ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಜೆನೆರಿಕ್ ಔಷಧಿಗಳ (generic drugs) ಮೇಲೆ ಶೇಕಡಾ 200ರಷ್ಟು ಸುಂಕವನ್ನು ಘೋಷಿಸಿದ್ದಾರೆ. ಇದು ಈಗ ಭಾರತದ ಮೇಲೆ ಬಹುದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಯಾಕೆಂದರೆ ವಿಶ್ವದ ಅತಿ ದೊಡ್ಡ ಜೆನೆರಿಕ್ ಔಷಧಿಗಳ ಪೂರೈಕೆದಾರ ಮತ್ತು ಅಮೆರಿಕಕ್ಕೆ ಔಷಧಗಳ ಅತಿ ದೊಡ್ಡ ರಫ್ತುದಾರ ರಾಷ್ಟ್ರಗಳಲ್ಲಿ ಭಾರತ (India) ಒಂದಾಗಿದೆ. ಅಮೆರಿಕ ವಿಧಿಸಿರುವ ಹೊಸ ಸುಂಕ (New tariffs) ನೀತಿಯಡಿಯಲ್ಲಿ 2026ರ ಆಗಸ್ಟ್ 1ರಿಂದ ಆಮದು ಮಾಡಿಕೊಂಡ ಜೆನೆರಿಕ್ ಔಷಧಗಳಿಗೆ ಎರಡು ವರ್ಷಗಳ ಕಾಲ ಸುಂಕವಿರುವುದಿಲ್ಲ. 2028ರ ಆಗಸ್ಟ್ 1ರಿಂದ ಒಂದು ವರ್ಷದವರೆಗೆ ಶೇಕಡಾ 100 ಮತ್ತು ಬಳಿಕ ಶೇಕಡಾ 200ರಷ್ಟು ಸುಂಕ ಅನ್ವಯವಾಗಲಿದೆ ಎಂದು ತಿಳಿಸಿದೆ.
ಜೆನೆರಿಕ್ ಔಷಧಗಳ ಮೇಲೆ ಸುಂಕ ವಿಧಿಸಿರುವುದನ್ನು ಬುಧವಾರ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್ ಘೋಷಿಸಿರುವ ಡೊನಾಲ್ಡ್ ಟ್ರಂಪ್, ಅಮೆರಿಕದಲ್ಲಿ ಔಷಧ ಕಂಪನಿಗಳು ಔಷಧ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸುವುದನ್ನು ಪ್ರೋತ್ಸಾಹಿಸಲು ಸುಂಕ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ದೆಹಲಿಯ ಕನ್ನಾಟ್ ಪ್ರದೇಶದಲ್ಲಿ ತಡರಾತ್ರಿ ಘರ್ಷಣೆ: ಪೊಲೀಸರ ಮೇಲೆ ಕಲ್ಲು ತೂರಾಟ
ಅಮೆರಿಕದಲ್ಲಿ ಔಷಧ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಅಮೆರಿಕ ತಂದಿರುವ ಹೊಸ ಸುಂಕ ನೀತಿಯು ಭಾರತದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ. ಜಾಗತಿಕ ವ್ಯಾಪಾರ ಸಂಶೋಧನಾ ವರದಿ ಪ್ರಕಾರ 2025ರಲ್ಲಿ ಭಾರತ ಸುಮಾರು 9.7 ಶತಕೋಟಿ ಡಾಲರ್ ಮೌಲ್ಯದ ಔಷಧಗಳನ್ನು ಅಮೆರಿಕಕ್ಕೆ ರಫ್ತು ಮಾಡಿದೆ. ಇದು ಭಾರತದ ಒಟ್ಟು ಜಾಗತಿಕ ಔಷಧ ರಫ್ತಿನ 25.8 ಶತಕೋಟಿ ಡಾಲರ್ ಅಂದರೆ ಶೇಕಡಾ 38ರಷ್ಟಾಗಿದೆ.
ಭಾರತ ಹೆಚ್ಚಾಗಿ ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಸಾಂಕ್ರಾಮಿಕ ರೋಗಗಳು ಮತ್ತು ಮಾನಸಿಕ ಆರೋಗ್ಯ ತೊಂದರೆಗಳಿಗೆ ನೀಡಲಾಗುವ ಭಾರತೀಯ ಜೆನೆರಿಕ್ ಔಷಧಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತದೆ. ಈ ಔಷಧಗಳ ಉತ್ಪಾದನೆ ಅಮೆರಿಕದಲ್ಲೇ ಪ್ರಾರಂಭವಾದರೆ ಇದು ಭಾರತಕ್ಕೆ ಬಹುದೊಡ್ಡ ಹೊಡೆತವೆನ್ನಬಹುದು.
ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಔಷಧ ಕಂಪನಿಗಳು ಅಮೆರಿಕದಲ್ಲಿ ಔಷಧ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಅಳವಡಿಸಲಾಗಿರುವ ಹೊಸ ನೀತಿಯ ಮುಖ್ಯ ಉದ್ದೇಶ ಯುನೈಟೆಡ್ ಸ್ಟೇಟ್ಸ್‌ನ ಜನರನ್ನು ರಕ್ಷಿಸುವುದಾಗಿದೆ. ಪೇಟೆಂಟ್ ಪಡೆದ ಔಷಧಗಳಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ನೀತಿಯು ಬದಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಹೆಚ್ಚಿನ ಆಮದು ಸುಂಕಗಳ ಮೂಲಕ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುವ ಡೊನಾಲ್ಡ್ ಟ್ರಂಪ್, ಅಮೆರಿಕ ಫಸ್ಟ್ ವ್ಯಾಪಾರ ಕಾರ್ಯಸೂಚಿಯಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ಇದರಿಂದ ಜಾಗತಿಕ ಔಷಧ ಪೂರೈಕೆ ಸರಪಳಿಗಳಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇದೆ. ಇದು ಭಾರತೀಯ ಔಷಧ ತಯಾರಕರಿಗೆ ಒಂದು ಹೊಸ ಸವಾಲು ಎನ್ನುತ್ತಾರೆ ಮಾರುಕಟ್ಟೆ ತಜ್ಞರು.