ನವದೆಹಲಿ, ಸೆ. 15: ಸಿಜೆಪಿ ಪ್ರತಿಭಟನೆ ವೇಳೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಬಲಪಂಥೀಯ ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್‌ಗೆ (Swatantra Bhardwaj) ಮಧ್ಯಂತರ ಜಾಮೀನು ದೊರೆತಿದೆ. ಜುಲೈಯಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಕಾರ್ಯಕರ್ತೆಯ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಈತನ ಮೇಲಿತ್ತು. ಇದೀಗ ಬಲಪಂಥೀಯ ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ನೀಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲರ್ ಈ ಆದೇಶವನ್ನು ಪ್ರಕಟಿಸಿದರು. ಭಾರದ್ವಾಜ್‌ಗೆ 50,000 ರೂಗಳಗಳಪಾಯಿಗಳ ಜಾಮೀನು ಬಾಂಡ್ ಮತ್ತು ಅಷ್ಟೇ ಮೊತ್ತದ ಶ್ಯೂರಿಟಿಯ ಮೇಲೆ ಮಧ್ಯಂತರ ಜಾಮೀನು ನೀಡಲಾಯಿತು. ಈ ಸಂಬಂಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, 21 ವರ್ಷದ ಆರೋಪಿಯನ್ನು ಕಳೆದ ವಾರವಷ್ಟೇ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
ಈ ತಿಂಗಳ ಆರಂಭದಲ್ಲಿ ಬುಲಂದ್‌ಶಹರ್‌ನಲ್ಲಿ ಇನ್‌ಫ್ಲುಯೆನ್ಸರ್‌ನನ್ನು ಬಂಧಿಸುವಂತೆ ಒತ್ತಾಯಿಸಿ ಸಿಜೆಪಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ ಕೆಲವೇ ಗಂಟೆಗಳ ನಂತರ ಬಂಧಿಸಲಾಯಿತು.
ಕಿರುಕುಳ, ಹಲ್ಲೆ, ಬೆದರಿಕೆ, ವಿದ್ವೇಷದ ಪೋಸ್ಟ್; ಯಾರು ಈ ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್?
ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತೆಯ ತಂದೆಯ ತಲೆಯನ್ನು ಒಡೆದಿದ್ದಾಗಿ ಮತ್ತು ತಮ್ಮ ರಾಜಕೀಯ ಪ್ರಭಾವದಿಂದಾಗಿ ಬಂಧನದಿಂದ ಪಾರಾಗಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರದ್ವಾಜ್‌ನನ್ನು ವಶಕ್ಕೆ ಪಡೆಯಲಾಯಿತು. ಆತ್ಮರಕ್ಷಣೆಗಾಗಿ ತಾನು ಈ ಕೃತ್ಯ ಎಸಗಿರುವುದಾಗಿ ನಂತರ ಅವರು ಸಮರ್ಥಿಸಿಕೊಂಡರು.
ವಿದ್ಯಾರ್ಥಿ ಸಂಘಟನೆಯ ಕಾರ್ಯರ್ತೆಯ ತಂದೆಗೆ ಉಂಟಾದ ಗಾಯಗಳು ಸರಳ ಸ್ವರೂಪದ್ದಾಗಿವೆ ಎಂದು ದೆಹಲಿ ಪೊಲೀಸರು ಈ ಹಿಂದೆ ತಿಳಿಸಿದ್ದರು. ನಂತರ ಪೊಲೀಸರು ಭಾರದ್ವಾಜ್ ವಿರುದ್ಧದ ಹಲ್ಲೆಗೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಕ್ರಿಮಿನಲ್ ಬೆದರಿಕೆಯ ನಿಬಂಧನೆಗಳನ್ನು ಸೇರಿಸಿದರು. ಅವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರತ್ಯೇಕ ಪ್ರಕರಣವನ್ನೂ ದಾಖಲಿಸಲಾಗಿದೆ. ಸ್ವತಂತ್ರ ಭಾರದ್ವಾಜ್ ಬಂಧನದ ನಂತರ, ಜೈಲಿನಲ್ಲಿ ದೇಶವಿರೋಧಿ ಶಕ್ತಿಗಳಿಂದ ದಾಳಿಗೊಳಗಾಗುವ ಅಪಾಯವಿದೆ ಎಂದು ಅವರ ವಕೀಲರು ಆತಂಕ ವ್ಯಕ್ತಪಡಿಸಿದ್ದರು.