ಬಿಕ್ಕಟ್ಟಿನ ಮಧ್ಯೆ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರೇ ರಾಜೀನಾಮೆ: ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ
Trinamool Congress Crisis: ತೃಣಮೂಲ ಕಾಂಗ್ರೆಸ್ ಕಲಹ ಕೊನೆಗೂ ಸಂಸತ್ತನ್ನು ತಲುಪಿದೆ. ಪಕ್ಷದ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೆಹಲಿಯಲ್ಲಿದ್ದಾಗ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರೇ ಪಕ್ಷವನ್ನು ತೊರೆದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸುಖೇಂದು ಶೇಖರ್ ರೇ (ಸಂಗ್ರಹ ಚಿತ್ರ) -
ಕೋಲ್ಕತ್ತಾ, ಜೂ. 8: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಕಲಹ (Trinamool Congress Crisis) ಕೊನೆಗೂ ಸಂಸತ್ ತಲುಪಿದೆ. ಪಕ್ಷದ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ದೆಹಲಿಯಲ್ಲಿದ್ದಾಗ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರೇ (MP Sukhendu Shekhar Ray) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ಬ್ಯಾನರ್ಜಿಗೆ ಇದು ದೊಡ್ಡ ಹಿನ್ನಡೆಯಾದಂತಾಗಿದೆ. ಸುಖೇಂದು ಶೇಖರ್ ರೇ ಪಕ್ಷವನ್ನೂ ತೊರೆದಿದ್ದಾರೆ. ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಹಾಸು ಹೊಕ್ಕಿತ್ತು ಎಂದು ಹೇಳಿದ್ದಾರೆ.
“ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಅರಾಜಕ ಆಡಳಿತದಲ್ಲಿ ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಮಿರಿ ಮೀರಿದ್ದು, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಕಾನೂನು ಮತ್ತು ಸುವ್ಯವಸ್ಥೆ, ಉದ್ಯೋಗ ಇತ್ಯಾದಿ ಕ್ಷೇತ್ರಗಳಲ್ಲಿ ಹೀನಾಯ ವೈಫಲ್ಯ ಉಂಟಾಗಿದೆ. ಇದನ್ನು ಕೊನೆಗೊಳಿಸಲು ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಜನರು ಬಿಜೆಪಿ ಪರವಾಗಿ ಬೃಹತ್ ಜನಾದೇಶವನ್ನು ನೀಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ರಾಜೀನಾಮೆ ನೀಡಿದ ಟಿಎಂಸಿ ರಾಜ್ಯಾಸಭಾ ಸಂಸದ ಸುಖೇಂದು ಶೇಖರ್ ರೇ:
Sukhendu Sekhar Ray resigns from his post as a Rajya Sabha MP and from the primary membership of AITC.
— ANI (@ANI) June 8, 2026
He says in a press statement, "The people have given a huge mandate in favour of the BJP for the first time in the history of the state to put an end to the 15-year anarchical… pic.twitter.com/sXFcUUKJ4C
ಪಶ್ಚಿಮ ಬಂಗಾಳದಲ್ಲಿ ಜನಾದೇಶ ಹಾಗೂ ಸರ್ಕಾರವನ್ನು ಕಳೆದುಕೊಂಡ ಬಳಿಕ, ಪಕ್ಷವನ್ನು ವಿಭಜಿಸುವ ಮಟ್ಟದ ಭಾರಿ ಆಂತರಿಕ ಬಂಡಾಯವನ್ನು ತೃಣಮೂಲ ಕಾಂಗ್ರೆಸ್ ಎದುರಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಮತ್ತೋರ್ವ ತೃಣಮೂಲ ಕಾಂಗ್ರೆಸ್ ನಾಯಕನ ಬಂಧನ
ಸುಖೇಂದು ಶೇಖರ್ ರೇ ಸೋಮವಾರ (ಜೂನ್ 8) ಸಂಸತ್ತಿಗೆ ರಾಜೀನಾಮೆ ನೀಡಿದ್ದಾರೆ. ಜತೆಗೆ ಟಿಎಂಸಿಯ ಸದಸ್ಯತ್ವವನ್ನೂ ತ್ಯಜಿಸಿದ್ದಾರೆ. ಅವರು ಬಿಜೆಪಿಗೆ ಸೇರುತ್ತಾರೆಯೇ ಎಂಬುದನ್ನು ಸ್ಪಷ್ಟವಾಗಿ ಘೋಷಿಸಿಲ್ಲ. ಅದಾಗ್ಯ ಅವರು ಕೇಸರಿ ಪಕ್ಷದ ಕಡೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಅವರು ಪಕ್ಷದಿಂದ ನಿರ್ಗಮಿಸಿದ ಕೆಲವೇ ಗಂಟೆಗಳ ನಂತರ, ರೇ ಬಿಜೆಪಿ ನಾಯಕ ಭೂಪೇಂದ್ರ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೂಡ ಅಲ್ಲಿ ಹಾಜರಿದ್ದರು.
ಬಿಜೆಪಿ ಸರ್ಕಾರಕ್ಕೆ ಮೆಚ್ಚುಗೆ
ಪಶ್ಚಿಮ ಬಂಗಾಳದ ನೂತನ ಬಿಜೆಪಿ ಸರ್ಕಾರವನ್ನು ಶ್ಲಾಘಿಸಿದ ರೇ, ತನ್ನ ಚುನಾವಣಾ ಪ್ರಣಾಳಿಕೆಯ ಪ್ರಕಾರ ಪಶ್ಚಿಮ ಬಂಗಾಳದ ಒಟ್ಟಾರೆ ಅಭಿವೃದ್ಧಿ ಮತ್ತು ಪುನರ್ನಿರ್ಮಾಣಕ್ಕಾಗಿ ಉಪಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
“ಜನರ ಈ ಐತಿಹಾಸಿಕ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸುವ ಸಲುವಾಗಿ, ನಾನು ಇಂದು ರಾಜ್ಯಸಭೆ ಸದಸ್ಯತ್ವಕ್ಕೆ ಮತ್ತು ಟಿಎಂಸಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆʼʼ ಎಂದು ಘೋಷಿಸಿದ್ದಾರೆ. ʼʼತೃಣಮೂಲ ಕಾಂಗ್ರೆಸ್ ನಾಯಕರು ಅಧಿಕಾರದ ಅಮಲಿನಲ್ಲಿ ಮುಳುಗಿದ್ದು, ತಾವು ಅಜೇಯರಾಗಿದ್ದೇವೆಂದು ಭಾವಿಸಿದ್ದರುʼʼ ಎಂದು ರೇ ಹೇಳಿದ್ದಾರೆ.
ಟಿಎಂಸಿಯ ಎರಡೂ ಸದನಗಳ 41 ಸಂಸದರಲ್ಲಿ ಕನಿಷ್ಠ 20 ಮಂದಿ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದು, ಪಕ್ಷ ಬದಲಾಯಿಸಲು ಯೋಜಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಹಿರಿಯ ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ಬಿಜೆಪಿಗೆ ಸೇರುವ ಪ್ರಸ್ತಾಪ ಬಂದಿರುವುದಾಗಿ ತಿಳಿಸಿದ್ದರು. ಆದರೆ ಬಳಿಕ ಅವರು ಅದನ್ನು ತಿರಸ್ಕರಿಸಿದ್ದರು. ʼʼನಾನು ಚುನಾವಣೆಯಲ್ಲಿ ಯಾವ ಚಿಹ್ನೆಯ ಮೇಲೆ ಗೆದ್ದೆನೋ ಆ ಪಕ್ಷದಲ್ಲಿಯೇ ಇರುತ್ತೇನೆʼʼ ಎಂದು ಪಕ್ಷಾಂತರ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು.
ಉಚ್ಚಾಟಿತರಿಗೆ 60 ಶಾಸಕರ ಬೆಂಬಲ; ಇಬ್ಭಾಗವಾಗುತ್ತ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್
ಬಂಡಾಯ ಬಣಕ್ಕೆ ಶಾಸಕರ ಬೆಂಬಲ
ಕಳೆದ ತಿಂಗಳು ನಡೆದ ಚುನಾವಣಾ ಸೋಲಿನ ಬಳಿಕ, ಪಕ್ಷದ 20 ಸಂಸದರು ಮಾತ್ರವಲ್ಲದೆ 80 ಶಾಸಕರಲ್ಲಿ ಕನಿಷ್ಠ 60 ಮಂದಿ ಕೂಡ ಬಂಡಾಯ ಬಣಕ್ಕೆ ಬೆಂಬಲ ನೀಡುತ್ತಿದ್ದಾರೆ. ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿಕೂಟದ ಮಹತ್ವದ ಸಭೆ ನಡೆಯುವ ಮುನ್ನವೇ ರೇ ಅವರ ನಿರ್ಗಮನ ಸಂಭವಿಸಿದೆ. ಈ ಸಭೆಯಲ್ಲಿ ಭಾಗವಹಿಸಲು ಮಮತಾ ಬ್ಯಾನರ್ಜಿ ಒಂದು ದಿನ ಮುಂಚಿತವಾಗಿ ದೆಹಲಿಗೆ ತಲುಪಿದ್ದರು.
ಒಂದು ದಿನದ ಹಿಂದೆ, ಸುಖೇಂದು ಶೇಖರ್ ರೇ ಪಕ್ಷದ ರಾಜಕೀಯ ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡಿದ್ದರು. ಈ ಪಕ್ಷ ಉಳಿಯುವುದಿಲ್ಲ ಎಂದು ಅವರು ನೇರವಾಗಿ ಹೇಳಿದ್ದರು. ಅಲ್ಲದೆ, ಬಂಡಾಯವು ಶೀಘ್ರದಲ್ಲೇ ಸಂಸತ್ತಿಗೂ ತಲುಪಲಿದೆ ಎಂದು ಅವರು ಹೇಳಿದ್ದು, ಪಕ್ಷ ತೊರೆಯುವ ತಮ್ಮ ನಿರ್ಧಾರದ ಸುಳಿವು ಬಿಟ್ಟುಕೊಟ್ಟಿದ್ದರು.
ರೇ ಅವರ ರಾಜೀನಾಮೆಯು ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಬಲವನ್ನು ಕುಗ್ಗಿಸುವುದಷ್ಟೇ ಅಲ್ಲ, 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೇ ತಮ್ಮೊಂದಿಗೆ ನಿಂತಿದ್ದ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರನ್ನು ಮಮತಾ ಬ್ಯಾನರ್ಜಿ ಕಳೆದುಕೊಂಡಂತಾಗಿದೆ.