Kurnool Bus Fire: ಬಸ್ ಹೊತ್ತಿ ಉರಿಯುತ್ತಿದ್ದಂತೆ ಸಹಾಯ ಮಾಡುವ ಬದಲು ಓಡಿ ಹೋದ ಬಸ್ ಡ್ರೈವರ್!
Andhra Bus Accident: ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಎಸಿ ಸ್ಲೀಪರ್ ಬಸ್ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕರ್ನೂಲ್‌ನಲ್ಲಿ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಬಸ್‌ನ ಕೆಳಗೆ ಸಿಲುಕಿಕೊಂಡು ಬಹಳ ದೂರ ಎಳೆದುಕೊಂಡು ಹೋಗಿತ್ತು. ಇದರಿಂದ ಉಂಟಾದ ಘರ್ಷಣೆಯಿಂದಾಗಿ ಕಿಡಿಗಳು ಹೊತ್ತಿಕೊಂಡು, ಬಸ್‌ಗೆ ಬೆಂಕಿ ತಗುಲಿದೆ.
-
Rakshita Karkera
Oct 24, 2025 9:52 PM
ಹೈದರಾಬಾದ್: ಕರ್ನೂಲ್ ಬಳಿ ಸಂಭವಿಸಿದ ಭೀಕರ ಬಸ್ ಬೆಂಕಿ ದುರಂತಕ್ಕೆ (Kurnool Bus Fire)ಸಂಬಂಧಿಸಿದಂತೆ ಕ್ಷಣ ಕ್ಷಣ ಆಘಾತಕಾರಿ ಸಂಗತಿಗಳ ಬೆಳಕಿಗೆ ಬರುತ್ತಿವೆ. ಶುಕ್ರವಾರ ಮುಂಜಾನೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಬೆಂಕಿ ಹೊತ್ತಿಕೊಂಡ ಬಸ್‌ನ ಚಾಲಕ ಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರಿಗೆ ಸಹಾಯ ಮಾಡುವ ಬದಲು ಭಯಭೀತನಾಗಿ ಓಡಿಹೋದನು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಬಸ್‌ನಲ್ಲಿದ್ದ 43 ಜನರಲ್ಲಿ 19 ಜನ ಸಜೀವ ದಹನಗೊಂಡಿದ್ದರೆ ಬಸ್ ಡಿಕ್ಕಿ ಹೊಡೆದ ಮೋಟಾರ್‌ಸೈಕಲ್‌ನ ಸವಾರ ಕೂಡ ಸಾವನ್ನಪ್ಪಿದ್ದ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಎಸಿ ಸ್ಲೀಪರ್ ಬಸ್ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕರ್ನೂಲ್‌ನಲ್ಲಿ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಬಸ್‌ನ ಕೆಳಗೆ ಸಿಲುಕಿಕೊಂಡು ಬಹಳ ದೂರ ಎಳೆದುಕೊಂಡು ಹೋಗಿತ್ತು. ಇದರಿಂದ ಉಂಟಾದ ಘರ್ಷಣೆಯಿಂದಾಗಿ ಕಿಡಿಗಳು ಹೊತ್ತಿಕೊಂಡು, ಬಸ್‌ಗೆ ಬೆಂಕಿ ತಗುಲಿದೆ. ಘಟನೆ ಬಗ್ಗೆ ಕೆಲವು ಪ್ರಯಾಣಿಕರು ಮಾಹಿತಿ ನೀಡಿದ್ದು, ದುರ್ಘಟನೆಯ ಭೀಕರತೆಯನ್ನು ಹಂಚಿಕೊಂಡಿದ್ದಾರೆ. "ಬಸ್ ನಿಂತಾಗ, ನಾನು ಎಚ್ಚರಗೊಂಡು ನೋಡಿದೆ. ಅಪಘಾತ ಸಂಭವಿಸಿದೆ ಮತ್ತು ವಾಹನದ ಕೆಲವು ಭಾಗಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ನಾವು ಕಿಟಕಿಗೆ ಗುದ್ದಿ, ಒದ್ದು, ತಳ್ಳಿ ತಲೆಯಿಂದ ಹೊಡೆದೆವು. ಅದನ್ನು ತೆರೆಯುವ ಹೊತ್ತಿಗೆ, ಬಹಳಷ್ಟು ಹೊಗೆ ಇತ್ತು. ನಾವು ಸಾಕಷ್ಟು ಎತ್ತರದಿಂದ ಹಾರಿದೆವು ಮತ್ತು ಕೆಲವು ಪ್ರಯಾಣಿಕರು ರಸ್ತೆಯ ಮೇಲೆ ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ಗಮನಿಸಿದೆವು. ನಾವು ಅವರನ್ನು ಬಸ್ಸಿನಿಂದ ದೂರಕ್ಕೆ ಎಳೆದುಕೊಂಡು ಹೋದೆವು" ಎಂದು ಒಬ್ಬ ಪ್ರಯಾಣಿಕರೊಬ್ಬರು ವಿವರಿಸಿದನು.
ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ಅವರು ಬಸ್ಸಿನ ಎರಡನೇ ಚಾಲಕ ಪ್ರಯಾಣಿಕರಿಗೆ ಸಹಾಯ ಮಾಡಿದರು, ಆದರೆ ಅಪಘಾತಕ್ಕೆ ಕಾರಣವಾದ ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಿದರು. ಬಸ್ಸಿನ ಕೆಳಗೆ ದ್ವಿಚಕ್ರ ವಾಹನವೊಂದು ಸಿಲುಕಿಕೊಂಡಿದೆ ಎಂದು ನಮಗೆ ತಿಳಿದಿದೆ. ಏನಾಯಿತು ಎಂದು ನೋಡಲು ಚಾಲಕ ಕೆಳಗೆ ಇಳಿದನು. ಬೆಂಕಿ ಹೊತ್ತಿಕೊಂಡಿರುವುದನ್ನು ಅವನು ನೋಡಿ ಅವನು ಇತರ ಚಾಲಕನನ್ನು ಎಚ್ಚರಗೊಳಿಸಿದನು ಮತ್ತು ಅವರು ಒಟ್ಟಾಗಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಬೆಂಕಿ ಹರಡಿದ ನಂತರ, ಮುಖ್ಯ ಚಾಲಕ ಭಯಭೀತರಾಗಿ ಓಡಿಹೋದನು. ಎರಡನೇ ಚಾಲಕ ಕಿಟಕಿಗಳನ್ನು ಒಡೆಯಲು ಸಹಾಯ ಮಾಡಿದನು. ಅವರು ಪ್ರಯಾಣಿಕರನ್ನು ಹೊರಗೆ ತರಲು ಸಹಾಯ ಮಾಡಿದರು. ಬಸ್‌ನಲ್ಲಿದ್ದ 19 ಜನರ ಶವಗಳು ಮತ್ತು ದ್ವಿಚಕ್ರ ವಾಹನ ಸವಾರನ ಶವವನ್ನು ನಾವು ಹೊರತೆಗೆದಿದ್ದೇವೆ" ಎಂದು ಅವರು ಹೇಳಿದರು. ಸದ್ಯ ಮುಖ್ಯ ಚಾಲಕನನ್ನು ಈಗ ಬಂಧಿಸಲಾಗಿದೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕಾವೇರಿ ಖಾಸಗಿ ಟ್ರಾವೆಲ್ಸ್ ಬಸ್ ಉಳಿಂದಕೊಂಡ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಬಸ್ ಕ್ಷಣಾರ್ಧದಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿದೆ. ಬಸ್ಸಿನಲ್ಲಿ ಒಟ್ಟು 44 ಪ್ರಯಾಣಿಕರಿದ್ದರು. ಅವರಲ್ಲಿ 12 ಮಂದಿ ಕೆಳಗೆ ಹಾರಿ ಬದುಕುಳಿದಿದ್ದಾರೆ ಎಂದು ವರದಿಯಾಗಿದೆ. ಇತರರಲ್ಲಿ 20 ಮಂದಿ ಸ್ಥಳದಲ್ಲೇ ದಹಿಸಿಹೋದರೆ, ಇತರರು ತೀವ್ರ ಸುಟ್ಟು ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತದಲ್ಲಿ (Kurnool Bus accident) ಬೆಂಗಳೂರು (Bengaluru) ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರು ಮಕ್ಕಳು ಸಹ ಸೇರಿದ್ದಾರೆ ಎಂದು ಗೊತ್ತಾಗಿದೆ.