Arya Samaj 150th anniversary: ಆರ್ಯ ಸಮಾಜದ 150ನೇ ವರ್ಷಾಚರಣೆಗೆ ವಿಶೇಷ ನಾಣ್ಯ ಬಿಡುಗಡೆ
Rashtriya Swayamsevak Sangh: ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾರತ ಸರ್ಕಾರ ಇತ್ತೀಚಿಗೆ 100 ರೂ.ಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ದಯಾನಂದ ಸರಸ್ವತಿ ಬಾಂಬೆಯಲ್ಲಿ ಸ್ಥಾಪಿಸಿದ್ದ ಆರ್ಯ ಸಮಾಜದ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ 150 ರೂ. ಗಳ ವಿಶೇಷ ನಾಣ್ಯ ಬಿಡುಗಡೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಆರ್ಯ ಸಮಾಜದ 150ನೇ ವಾರ್ಷಿಕೋತ್ಸವದ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
 
                                -
 ವಿದ್ಯಾ ಇರ್ವತ್ತೂರು
                            
                                Oct 31, 2025 3:55 PM
                                
                                ವಿದ್ಯಾ ಇರ್ವತ್ತೂರು
                            
                                Oct 31, 2025 3:55 PM
                            ನವದೆಹಲಿ: ಇತ್ತೀಚೆಗಷ್ಟೇ ಭಾರತೀಯ ನಾಣ್ಯಗಳಲ್ಲಿ (Special Coin) ಆರ್‌ಎಸ್‌ಎಸ್‌ನ 100 ವರ್ಷಗಳನ್ನು (Rashtriya Swayamsevak Sangh) ಗುರುತಿಸಿದ್ದ ಭಾರತ ಸರ್ಕಾರ ಇದೀಗ ಆರ್ಯ ಸಮಾಜದ 150ನೇ ವರ್ಷಾಚರಣೆ (Arya Samaj 150th anniversary) ಹಿನ್ನೆಲೆಯಲ್ಲಿ ಭಾರತೀಯ ಕರೆನ್ಸಿಯಲ್ಲಿ ಗಾಯತ್ರಿ ಮಂತ್ರವನ್ನು (Gayatri Mantra On coin) ಮುದ್ರಿಸಲು ಚಿಂತನೆ ನಡೆಸಿದೆ. ಭಾರತೀಯ ಕರೆನ್ಸಿಯಲ್ಲಿ ಮೊದಲ ಬಾರಿಗೆ ದೇವನಾಗರಿ ಲಿಪಿಯಲ್ಲಿ ಗಾಯತ್ರಿ ಮಂತ್ರವನ್ನು ಕೆತ್ತಲಾಗಿದ್ದು, ಇದನ್ನು ಆರ್ಯ ಸಮಾಜದ 150ನೇ ವಾರ್ಷಿಕೋತ್ಸವದ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾರತ ಸರ್ಕಾರ ನಾಣ್ಯ ಮತ್ತು ಅಂಚೆಚೀಟಿಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಆರ್‌ಎಸ್‌ಎಸ್‌ನ ಸೇವೆ, ಏಕತೆ ಮತ್ತು ಸಮರ್ಪಣೆಯ ಶತಮಾನೋತ್ಸವದ ಗೌರವಾರ್ಥವಾಗಿ ಈ ನಾಣ್ಯಗಳು ಮತ್ತು ಅಂಚೆಚೀಟಿಗಳನ್ನು ಬಿಡುಗಡೆ ಮಾಡಿರುವುದಾಗಿ ಹೇಳಿರುವ ಸರ್ಕಾರ ಈ ನಾಣ್ಯಗಳಲ್ಲಿ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರವನ್ನು ಚಿತ್ರಿಸಿತ್ತು.
ಇದನ್ನೂ ಓದಿ: India launches Trishul: ಮತ್ತೊಂದು ಬಿಗ್ ಆಪರೇಷನ್‌ಗೆ ಭಾರತ ರೆಡಿ; ಪಾಕ್ ಗಡಿಯ ಬಳಿ ʼತ್ರಿಶೂಲ್ʼ ಸಮರಾಭ್ಯಾಸ ಶುರು
ಇದೀಗ ಆರ್ಯ ಸಮಾಜದ 150ನೇ ವರ್ಷವನ್ನು ಗುರುತಿಸಲು ನರೇಂದ್ರ ಮೋದಿ ಸರ್ಕಾರ ವಿಶೇಷ ನಾಣ್ಯ ಬಿಡುಗಡೆ ಮಾಡಲಿದೆ. ಇದರಲ್ಲಿ ಇದೇ ಮೊದಲ ಬಾರಿಗೆ ದೇವನಾಗರಿ ಲಿಪಿಯಲ್ಲಿ ಗಾಯತ್ರಿ ಮಂತ್ರವನ್ನು ಕೆತ್ತಲಾಗಿದೆ.
1875ರ ಏಪ್ರಿಲ್‌ನಲ್ಲಿ ಆರ್ಯ ಸಮಾಜವನ್ನು ದಯಾನಂದ ಸರಸ್ವತಿ ಮುಂಬೈಯಲ್ಲಿ ಸ್ಥಾಪಿಸಿದ್ದರು. ವಿಶೇಷ ನಾಣ್ಯ ಬಿಡುಗಡೆ ಕುರಿತು ಗುರುವಾರ ಸರ್ಕಾರ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಆರ್ಯ ಸಮಾಜದ 150 ವರ್ಷಗಳ ಆಚರಣೆಯ ಸ್ಮರಣಾರ್ಥವಾಗಿ 150 ರೂಪಾಯಿಗಳ ನಾಣ್ಯವನ್ನು ಮುದ್ರಿಸಲಾಗುವುದು ಎಂದು ತಿಳಿಸಿದೆ.
ನಾಣ್ಯದ ವಿಶೇಷತೆ ಏನು?
ನಾಣ್ಯದ ಮುಂಭಾಗದ ಮಧ್ಯದಲ್ಲಿ ಅಶೋಕ ಸ್ತಂಭದ ಸಿಂಹದ ಮುದ್ರೆ ಇದೆ. ಕೆಳಗೆ 'ಸತ್ಯಮೇವ ಜಯತೆ' ಎಂದು ಬರೆಯಲಾಗುತ್ತದೆ. ಎಡ ಬದಿಯಲ್ಲಿ 'ಭಾರತ್' ಪದವನ್ನು ದೇವನಾಗರಿ ಲಿಪಿಯಲ್ಲಿ ಮತ್ತು ಬಲ ಬದಿಯಲ್ಲಿ 'ಇಂಡಿಯಾ' ಅನ್ನು ಇಂಗ್ಲಿಷ್‌ನಲ್ಲಿ ಕೆತ್ತಲಾಗುತ್ತದೆ.
ನಾಣ್ಯದ ರೂಪಾಯಿ ಚಿಹ್ನೆ '₹' ಮತ್ತು ಮೌಲ್ಯ '150' ಅನ್ನು ಸಿಂಹದ ಗುರುತಿನ ಕೆಳಗೆ ಮುದ್ರಿಸಲಾಗುತ್ತದೆ. ನಾಣ್ಯದ ಹಿಂಭಾಗದ ಮಧ್ಯದಲ್ಲಿ ಆರ್ಯ ಸಮಾಜದ 150 ವರ್ಷದ ಲೋಗೋ ಇದೆ. ಮೇಲಿನ ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಶಾಸನ ಮತ್ತು ಕೆಳಗಿನ ಭಾಗದಲ್ಲಿ 'ARYA SAMAJ 150 YEAR CELEBRATION' ಎಂದು ಕೆತ್ತಲಾಗಿದೆ. ಲೋಗೋದ ಎಡಭಾಗದಲ್ಲಿ ‘1875’ ಮತ್ತು ಬಲಭಾಗದಲ್ಲಿ ‘2025’ ಎಂದು ವರ್ಷವನ್ನು ಉಲ್ಲೇಖಿಸಲಾಗಿದೆ.
ಇದರೊಂದಿಗೆ ದೇವನಾಗರಿ ಲಿಪಿಯಲ್ಲಿ ಗಾಯತ್ರಿ ಮಂತ್ರದ ಮೊದಲಾರ್ಧವನ್ನು ಹಿಂದಿ ಪಠ್ಯದ ಕೆಳಗೆ, ದ್ವಿತೀಯಾರ್ಧವನ್ನು ಇಂಗ್ಲಿಷ್ ಪಠ್ಯದ ಮೇಲೆ ಮುದ್ರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯ 100 ವರ್ಷಗಳ ವಿಶೇಷ ನಾಣ್ಯ ಮತ್ತು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ್ದರು. ಬಳಿಕ ಮಾತನಾಡಿದ ಅವರು, ಇದು ರಾಷ್ಟ್ರಕ್ಕೆ ಆರ್‌ಎಸ್‌ಎಸ್‌ನ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದರು. ಶತಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ದೀರ್ಘಕಾಲದ ಬದ್ಧತೆಗಾಗಿ ಶ್ಲಾಘಿಸಿದ್ದರು.
 
            