ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಿರುಕುಳ, ಹಲ್ಲೆ, ಬೆದರಿಕೆ, ವಿದ್ವೇಷದ ಪೋಸ್ಟ್‌; ಯಾರು ಈ ಇನ್‌ಫ್ಲುಯೆನ್ಸರ್‌ ಸ್ವತಂತ್ರ ಭಾರದ್ವಾಜ್‌? ಏನಿದು ವಿವಾದ?

Swatantra Bhardwaj: ಜುಲೈಯಲ್ಲಿ ದೆಹಲಿಯ ಜಂತರ್‌ ಮತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಸಿಜೆಪಿ ವಿದ್ಯಾರ್ಥಿ ನಾಯಕಿ ನಿಶು ಅಜಾದ್‌ ತಂದೆ ಮೇಲೆ ಹಲ್ಲೆ ನಡಸಿದ ಆರೋಪಕ್ಕೆ ಸಂಬಂಧಿಸಿದಂತೆ, ಬಲಪಂಥೀಯ ಇನ್‌ಫ್ಲುಯೆನ್ಸರ್‌ ಸ್ವತಂತ್ರ ಭಾರತದ್ವಾಜ್‌ನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏನಿದು ಪ್ರಕರಣ? ಸ್ವತಂತ್ರ ಭಾರತದ್ವಾಜ್‌ ಹಿನ್ನೆಲೆ ಏನು? ಇಲ್ಲಿದೆ ವಿವರ.

ಯಾರು ಈ  ಖಟ್ಟರ್‌ ಹಿಂದೂವಾದಿ ಸ್ವತಂತ್ರ ಭಾರದ್ವಾಜ್‌?

ಸ್ವತಂತ್ರ ಭಾರದ್ವಾಜ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Sep 5, 2026 8:54 PM

ನವದೆಹಲಿ, ಸೆ. 5: ಜುಲೈ 20ರಂದು ಜಂತರ್‌ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ ಸಿಜೆಪಿ ನಾಯಕಿ ನಿಶು ಅಜಾದ್‌ ಅವರ ತಂದೆ ಸಂಜಯ್‌ ಕುಮಾರ್‌ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಹಿಂದೂ ಕಾರ್ಯಕರ್ತ ಹಾಗೂ ಇನ್‌ಫ್ಲುಯೆನ್ಸರ್‌ ಸ್ವತಂತ್ರ ಭಾರದ್ವಾಜ್‌ (Swatantra Bhardwaj) ಅವರನ್ನು ದೆಹಲಿ ಪೊಲೀಸರು ಒಂದು ದಿನದ ಮಟ್ಟಿಗೆ ವಶಕ್ಕೆ ಪಡೆದುಕೊಂಡಿದ್ದಾರೆ. ಯಾರು ಸ್ವತಂತ್ರ ಭಾರದ್ವಾಜ್‌? ಅವರ ಸುತ್ತ ಸುತ್ತಿಕೊಂಡಿರುವ ವಿವಾದವೇನು? ಇಲ್ಲಿದೆ ಸಂಪೂರ್ಣ ವಿವರ.

ಶನಿವಾರ ಸೆಪ್ಟೆಂಬರ್‌ (5) ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲೇರ್ ಅವರ ನಿವಾಸದಲ್ಲಿ ಸ್ವತಂತ್ರ ಭಾರದ್ವಾಜ್ ಅವರನ್ನು ಹಾಜರುಪಡಿಸಲಾಯಿತು. ಅವರ ಪರ ವಕೀಲರು ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾದರು ಎಂದು ನ್ಯಾಯಾಲಯದ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸತ್ ಭವನದ ರಸ್ತೆಯಲ್ಲಿರುವ ಪೊಲೀಸ್ ಠಾಣೆಯ ಹೊರಗೆ ಭಾರದ್ವಾಜ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕೆಲವೇ ಗಂಟೆಗಳಲ್ಲಿ ಬುಲಂದ್‌ಶಹರ್‌ನಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಸ್ವತಂತ್ರ ಭಾರದ್ವಾಜ್‌ ಅವರ ವಿವಾದಾತ್ಮಕ ಹೇಳಿಕೆ:



ಪಾಡಕಾಸ್ಟ್‌ ವಿಡಿಯೊದಲ್ಲಿ ಏನಿದೆ?

ಇತ್ತೀಚಿಗೆ ವೈರಲ್ ಆದ ಪಾಡಕಾಸ್ಟ್‌ ವಿಡಿಯೊದಲ್ಲಿ ಸ್ವತಂತ್ರ ಭಾರದ್ವಾಜ್, ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ತಾನು ಸಿಜೆಪಿ ಪ್ರತಿಭಟನಾಕಾರ ಸಂಜಯ್‌ ಕುಮಾರ್‌ ಅವರ ತೆಲೆಯನ್ನು ಒಡೆದುಹಾಕಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಘಟನೆಯ ನಂತರ ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಸೇರಿ ಪ್ರಮುಖ ರಾಜಕಾರಣಿಗಳು ಬೆಂಬಲ ಸೂಚಿಸಿದ್ದಾಗಿ ಹೇಳಿಕೊಂಡಿದ್ದ ವಿಡಿಯೊ ವೈರಲ್‌ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ತನ್ನ ವಿರುದ್ಧ ಸೆಕ್ಷೆನ್‌ 307 (ಕೊಲೆ ಯತ್ನ) ಪ್ರಕರಣ ದಾಖಲಾಗಿದ್ದರೂ ಪ್ರಭಾವಿ ನಾಯಕರ ನೆರವಿನಿಂದ ಕಾನೂನು ಕುನಿಕೆಯಿಂದ ತಪ್ಪಿಸಿಕೊಂಡಿದ್ದಾಗಿ ಪಾಡ್‌ಕಾಸ್ಟ್‌ ವಿಡಿಯೊದಲ್ಲಿ ಜಂಭ ಕೊಚ್ಚಿಕೊಂಡಿದ್ದರು. ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಸ್ವತಂತ್ರ ಭಾರದ್ವಾಜ್‌, ʼʼನಾನು ಯಾವುದೇ ರೀತಿ ಉದ್ದೇಶಪೂರ್ವಕವಾಗಿ ದಾಳಿ ನಡೆಸಿಲ್ಲ. 10ರಿಂದ 15 ಜನರು ನನ್ನನ್ನುಸುತ್ತುವರಿದಾಗ ಆತ್ಮರಕ್ಷಣೆಗಾಗಿ ಹೊಡೆದಿದ್ದೆ. ಈ ವೇಳೆ ಸಂಜಯ್‌ ಕುಮಾರ ಅವರ ತಲೆಗೆ ಏಟು ಬಿದ್ದಿತ್ತು. ನಾನು ಹೇಳಿದ್ದ ರಾಜಕೀಯ ನಾಯಕರ ಹೆಸರು ಸುಮ್ಮನೆ ನೀಡಿದ ಹೇಳಿಕೆಗಳು.ʼ ಎಂದು ಸ್ಪಷ್ಟಣೆ ನಿಡಿದ್ದರು.

ಸಿಜೆಪಿ ಪ್ರತಿಭಟನಾಕಾರರ ಮೇಲೆ ಹಲ್ಲೆ ಪ್ರಕರಣ: ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್ ಬಂಧನ

ಪಾಡ್‌ಕಾಸ್ಟ್ ವೈರಲ್ ಆದ ನಂತರ ಸಂತ್ರಸ್ತ ಕುಟುಂಬದ ವಿರುದ್ಧ ಆನ್‌ಲೈನ್‌ನಲ್ಲಿ ನಿಂದನೆಗಳು ಹೆಚ್ಚಾದವು. ಅಪ್ರಾಪ್ತ ವಿದ್ಯಾರ್ಥಿನಿಗೆ ಅತ್ಯಾಚಾರದ ಬೆದರಿಕೆಗಳು ಬಂದಿದ್ದವು. ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಪೋಕ್ಸೋ ಕಾಯ್ದೆ ಹಾಗೂ ಅಪರಾಧ ಬೆದರಿಕೆಯಡಿ ಹೊಸ ಎಫ್‌ಐಆರ್ ದಾಖಲಿಸಿಕೊಂಡರು.

ಸ್ವತಂತ್ರ ಭಾರದ್ವಾಜ್ ಬಂಧನಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು, ಸಿಜೆಪಿ ಕಾರ್ಯಕರ್ತರು ಮತ್ತು ಸಂಸದ ಚಂದ್ರಶೇಖರ್ ಆಜಾದ್ ಸೇರಿ ಪ್ರಮುಖ ನಾಯಕರು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿಗಳ ತೀವ್ರ ಹೋರಾಟಕ್ಕೆ ಮಣಿದ ದೆಹಲಿ ಪೊಲೀಸರು, ಸ್ವತಂತ್ರ ಭಾರದ್ವಾಜ‌ನನ್ನು ಸೆರೆ ಹಿಡಿಯಲು 72 ಗಂಟೆಗಳ ಸಮಯಾವಕಾಶ ಕೇಳಿದ್ದರು. ಪೊಲೀಸರು 72 ಗಂಟೆಯ ಒಳಗಡೆ ನೈಥ್ಲಾ ಗ್ರಾಮದಿಂದ ಬುಲೆಟ್‌ ಬೈಕ್‌ನಲ್ಲಿ ಹೆಲ್ಮೆಟ್‌ ಧರಿಸಿ ಪರಾರಿಯಾಗಲು ಯತ್ನಿಸಿದ್ದ ಸ್ವತಂತ್ರ ಭಾರದ್ವಾಜ್‌ನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.

ಯಾರು ಈ ಸ್ವತಂತ್ರ ಭಾರದ್ವಾಜ್‌?

ಸಾಮಾಜಿಕ ಜಾಲತಾಣಗಳಲ್ಲಿ ಸನಾತನಿ ಯೋಧ ಹಾಗೂ ಕಟ್ಟಾ ಹಿಂದುತ್ವವಾದಿ ಎಂದು ಕರೆದುಕೊಳ್ಳುವ 21 ವರ್ಷದ ಸ್ವತಂತ್ರ ಭಾರದ್ವಾಜ್, ಬಿಹಾರ ಮೂಲದವರಾಗಿದ್ದು, ದೆಹಲಿಯಲ್ಲಿ ವಾಸಿಸುತ್ತಿದ್ದರು. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ ಹೊಂದಿರುವ ಇವರು ಆಕ್ರಮಣಕಾರಿ ಪೋಸ್ಟ್‌ಗಳು ಹಾಗೂ ಜನಪ್ರಿಯ ನಾಯಕರೊಂದಿಗೆ ಇರುವ ಫೋಟೊಗಳನ್ನು ಹಂಚಿಕೊಂಡು ಬಿಲ್ಡಪ್ ನೀಡುತ್ತಿದ್ದರು.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.