ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೋಶಿಯಲ್ ಮೀಡಿಯಾದಲ್ಲಿ 21 ಲಕ್ಷ ಫಾಲೋವರ್ಸ್, ಚುನಾವಣೆಯಲ್ಲಿ ಕೇವಲ 33 ಮತ: ಇನ್‌ಫ್ಲುಯೆನ್ಸರ್‌ಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೀನಾಯ ಸೋಲು

Rajasthan panchayat election: ಸಾಮಾಜಿಕ ಮಾಧ್ಯಮದಲ್ಲಿ 21 ಲಕ್ಷ ಫಾಲೋವರ್‌ಗಳನ್ನು ಹೊಂದಿರುವ ಓಂಪ್ರಕಾಶ್ ಬಿಷ್ಣೋಯ್ ಎಂಬುವವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಯ ಸೋಲು ಕಂಡಿದ್ದಾರೆ. 1,600 ಅರ್ಹ ಮತದಾರರಿರುವ ಗ್ರಾಮದಲ್ಲಿ ಅವರಿಗೆ ಸಿಕ್ಕಿದ್ದು ಕೇವಲ 33 ಮತಗಳು.

ಸೋಶಿಯಲ್ ಮೀಡಿಯಾದಲ್ಲಿ 21 ಲಕ್ಷ ಫಾಲೋವರ್ಸ್, ಚುನಾವಣೆಯಲ್ಲಿ ಕೇವಲ 33 ಮತ

ಇನ್‌ಫ್ಲುಯೆನ್ಸರ್‌ಗೆ ಚುನಾವಣೆಯಲ್ಲಿ ಹೀನಾಯ ಸೋಲು -

Priyanka P
Priyanka P Oct 27, 2026 2:52 PM

ಜೈಪುರ, ಅ.27: ಸಾಮಾಜಿಕ ಜಾಲತಾಣಗಳಲ್ಲಿ (social media) ಹೆಚ್ಚಿನ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿರುವವರು, ಜನರಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ ಎಂಬ ಭಾವನೆ ಮೂಡಬಹುದು. ಆದರೆ, ತಳಮಟ್ಟದಲ್ಲಿ ಜನರ ಬೆಂಬಲ ಪಡೆಯುವ ವಿಚಾರ ಬಂದಾಗ ವಾಸ್ತವವೇ ಬೇರೆಯಾಗಿರಬಹುದು. ಇದಕ್ಕೆ ರಾಜಸ್ಥಾನದ (Rajasthan) ಜೋಧ್‌ಪುರ ಜಿಲ್ಲೆಯ ಓಸಿಯಾನ್ ತಹಶೀಲಿನ ಇಂಡೋನ್ ಕಿ ಧಾನಿ-2 ಗ್ರಾಮ ಪಂಚಾಯಿತಿಯಲ್ಲಿ ಸರಪಂಚ್ ಚುನಾವಣೆಗೆ ಸ್ಪರ್ಧಿಸಿದ್ದ ಓಂಪ್ರಕಾಶ್ ಬಿಷ್ಣೋಯ್ ಅವರೇ ಸಾಕ್ಷಿ.

ತಮ್ಮನ್ನು ಜ್ಯೋತಿಷಿ, ಇನ್‌ಫ್ಲುಯೆನ್ಸರ್ ಮತ್ತು ಯೂಟ್ಯೂಬರ್ ಎಂದು ಗುರುತಿಸಿಕೊಳ್ಳುವ ಬಿಷ್ಣೋಯ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಒಟ್ಟು 21 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ. ಆದರೆ, 1,600 ಅರ್ಹ ಮತದಾರರಿರುವ ಗ್ರಾಮದಲ್ಲಿ ಅವರಿಗೆ ಸಿಕ್ಕಿದ್ದು ಕೇವಲ 33 ಮತಗಳು. ಚುನಾವಣೆಯಲ್ಲಿ ಇಷ್ಟು ಹೀನಾಯ ಸೋಲು ಕಂಡಿದ್ದು ಅವರ ಫಾಲೋವರ್‌ಗಳು ಮತ್ತು ಗ್ರಾಮಸ್ಥರಿಗೆ ಮಾತ್ರವಲ್ಲ, ಸ್ವತಃ ಬಿಷ್ಣೋಯ್ ಅವರಿಗೂ ಅಚ್ಚರಿ ಮೂಡಿಸಿದೆ.

ಬಿಷ್ಣೋಯ್ ಅವರ ಸಾಮಾಜಿಕ ಜಾಲತಾಣದ ಫಾಲೋವರ್‌ಗಳ ಪೈಕಿ ಇನ್‌ಸ್ಟಾಗ್ರಾಂನಲ್ಲಿ 14 ಲಕ್ಷ, ಫೇಸ್‌ಬುಕ್‌ನಲ್ಲಿ 2.32 ಲಕ್ಷ ಮತ್ತು ಯೂಟ್ಯೂಬ್‌ನಲ್ಲಿ 5 ಲಕ್ಷ ಮಂದಿ ಇದ್ದಾರೆ. ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಅವರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು. ಆದರೆ, ಇಷ್ಟೊಂದು ದೊಡ್ಡ ಫಾಲೋವರ್ ಬಳಗವಿದ್ದರೂ ಚುನಾವಣೆಯಲ್ಲಿ ಯಶಸ್ಸು ಅವರ ಪಾಲಾಗಲಿಲ್ಲ.

ಸಲ್ಮಾನ್‌ ಖಾನ್‌- ಟೈಗರ್‌ ಶ್ರಾಫ್‌ ಮೇಲೆ ಅಟ್ಯಾಕ್‌; ದಾಳಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಿಷ್ಣೋಯ್‌ ಗ್ಯಾಂಗ್‌ ಪೋಸ್ಟ್‌ ಹಾಕೋದೇಕೆ? ಏನಿದರ ಉದ್ದೇಶ?

ಬಿಷ್ಣೋಯ್ ಸೇರಿದಂತೆ ಒಟ್ಟು ಮೂವರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಮತ್ತೊಬ್ಬ ಅಭ್ಯರ್ಥಿಯಾಗಿದ್ದ ಶಿಕ್ಷಕರೊಬ್ಬರು 527 ಮತಗಳನ್ನು ಪಡೆದರೆ, ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿ ಕಾರುಗಳ ವ್ಯವಹಾರ ಮಾಡುತ್ತಾರೆ. ಗ್ರಾಮದ ಪ್ರತಿಯೊಂದು ಮಗುವಿಗೂ ಶಿಕ್ಷಣ ಒದಗಿಸುವುದು, ಅನಾಥ ಪ್ರಾಣಿಗಳ ಆರೈಕೆ ಮಾಡುವುದು ಹಾಗೂ ಗ್ರಾಮಸ್ಥರಿಗೆ ಸರ್ಕಾರಿ ಯೋಜನೆಗಳ ಪ್ರಯೋಜನ ತಲುಪಿಸುವುದು ತಮ್ಮ ಉದ್ದೇಶವಾಗಿತ್ತು. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದ್ದಾಗಿ ಬಿಷ್ಣೋಯ್ ಹೇಳಿದರು.

ತಾವು 1,500 ಹಸುಗಳಿಗೆ ಆಶ್ರಯ ನೀಡುವ ಗೋಶಾಲೆಯನ್ನು ನಡೆಸುತ್ತಿದ್ದು, ಇದಕ್ಕಾಗಿ ತಮ್ಮ ಸುಮಾರು 7.59 ಹೆಕ್ಟೇರ್ ಜಮೀನನ್ನು ದಾನ ಮಾಡಿರುವುದಾಗಿ ಅವರು ಹೇಳಿದ್ದಾರೆ. ಚುನಾವಣೆಗೆ ಸ್ಪರ್ಧಿಸುವಂತೆ ಗ್ರಾಮಸ್ಥರೇ ಪ್ರೋತ್ಸಾಹಿಸಿದ್ದರು. ಅಲ್ಲದೆ, ತಮಗೆ ಜನರ ಬೆಂಬಲ ಸಿಗುವ ವಿಶ್ವಾಸವೂ ಇತ್ತು ಎಂದು ಹೇಳಿದರು.

“ನೀವು ಚುನಾವಣೆಗೆ ಸ್ಪರ್ಧಿಸಿ, ನಿಮ್ಮನ್ನು ಭಾರಿ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಗ್ರಾಮಸ್ಥರು ಹೇಳಿದ್ದರು. ಆದರೆ, ಮತಪೆಟ್ಟಿಗೆ ತೆರೆದಾಗ ನನಗೆ ಸಿಕ್ಕಿದ್ದು ಕೇವಲ 33 ಮತಗಳು. ಇನ್ನು 10 ಮತಗಳು ನೋಟಾ ಪಾಲಾದವು” ಎಂದು ಅವರು ತಿಳಿಸಿದರು.

Afzalpur News: ಶಾಸಕ ಎಂ.ವೈ.ಪಾಟೀಲರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ: ಇಬ್ಬರ ವಿರುದ್ಧ ಎಫ್‌ಐಆರ್

ಚುನಾವಣೆಯ ಸಂದರ್ಭದಲ್ಲಿ ತಾವು ಮತದಾರರಿಗೆ ಹಣ ಅಥವಾ ಮಾದಕ ವಸ್ತುಗಳನ್ನು ಹಂಚಿರಲಿಲ್ಲ. ಅಲ್ಲದೆ, ಪ್ರಚಾರಕ್ಕಾಗಿ ವಾಹನಗಳ ದೊಡ್ಡ ಬೆಂಗಾವಲು ಪಡೆಯನ್ನೂ ಬಳಸಿರಲಿಲ್ಲ ಎಂದು ಬಿಷ್ಣೋಯ್ ಹೇಳಿದರು. ತಾವು ಈ ಹಿಂದಿನಿಂದಲೂ ಬಳಸುತ್ತಿದ್ದ ಅದೇ ವಾಹನದಲ್ಲಿ ಜನರನ್ನು ಸಂಪರ್ಕಿಸಿ ಪ್ರಚಾರ ಮುಂದುವರಿಸಿದ್ದಾಗಿ ಅವರು ತಿಳಿಸಿದರು.

ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಬಿಷ್ಣೋಯ್, ಸಾಮಾಜಿಕ ಜಾಲತಾಣಗಳ ಜನಪ್ರಿಯತೆಗೂ ನೆಲಮಟ್ಟದ ಜನಬೆಂಬಲಕ್ಕೂ ವ್ಯತ್ಯಾಸವಿದೆ ಎಂಬುದನ್ನು ಒಪ್ಪಿಕೊಂಡರು. “ಸಾಮಾಜಿಕ ಜಾಲತಾಣವೇ ಬೇರೆ, ತಳಮಟ್ಟದ ಪರಿಸ್ಥಿತಿಯೇ ಬೇರೆ. ನನಗೆ ಬಂದ 33 ಮತಗಳಲ್ಲಿ 11 ಮತಗಳು ನನ್ನ ಕುಟುಂಬದವರಿಂದ ಬಂದಿವೆ. ಉಳಿದ ಮತಗಳು ನನ್ನೊಂದಿಗೆ ಓದಿದವರು ಮತ್ತು ನನಗೆ ಆತ್ಮೀಯರಾಗಿರುವವರಿಂದ ಬಂದಿವೆ” ಎಂದು ಅವರು ಹೇಳಿದರು.

ಆದರೆ, ಬಿಷ್ಣೋಯ್ ಚುನಾವಣೆಯ ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ. ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಮತದಾರರೊಂದಿಗೆ ಸಂಪರ್ಕ ಬೆಳೆಸುವುದು ಎಷ್ಟು ಮುಖ್ಯ ಎಂಬ ಪಾಠ ಕಲಿತಿದ್ದಾಗಿ ಅವರು ತಿಳಿಸಿದ್ದಾರೆ. ಸೋಲಿನಿಂದ ಹಿಂದೆ ಸರಿಯುವುದಿಲ್ಲ ಎಂದು ಪಣತೊಟ್ಟಿರುವ ಅವರು, ಗ್ರಾಮಸ್ಥರ ಜೀವನಮಟ್ಟ ಸುಧಾರಿಸಲು ತಮ್ಮ ಪ್ರಯತ್ನಗಳನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.