ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಗನಯಾತ್ರಿ ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಘೋಷಣೆ

Republic Day 2026: ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್, ಗಗನಯಾತ್ರಿ ಶುಭಾಂಶು ಶುಕ್ಲಾ ಅವರಿಗೆ ಕೇಂದ್ರ ಸರ್ಕಾರ ಅಶೋಕ ಚಕ್ರ ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ. ಅವರ ಸಾಧನೆ ದೇಶಕ್ಕೆ ಹೆಮ್ಮೆ ತಂದಿದ್ದು, ಭಾರತೀಯ ವಾಯುಸೇನೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಮೈಲುಗಲ್ಲಾಗಿ ಪರಿಗಣಿಸಲಾಗಿದೆ.

ಶುಭಾಂಶು ಶುಕ್ಲಾ, ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ, ಜ. 25: ಗಣರಾಜ್ಯೋತ್ಸವದ (Republic Day 2026) ಸಂದರ್ಭದಲ್ಲಿ ಭಾರತೀಯ ವಾಯುಪಡೆಯ (IAF) ಗ್ರೂಪ್ ಕ್ಯಾಪ್ಟನ್ ಮತ್ತು ಗಗನಯಾತ್ರಿ ಶುಭಾಂಶು ಶುಕ್ಲಾ ಅವರಿಗೆ ಅಶೋಕ ಚಕ್ರ ಘೋಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಖಾಸಗಿ ಆಕ್ಸಿಯಮ್ -4 ಕಾರ್ಯಾಚರಣೆಗೆ ಪೈಲಟ್ ಆಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಭೇಟಿ ನೀಡಿದ ಮೊದಲ ಭಾರತೀಯ ಇಸ್ರೋ ಗಗನಯಾತ್ರಿ (Indian ISRO astronaut) ಎಂಬ ಹೆಗ್ಗಳಿಕೆಗೆ ಪಾತ್ರರಾದ ಶುಕ್ಲಾ ಅವರಿಗೆ ಅಶೋಕ ಚಕ್ರ (Ashok Chakra) ನೀಡಿ ಗೌರವಿಸಲಾಗುವುದು ಎಂದು ವರದಿ ಹೇಳಿದೆ.

ಉತ್ತರ ಪ್ರದೇಶದಿಂದ ಗೌರವ್ ಸಮ್ಮಾನ್

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಕ್ಕೆ ಕೀರ್ತಿ ತಂದ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರನ್ನು ಉತ್ತರ ಪ್ರದೇಶ ಸರ್ಕಾರ ಸನ್ಮಾನಿಸಿದೆ. 'ಉತ್ತರ ಪ್ರದೇಶ ದಿನ 2026' ಕಾರ್ಯಕ್ರಮದಲ್ಲಿ ಶುಕ್ಲಾ ಅವರಿಗೆ ಗೌರವ ಸಮ್ಮಾನ್ ಪ್ರಶಸ್ತಿ ನೀಡಲಾಯಿತು. ಲಖನೌ ಮೂಲದ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರಿಗೆ ಯುಪಿ ಗೌರವ್ ಸಮ್ಮಾನ್ ನೀಡಿ ಗೌರವಿಸಲಾಗಿದೆ.

2025ರ ಜೂನ್ 26ರಂದು ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ ಉಡಾವಣೆಯಾದ ನಂತರ ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ತಲುಪುವ ಮೂಲಕ ಇತಿಹಾಸ ನಿರ್ಮಿಸಿದರು. ಅವರು ಐಎಸ್‌ಎಸ್‌ಗೆ ಕಾಲಿಟ್ಟ ಮೊದಲ ಭಾರತೀಯ ಗಗನಯಾತ್ರಿ ಎನಿಸಿಕೊಂಡರು. ರಾಕೇಶ್ ಶರ್ಮಾ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯರು ಇವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶುಭಾಂಶು ಶುಕ್ಲಾ ಜತೆಗೆ ಅಲಖ್ ಪಾಂಡೆ, ಡಾ ಹರಿಓಂ ಪನ್ವಾರ್, ರಶ್ಮಿ ಆರ್ಯ ಮತ್ತು ಡಾ ಸುಧಾಂಶು ಸಿಂಗ್ ಅವರಿಗೆ ಯುಪಿ ಸರ್ಕಾರ ಪ್ರಶಸ್ತಿ ನೀಡಿದೆ.

ಶುಭಾಂಶು ಶುಕ್ಲಾ ಯಾರು?

ಉತ್ತರ ಪ್ರದೇಶದ ಲಖನೌದಲ್ಲಿ ಜನಿಸಿದ ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (NDA) ಹಳೆಯ ವಿದ್ಯಾರ್ಥಿ. 2006ರಲ್ಲಿ ಭಾರತೀಯ ವಾಯುಪಡೆಗೆ ಫೈಟರ್ ಪೈಲಟ್ ಆಗಿ ಸೇರಿದ್ದ ಅವರು ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ. 2019ರಲ್ಲಿ ಅವರಿಗೆ ವಿಂಗ್ ಕಮಾಂಡರ್ ಮತ್ತು 2024ರ ಮಾರ್ಚ್‌ನಲ್ಲಿ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ದೊರೆತಿದೆ. ಇವರು 2,000 ಗಂಟೆಗಳಿಗೂ ಹೆಚ್ಚು ಕಾಲ ಯುದ್ಧ ವಿಮಾನಗಳನ್ನು ಹಾರಿಸಿದ ಅನುಭವ ಹೊಂದಿದ್ದಾರೆ.

2019ರಲ್ಲಿ ಗಗನಯಾನ ಮಿಷನ್‌ಗಾಗಿ ಆಯ್ಕೆಯಾದ ನಂತರ, ರಷ್ಯಾದ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ. ನಾಸಾ ಮತ್ತು ಆಕ್ಸಿಯಮ್ ಸ್ಪೇಸ್‍ನ ಸಹಯೋಗದೊಂದಿಗೆ ನಡೆಯುವ Ax-4 ಮಿಷನ್‍ನಲ್ಲಿ ಅವರು ಪೈಲಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.