ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂಡಿ ಒಕ್ಕೂಟ ಸಭೆಯಲ್ಲಿ ಮಮತಾ ಬ್ಯಾನರ್ಜಿ ಭಾಗಿ; ಟಿಎಂಸಿ ಬಂಡಾಯ ಸಂಸದರಿಂದ ಬಿಜೆಪಿ ನಾಯಕರ ಭೇಟಿ: ಕೊಳ್ಳೆ ಹೋದ ಬಳಿಕ ಕೋಟೆ ಬಾಗಿಲು ಮುಚ್ಚುವ ಪ್ರಯತ್ನದಲ್ಲಿ ದೀದಿ

Trinamool Congress Crisis: ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಲ್ಲಿ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ನಡುವೆಯೇ ಪಕ್ಷದ 10 ಸಂಸದರು ದೆಹಲಿಯಲ್ಲಿ ಬಿಜೆಪಿ ನಾಯಕರೊಂದಿಗೆ ರಹಸ್ಯ ಸಭೆ ನಡೆಸಿದರು. ಕೆಲವು ಗಂಟೆಗಳ ಹಿಂದಷ್ಟೇ ಪಕ್ಷ ತೊರೆದ ಸುಖೇಂದು ಶೇಖರ್ ರೇ ಮತ್ತು ಶಾಸಕ ಅಕ್ರುಝಮಾನ್ ಕೂಡ ಉಪಸ್ಥಿತರಿದ್ದಾರೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ)

ದೆಹಲಿ, ಜೂ. 8: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್‌ ಪಕ್ಷದೊಳಗಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ನಡುವೆಯೇ 10 ಮಂದಿ ಬಂಡಾಯ (TMC MPs) ದೆಹಲಿಯಲ್ಲಿ ಬಿಜೆಪಿ ನಾಯಕರೊಂದಿಗೆ ರಹಸ್ಯ ಸಭೆ ನಡೆಸಿದರು. ಈ ಸಭೆಯು ಬಿಜೆಪಿ ನಾಯಕ ಭೂಪೇಂದ್ರ ಯಾದವ್ (Bhupender Yadav) ಅವರ ನಿವಾಸದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ಅಲ್ಲಿಂದ ಕೇವಲ ಒಂದು ಕಿಲೋ ಮೀಟರ್ ದೂರದಲ್ಲಿ ನಡೆದ ವಿಪಕ್ಷಗಳ ಇಂಡಿ ಮೈತ್ರಿಕೂಟದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಿದರು. ಅಲ್ಲಿ ಅವರು ಬಿಜೆಪಿ ವಿರುದ್ಧದ ಮುಂದಿನ ಹೋರಾಟದ ಕಾರ್ಯತಂತ್ರ ರೂಪಿಸಲು ಮಾತುಕತೆ ನಡೆಸಿದರು.

ಬಂಡಾಯವೆದ್ದ ನಾಯಕರ ಸಭೆಯಲ್ಲಿ ಶತಾಬ್ದಿ ರಾಯ್, ಕಾಕೋಲಿ ಘೋಷ್ ದಸ್ತಿದಾರ್, ಅಬು ತಾಹೆರ್ ಖಾನ್, ಖಲೀಲುರ್ ರೆಹಮಾನ್, ಅಸಿತ್ ಕುಮಾರ್ ಮಾಲ್, ಅರುಪ್ ಚಕ್ರವರ್ತಿ, ಕಲಿಪಾದ ಸೊರೆನ್, ಜಗದೀಶ್ ಚಂದ್ರ ಬರ್ಮಾ ಬಸುನಿಯಾ, ಪ್ರಸೂನ್ ಬ್ಯಾನರ್ಜಿ ಮತ್ತು ಶರ್ಮಿಳಾ ಸರ್ಕಾರ್ ಇದ್ದರು. ಕೆಲವು ಗಂಟೆಗಳ ಹಿಂದಷ್ಟೇ ಪಕ್ಷ ತೊರೆದ ಸುಖೇಂದು ಶೇಖರ್ ರೇ ಮತ್ತು ಶಾಸಕ ಅಕ್ರುಝಮಾನ್ ಕೂಡ ಉಪಸ್ಥಿತರಿದ್ದರು.

“ನಾವು 20 ಸಂಸದರ ಪ್ರತ್ಯೇಕ ಬಣವನ್ನು ರಚಿಸುತ್ತಿದ್ದು, ಎನ್‍ಡಿಎಗೆ ಬೆಂಬಲ ನೀಡಲಿದ್ದೇವೆ. ಕಾಕೋಳಿ ಘೋಷ್ ದಸ್ತಿದಾರ್ ನಮ್ಮ ಮುಖ್ಯ ಸಚೇತಕರು ಮತ್ತು ಶತಾಬ್ದಿ ರಾಯ್ ನಮ್ಮ ಉಪ ನಾಯಕ” ಎಂದು ಶರ್ಮಿಳಾ ಸರ್ಕಾರ್ ತಿಳಿಸಿದ್ದಾರೆ. ಬಂಡಾಯ ನಾಯಕರು ಮಂಗಳವಾರ (ಜೂ. 9) ಘೋಷ್ ದಸ್ತಿದಾರ್ ಅವರ ನೇತೃತ್ವದಲ್ಲಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಲಿದ್ದು, ಟಿಎಂಸಿ ತಮ್ಮದೇ ಎಂದು ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಿಕ್ಕಟ್ಟಿನ ಮಧ್ಯೆ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರೇ ರಾಜೀನಾಮೆ

ಸೋಲಿನ ನಂತರ ಹೊಡೆತದ ಮೇಲೆ ಹೊಡೆತ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಹೀನಾಯವಾಗಿ ಸೋತ ನಂತರ, ಪಕ್ಷದ ಆಂತರಿಕ ಗೊಂದಲಗಳು ಹೆಚ್ಚಾಗುತ್ತಿವೆ. ಬಿಕ್ಕಟ್ಟು ಹೆಚ್ಚಾಗುತ್ತಿವೆಯೇ ವಿನಃ ಶಮನಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಸಂಸದರ ಪೈಕಿ ಕೆಲವರು ಮೊಬೈಲ್ ಫೋನ್‌ ಸ್ವಿಚ್ ಆಫ್ ಮಾಡುವುದು, ಮತ್ತೆ ಹಲವು ಸಂಸದರು ದಿಢೀರ್ ದೆಹಲಿ ಪ್ರವಾಸ ಕೈಗೊಳ್ಳುವುದು ಸೇರಿ ಬಿಡುವಿಲ್ಲದ ಚಟುವಟಿಕೆ ನಡೆಯುತ್ತಿದೆ. ಆ ಮೂಲಕ ಪಕ್ಷದೊಳಗೆ ಬಹಳ ದಿನಗಳಿಂದ ಅಸಮಾಧಾನ ಹೊಗೆಯಾಡುತ್ತಿದೆ ಎನ್ನುವುದರ ಸೂಚನೆ ಸಿಕ್ಕಿದೆ. ಪಕ್ಷವು ತನ್ನ ಶಾಸಕರು ಮತ್ತು ಸಂಸದರನ್ನು ಒಗ್ಗೂಡಿಸಿಕೊಳ್ಳಲು ಹರಸಾಹಸ ಪಡುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

20 ಸಂಸದರಲ್ಲದೆ ಪಕ್ಷದ 80 ಶಾಸಕರಲ್ಲಿ 60 ಮಂದಿ ಕಳೆದ ತಿಂಗಳು ನಡೆದ ಚುನಾವಣಾ ಸೋಲಿನ ನಂತರ ಶಾಸಕ ಋತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ಬೆಂಬಲಿಸುತ್ತಿದ್ದಾರೆ. ದಶಕಗಳಿಂದ ದೀದಿ (ಅಕ್ಕ) ಎಂದು ಕರೆಯುತ್ತಿದ್ದ ನಾಯಕರೆಲ್ಲಇದೀಗ ಮಮತಾ ಎಂದೇ ಸಂಬೋಧಿಸತೊಡಗಿದ್ದಾರೆ.