Heatwave Alert: ಏಪ್ರಿಲ್-ಜೂನ್ ಅವಧಿಯಲ್ಲಿ ತಾಪಮಾನ ಇನ್ನಷ್ಟು ಹೆಚ್ಚಲಿದೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ
India Meteorological Department: ದೇಶಾದ್ಯಂತ ಬಿಸಿಲ ಬೇಗೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪ್ರಖರತೆ ಇನ್ನಷ್ಟು ಜಾಸ್ತಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕದ ಕೆಲವು ಪ್ರದೇಶಗಳು ಸೇರಿದಂತೆ ವಿವಿಧ ಭಾಗಗಳಲ್ಲಿ ಉಷ್ಣಮಾರುತ ಸಾಧ್ಯತೆ ಇದೆ ಎಂದು ತಿಳಿಸಿದೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ದೇಶಾದ್ಯಂತ ಬಿಸಿಲ ಬೇಗೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪ್ರಖರತೆ ಇನ್ನಷ್ಟು ಜಾಸ್ತಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department -IMD) ಎಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕದ ಕೆಲವು ಪ್ರದೇಶಗಳು ಸೇರಿದಂತೆ ರಾಜಸ್ಥಾನ, ಗುಜರಾತ್, ಹರಿಯಾಣ, ಪಂಜಾಬ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಢ, ತೆಲಂಗಾಣ, ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಏಪ್ರಿಲ್‌ನಿಂದ ಜೂನ್ ತನಕ ಉಷ್ಣಮಾರುತ (Heatwave Alert) ಬೀಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಏಪ್ರಿಲ್-ಜೂನ್ ತನಕ ವಾತಾವರಣ ಸಾಮಾನ್ಯಕ್ಕಿಂತ ಹೆಚ್ಚು ತಾಪದಿಂದ ಕೂಡಿರಲಿದೆ ಎಂದು ಐಎಂಡಿ ಹೇಳಿದೆ. ʼʼಮುಂದಿನ ದಿನಗಳಲ್ಲಿ ಪಶ್ಚಿಮ ಮತ್ತು ಪೂರ್ವ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಕಂಡು ಬರಲಿದೆ. ಹೆಚ್ಚಿನ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಅಧಿಕವಾಗಿರಲಿದೆʼʼ ಎಂದು ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ (Mrutyunjay Mohapatra) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ:
Delhi | "We are not expecting El Niño conditions during the monsoon season. April-June to be hotter than usual, more heatwave days likely in many states," said India Meteorological Department (IMD) DG Dr Mrutyunjay Mohapatra during a virtual press briefing today
— ANI (@ANI) March 31, 2025
(file pic) pic.twitter.com/EI6GRl9XM9
ಈ ಸುದ್ದಿಯನ್ನೂ ಓದಿ: Karnataka Weather: ಉತ್ತರ ಕರ್ನಾಟಕದಲ್ಲಿ ಮುಂದಿನ 2 ದಿನ ಬಿರುಗಾಳಿ ಸಹಿತ ಆಲಿಕಲ್ಲು ಮಳೆ; ಆರೆಂಜ್ ಅಲರ್ಟ್ ಘೋಷಣೆ
"ಏಪ್ರಿಲ್‌ನಿಂದ ಜೂನ್‌ವರೆಗೆ ಉತ್ತರ ಮತ್ತು ಪೂರ್ವ ಭಾರತದ ಹೆಚ್ಚಿನ ಭಾಗಗಳು, ಮಧ್ಯ ಭಾರತ ಮತ್ತು ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಲಿದೆʼʼ ಎಂದು ವಿವರಿಸಿದ್ದಾರೆ.
ಉಷ್ಣಮಾರುತ ಹೆಚ್ಚಳ
ಸಾಮಾನ್ಯವಾಗಿ ದೇಶದಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ 4ರಿಂದ 7 ಉಷ್ಣಮಾರುತ ದಿನಗಳು ಕಂಡು ಬರುತ್ತವೆ. ಈ ಬಾರಿ ಅದು ಮತ್ತುಷ್ಟು ಹೆಚ್ಚುವ ಸಾಧ್ಯತೆ ಇದೆ. ʼʼಏಪ್ರಿಲ್‌ನಲ್ಲಿ ಭಾರತದ ಹೆಚ್ಚಿನ ಭಾಗಗಳು ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಲಿವೆ. ಆದಾಗ್ಯೂ ದಕ್ಷಿಣ ಮತ್ತು ವಾಯುವ್ಯ ಪ್ರದೇಶಗಳಲ್ಲಿನ ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ತಾಪಮಾನ ಇರಲಿದೆ. ವಾಯವ್ಯ ಮತ್ತು ಈಶಾನ್ಯದ ಕೆಲವು ಸ್ಥಳಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆʼʼ ಎಂದು ಮೊಹಾಪಾತ್ರ ಹೇಳಿದ್ದಾರೆ.
ಈ ಬೇಸಗೆ ಋತುವಿನಲ್ಲಿ ದೇಶವು ಶೇ. 9ರಿಂದ 10ರಷ್ಟು ಹೆಚ್ಚಿನ ವಿದ್ಯುತ್ ಬೇಡಿಕೆ ಪೂರೈಸಲು ಸಿದ್ಧವಾಗಬೇಕು ಎಂದು ತಜ್ಞರು ಕರೆ ನೀಡಿದ್ದಾರೆ. ಕಳೆದ ವರ್ಷ ಮೇ 30ರಂದು ವಿದ್ಯುತ್ ಬೇಡಿಕೆ 250 ಗಿಗಾವ್ಯಾಟ್ (ಜಿಡಬ್ಲ್ಯು) ದಾಟಿತ್ತು. ಇದು ಅಂದಾಜಿಗಿಂತ ಶೇ. 6.3ರಷ್ಟು ಹೆಚ್ಚಾಗಿತ್ತು. ಈ ವರ್ಷ ಬೇಡಿಕೆ ಮತ್ತಷ್ಟು ಅದಿಕವಾಗುವ ಸಾಧ್ಯತೆ ಇದೆ.
ಎಚ್ಚರವಹಿಸಿ
ಮುಂದಿನ ದಿನಗಳಲ್ಲಿ ವಾತಾವರಣದ ಉಷ್ಣಾಂಶ ಹೆಚ್ಚುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ. ಬಿಸಿಲಾಘಾತದಿಂದ ರಕ್ಷಿಸಿಕೊಳ್ಳಲು ಬೆಳಗ್ಗೆ 11ರಿಂದ ಅಪರಾಹ್ನ 4ರ ತನಕ ಅನಿವಾರ್ಯವಲ್ಲದಿದ್ದರೆ ಮನೆಯಿಂದ ಹೊರಗಿಳಿಯುವುದನ್ನು ತಪ್ಪಿಸಬೇಕು. ಸಾಕಷ್ಟು ನೀರು, ತಾಜಾ ಹಣ್ಣಿನ ರಸ ಸೇವಿಸಬೇಕು. ಪ್ರಯಾಣ ಮಾಡುವಾಗ ನೀರು ಜತೆಯಲ್ಲೇ ಒಯ್ಯಬೇಕು. ಆದಷ್ಟು ಮಸಾಲೆಯುಕ್ತ ಆಹಾರ ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.