ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Supreme Court: ವೃದ್ಧೆಯ ಅತ್ಯಾಚಾರ, ಕೊಲೆ: ಸರಿಯಾದ ಸಾಕ್ಷಿ ಇಲ್ಲ ಎಂದ ಸುಪ್ರೀಂ ಕೋರ್ಟ್, ಆರೋಪಿ ಖುಲಾಸೆ

ಕೊಯಮತ್ತೂರಿನಲ್ಲಿ 2016ರಲ್ಲಿ ನಡೆದಿದ್ದ 85 ವರ್ಷದ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸರಿಯಾದ ಸಾಕ್ಷಿ ಇಲ್ಲವೆಂದು ಸುಪ್ರೀಂ ಕೋರ್ಟ್ ಶಿಕ್ಷೆಗೆ ಒಳಗಾಗಿದ್ದ ಆರೋಪಿ ಮೊಹಮ್ಮದ್ ಸಮೀರ್ ಖಾನ್‌ನನ್ನು ಖುಲಾಸೆಗೊಳಿಸಿದೆ. ಆರೋಪಿಯ ಅಪರಾಧವನ್ನು ಸಾಬೀತುಗೊಳಿಸುವ ಸರಿಯಾದ ಸಾಕ್ಷಿಯನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಈ ಮೂಲಕ ಆರೋಪಿಯ ವಿರುದ್ಧ ವಿಚಾರಣಾ ನ್ಯಾಯಾಲಯವು ಪ್ರಕಟಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದ್ದ ಮದ್ರಾಸ್ ಹೈಕೋರ್ಟ್‌ನ 2021ರ ತೀರ್ಪನ್ನು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ರದ್ದುಗೊಳಿಸಿದೆ.

ವೃದ್ಧೆಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಖುಲಾಸೆ

ಸುಪ್ರೀಂ ಕೋರ್ಟ್‌ -

ನವದೆಹಲಿ: ಕೊಯಮತ್ತೂರಿನಲ್ಲಿ (Coimbatore) 2016ರಲ್ಲಿ ನಡೆದಿದ್ದ 85 ವರ್ಷದ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ (Rape and murder case) ಸಂಬಂಧಿಸಿ ಶಿಕ್ಷೆಗೊಳಗಾಗಿದ್ದ ಮೊಹಮ್ಮದ್ ಸಮೀರ್ ಖಾನ್‌ನನ್ನು ಸುಪ್ರೀಂ ಕೋರ್ಟ್ (Supreme Court) ಖುಲಾಸೆಗೊಳಿಸಿದೆ. ಮೊಹಮ್ಮದ್ ಸಮೀರ್ ಖಾನ್ ವಿರುದ್ಧ ಸರಿಯಾದ ಸಾಕ್ಷಿಯನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿರುವ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಆರೋಪಿಗೆ 2021ರಲ್ಲಿ ಮದ್ರಾಸ್ ಹೈಕೋರ್ಟ್‌ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದೆ.

ವೃದ್ಧೆಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯವು ಮೊಹಮ್ಮದ್ ಸಮೀರ್ ಖಾನ್‌ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 376 (ಅತ್ಯಾಚಾರ), 394 (ದರೋಡೆ), ಮತ್ತು 449 (ಮನೆ ಅತಿಕ್ರಮಣ) ರ ಅಡಿಯಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇದನ್ನು 2021ರಲ್ಲಿ ಮದ್ರಾಸ್ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಇದೀಗ ಈ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌ ಗ್ಯಾಂಗ್ ವಿರುದ್ಧ ನ.3ಕ್ಕೆ ದೋಷಾರೋಪ ನಿಗದಿ

ಘಟನೆಯ ವರದಿಯ ಕ್ರಮಗಳಲ್ಲಿ ಸಾಕಷ್ಟು ಅಂತರವಿದೆ. ಹಲವು ಲೋಪಗಳು ಕೂಡ ಇವೆ. ಇದು ಊಹೆಯಂತೆ ಕಂಡು ಬರುತ್ತದೆ. ಪ್ರಕರಣವು ಸಂಪೂರ್ಣವಾಗಿ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿದೆ. ಅಪರಾಧಕ್ಕೆ ಸಂಬಂಧಿಸಿ ನೇರ ಅಥವಾ ವಿಧಿವಿಜ್ಞಾನ ಪರೀಕ್ಷೆಯ ವರದಿ ಸಲ್ಲಿಸಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಏನಾಗಿತ್ತು?

ಮಗಳ ಮನೆಯ ಎದುರಿನ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 85 ವರ್ಷದ ಮಹಿಳೆ 2016ರ ಡಿಸೆಂಬರ್ 19ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಆಕೆಯ ಕುತ್ತಿಗೆಗೆ ಟವಲ್ ಕಟ್ಟಲಾಗಿತ್ತು. ಕೈಗಳಲ್ಲಿದ್ದ ಎರಡು ಚಿನ್ನದ ಬಳೆಗಳು ನಾಪತ್ತೆಯಾಗಿದ್ದವು. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಡಿಸಲಾಗಿತ್ತು.

ಕೆಲವು ದಿನಗಳಿಂದ ಮನೆಯಲ್ಲೇ ಇದ್ದ ಮೊಹಮ್ಮದ್ ಸಮೀರ್ ಖಾನ್ ಆ ದಿನ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿ ಅನಂತರ ಅಲ್ಲಿಂದ ಹೊರಟು ಹೋಗಿದ್ದ ಎಂದು ಸ್ಥಳೀಯರೊಬ್ಬರು ಹೇಳಿದ್ದರಿಂದ ಘಟನೆ ನಡೆದ ಮೂರು ದಿನಗಳ ಬಳಿಕ ಕೊಯಮತ್ತೂರು ಪೊಲೀಸರು ಆತನನ್ನು ಬಂಧಿಸಿದರು. ಇದರ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು ಮೊಹಮ್ಮದ್ ಸಮೀರ್ ಖಾನ್‌ನನ್ನು ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇದನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿತ್ತು.

ಇದರ ಕುರಿತು ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ವಿಧಿವಿಜ್ಞಾನ ವರದಿ ಸಲ್ಲಿಸಿಲ್ಲ. ವೈದ್ಯಕೀಯ ಪುರಾವೆಗಳು ಇಲ್ಲದೆ ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಪೊಲೀಸ್ ತನಿಖೆಯ ರೀತಿಯನ್ನು ಪ್ರಶ್ನಿಸಿದ ನ್ಯಾಯಾಲಯ ಘಟನೆಯ ರಾತ್ರಿ ಆರೋಪಿಯೊಂದಿಗೆ ಕೊನೆಯದಾಗಿ ಕಾಣಿಸಿಕೊಂಡ ಮಾರ್ಕಸ್‌ನ ಹೇಳಿಕೆಯನ್ನು ಯಾಕೆ ದಾಖಲಿಸಲಾಗಿಲ್ಲ ಎಂದು ಪ್ರಶ್ನಿಸಿದೆ. ಆತನ ಹೇಳಿಕೆಯು ಖಾನ್ ಅಪರಾಧ ಮಾಡಲು ಸಾಧ್ಯವಿತ್ತೇ ಎಂಬುದನ್ನು ಸ್ಪಷ್ಟಪಡಿಸಬಹುದಿತ್ತು ಎಂದು ಹೇಳಿದೆ.

ಇದನ್ನೂ ಓದಿ: Mumbai Hostage: ಪೊಲೀಸರೊಂದಿಗೆ ಗುಂಡಿನ ಚಕಮಕಿ; 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡವ ಸಾವು

ಕದ್ದ ಬಳೆಗಳು ಆರೋಪಿ ಬಳಿ ಇದ್ದದ್ದು ಕೂಡ ಅಸ್ಪಷ್ಟವಾಗಿದೆ. ಯಾಕೆಂದರೆ ಘಟನೆ ಬಳಿಕ ಇದನ್ನು ಯಾರಾದರೂ ಹೊತ್ತುಕೊಂಡು ತಿರುಗುತ್ತಾರೆಯೇ ? ಇದು ಅನುಮಾನವನ್ನು ಹುಟ್ಟು ಹಾಕುವಂತೆ ಮಾಡಿದೆ ಎಂದು ತಿಳಿಸಿದೆ.

ಆರೋಪಿಯು ಬೇರೆ ಯಾವುದೇ ಅಪರಾಧದಲ್ಲಿ ಭಾಗಿಯಾಗಿರುವ ಬಗ್ಗೆ ದಾಖಲೆಗಳಿಲ್ಲ ಎಂದಿರುವ ನ್ಯಾಯಾಲಯ ಆರೋಪಿ ವಿರುದ್ಧ ಸಂಪೂರ್ಣ ಸಾಕ್ಷ್ಯಗಳನ್ನು ಸಲ್ಲಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತೀರ್ಮಾನಿಸಿದ್ದು, ಮೊಹಮ್ಮದ್ ಸಮೀರ್ ಖಾನ್‌ನನ್ನು ತಕ್ಷಣ ಕೊಯಮತ್ತೂರಿನ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ.