ದಯುತವಾಗಿ ಬೇರ್ಪಡಲು ನಿರ್ಧರಿಸಿದರು.

ರಾಜೀನಾಮೆ ಬಳಿಕ ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಭವಿಷ್ಯದ ರಾಜಕೀಯ ಯೋಜನೆಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ತಾವು ಹೊಸ ರಾಜಕೀಯ ಚಳುವಳಿಯನ್ನು ಪ್ರಾರಂಭಿಸುವುದಾಗಿ ಹೇಳಿದ ಅವರು, ತಮ್ಮ ಸಾರ್ವಜನಿಕ ಜೀವನ ಮತ್ತು ರಾಜಕೀಯ ಪ್ರಯಾಣದ ಮುಂದಿನ ಹಂತ ಇದು ಎಂದು ಹೇಳಿದರು.



ರಾಜಕೀಯಕ್ಕೆ ಸಾಮಾನ್ಯ ವ್ಯಕ್ತಿ ಪ್ರವೇಶಿಸುವುದು ಒಂದು ದೊಡ್ಡ ವಿಷಯ. ಹೊಸ, ಜನ ಕೇಂದ್ರಿತ ರಾಜಕೀಯವನ್ನು ತರುವುದಾಗಿ ಭರವಸೆ ನೀಡಿದ ಅವರು ರಾಜಕೀಯವನ್ನು ಜನರ ಬಳಿಗೆ ಕೊಂಡೊಯ್ಯಲು ಶಾಶ್ವತ ಶಾಸಕರು ಮತ್ತು ಸಂಸದರ ಸಂಸ್ಕೃತಿಯನ್ನು ಕೊನೆಗೊಳಿಸಲು ಬಯಸುವುದಾಗಿ ತಿಳಿಸಿದ್ದಾರೆ.

ತಮ್ಮ ಮುಂದಿನ ಯೋಜನೆಗಳ ಬಗ್ಗೆ ಬಣ್ಣಿಸಿರುವ ಅವರು ತಮ್ಮ ಪಕ್ಷವು ತಮಿಳುನಾಡಿನಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯಕ್ಕಾಗಿ ಅನೇಕ ಹೊಸ ನಾಯಕರನ್ನು ಸಿದ್ಧಪಡಿಸುತ್ತದೆ ಎಂದು ಹೇಳಿದರು.

ಸಾಂಪ್ರದಾಯಿಕ ಪಕ್ಷಗಳಿಂದಲ್ಲ ಸಾಮಾನ್ಯ ಜನರಿಂದ ನಡೆಸಲ್ಪಡುವ ಚಳುವಳಿಯನ್ನು ತಾವು ನಡೆಸುವುದಾಗಿ ಹೇಳಿದ ಅವರು ಇದಕ್ಕಾಗಿ ತಾಳ್ಮೆ ಮತ್ತು ಶಾಂತಿ ಅಗತ್ಯವಿದೆ. ಪಂಥೀಯ ರಾಜಕೀಯ ಮತ್ತು ರಾಜವಂಶಗಳನ್ನು ಕೊನೆಗೊಳಿಸಲು ಯುವಕರು ತಮ್ಮೊಂದಿಗೆ ಸೇರಬೇಕೆಂದು ಕರೆ ನೀಡಿದರು.

ನಾವು ಬದಲಾವಣೆಯ ರಾಜಕೀಯವನ್ನು ನಿರ್ಮಿಸುತ್ತಿದ್ದೇವೆ, ಭವಿಷ್ಯದ ಪೀಳಿಗೆಗೆ ಅಡಿಪಾಯ ಹಾಕುತ್ತಿದ್ದೇವೆ. ದಯವಿಟ್ಟು ನನ್ನೊಂದಿಗೆ ಸೇರಿ, ನನ್ನನ್ನು ನಂಬಿ ಎಂದು ಹೇಳಿರುವ ಅವರು, ನಮ್ಮ ಗುರಿಗಳು ಈಗ ತುಂಬಾ ದೊಡ್ಡದಾಗಿವೆ. ನಿಜವಾದ ಬದಲಾವಣೆಯನ್ನು ತರಬಲ್ಲ ರಾಜಕೀಯದ ಅವಶ್ಯಕತೆಯಿದೆ ಎಂದು ತಿಳಿಸಿದರು.

ದೆಹಲಿಯಲ್ಲಿ ಅಮಿತ್‌ ಶಾ ಜತೆ ಅಣ್ಣಾಮಲೈ ಮಾತುಕತೆ; ರಾಜೀನಾಮೆ ಬಗ್ಗೆ ಅಂತಿಮ ತೀರ್ಮಾನ ಏನು?

ರಾಜಕೀಯವು ವ್ಯಕ್ತಿಗಳ ಸುತ್ತ ಕೇಂದ್ರೀಕೃತವಾಗಿರುವುದನ್ನು ಬಿಟ್ಟು ಸಾಮಾನ್ಯ ಜನರ ಮೇಲೆ ಕೇಂದ್ರೀಕರಿಸಬೇಕು. ಪಕ್ಷದ ಸಿದ್ಧಾಂತಗಳು ಭವಿಷ್ಯದ ಪೀಳಿಗೆಗೆ ಹೊಂದಿಕೊಳ್ಳಬೇಕು ಎಂದು ಹೇಳಿದ ಅವರು ಬಿಜೆಪಿಯೊಂದಿಗಿನ ತಮ್ಮ ಭಿನ್ನಾಭಿಪ್ರಾಯಗಳ ಬಗ್ಗೆಯೂ ತಿಳಿಸಿದ್ದಾರೆ.

ಆರು ವರ್ಷಗಳ ಕಾಲ ಬಿಜೆಪಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಬಿಜೆಪಿಗೆ ಧನ್ಯವಾದ ಸಲ್ಲಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಿತರಾಗಿ ಪಕ್ಷಕ್ಕೆ ಸೇರಿದ್ದೇನೆ. ಇದರಿಂದ ಸಾಕಷ್ಟು ಅನುಭವವಾಗಿದೆ. ಕಲಿಕೆಗೂ ಅವಕಾಶ ಸಿಕ್ಕಿದೆ ಎಂದರು.