ಲಕ್ನೋ: 2027 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಮತ್ತು ಆಜಾದ್ ಸಮಾಜ್ ಪಾರ್ಟಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅಧಿಕೃತವಾಗಿ ಚುನಾವಣಾ ಮೈತ್ರಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚಂದ್ರಶೇಖರ್ ಆಜಾದ್ ಅವರ ಹೆಸರನ್ನು ಓವೈಸಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಯುಪಿ ಚುನಾವಣೆಗೆ ಅಖಾಡ ಸಜ್ಜು
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಓವೈಸಿ ಮತ್ತು ಚಂದ್ರಶೇಖರ್ ಆಜಾದ್ ಅವರ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ. ಇಬ್ಬರೂ ನಾಯಕರು ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಭೆ ನಡೆಸಿ, ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಈ ಮೈತ್ರಿಕೂಟಕ್ಕೆ ಸಾಮಾಜಿಕ ಬದಲಾವಣೆ ರಂಗ ಎಂದು ಹೆಸರಿಸಲಾಗಿದೆ. ಚಂದ್ರಶೇಖರ್ ಆಜಾದ್ ಅವರು ಮೈತ್ರಿಕೂಟದ ಮುಖ ಮತ್ತು ಅದರ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುತ್ತಾರೆ. ಈ ಮೈತ್ರಿಕೂಟವು ಸುಮಾರು 150 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಆಜಾದ್ ಸಮಾಜ ಪಕ್ಷ 100 ಸ್ಥಾನಗಳಲ್ಲಿ ಮತ್ತು ಓವೈಸಿ ಅವರ ಪಕ್ಷ 50 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ನವೆಂಬರ್ 26 ರಂದು ಲಕ್ನೋದ ರಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ ನಡೆಯುವ ರ್ಯಾಲಿಯಲ್ಲಿ ಓವೈಸಿ ಭಾಗವಹಿಸಲಿದ್ದಾರೆ. ಮುಸ್ಲಿಂ ಮತ್ತು ದಲಿತ ಸಮುದಾಯಗಳ ರಾಜಕೀಯ ಹಕ್ಕುಗಳ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣಾ ಕಣಕ್ಕಿಳಿಯುವುದಾಗಿ ಮೈತ್ರಿಕೂಟ ಹೇಳಿಕೊಂಡಿದೆ.
ದಲಿತ ಮತ್ತು ಮುಸ್ಲಿಂ ಮತಗಳ ಮೇಲೆ ಕಣ್ಣು
ವರದಿಗಳ ಪ್ರಕಾರ ಉತ್ತರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು ಸುಮಾರು ಶೇ. 19 ರಷ್ಟಿದ್ದರೆ, ಪರಿಶಿಷ್ಟ ಜಾತಿಗಳು (SC) ಸುಮಾರು ಶೇ. 21 ರಷ್ಟಿವೆ. ಅಂದರೆ, ಈ ಎರಡು ಸಮುದಾಯಗಳು ಸೇರಿದರೆ ರಾಜ್ಯದ ಒಟ್ಟು ಮತದಾರರಲ್ಲಿ ಸುಮಾರು ಶೇ. 40 ರಷ್ಟಾಗುತ್ತಾರೆ. ಹೀಗಾಗಿ ಮುಂಬರುವ ಚುನಾವಣೆ ಯಾರ ಹಣೆಬರಹವನ್ನು ಹೇಗಾದರೂ ಬದಲಿಸುವ ಶಕ್ತಿ ಇದಾಗಿದೆ.
ಇಂಡಿಯಾ ಮೈತ್ರಿಕೂಟದ ನಿರ್ಲಕ್ಷ್ಯವೇ ಹೊಸ ಬಣಕ್ಕೆ ಕಾರಣವಾಯಿತಾ?
ಈ ಹೊಸ ಮೈತ್ರಿಕೂಟದ ರಚನೆ ಹಿಂದೆ ದೊಡ್ಡ ರಾಜಕೀಯ ಹಿನ್ನೆಲೆಯೂ ಇದೆ. ಉತ್ತರ ಪ್ರದೇಶದ ಇಂಡಿಯಾ ಮೈತ್ರಿಕೂಟದ ಜೊತೆ ಕೈಜೋಡಿಸಲು ಓವೈಸಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಮೈತ್ರಿಕೂಟದಲ್ಲಿ ತಮ್ಮನ್ನು ಸೇರಿಸಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಓವೈಸಿ ಅವರು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ಗೆ ಅಕ್ಟೋಬರ್ 2 ರ ಗಡುವು ಕೂಡ ನೀಡಿದ್ದರು. ಆದರೆ, ವಿರೋಧ ಪಕ್ಷಗಳ ಬಣ ಓವೈಸಿ ಪ್ರಸ್ತಾಪಕ್ಕೆ ಯಾವುದೇ ಕಿಮ್ಮತ್ತು ನೀಡಲಿಲ್ಲ. ಹೀಗಾಗಿ, ಈಗ ಓವೈಸಿ ಮತ್ತು ಚಂದ್ರಶೇಖರ್ ಆಜಾದ್ ಜೊತೆಯಾಗಿ ಹೊಸ ರಾಜಕೀಯ ದಾಳ ಉರುಳಿಸಲು ಸಜ್ಜಾಗಿದ್ದಾರೆ.