ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಆಡಳಿತ ಅಂತ್ಯವಾದ ಖುಷಿ; 15 ವರ್ಷಗಳ ಬಳಿಕ ಕ್ಷೌರ ಮಾಡಿಸಿಕೊಂಡ ಬಿಜೆಪಿ ಕಾರ್ಯಕರ್ತ

West Bengal Assembly Election Results: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರಕ್ಕೆ ಕುಸಿದು ಬಿದ್ದಿದ್ದು, ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ವಿಶಿಷ್ಟ ಶಪಥ ತೀರಿಸಿಕೊಂಡಿದ್ದಾರೆ. 15 ವರ್ಷಗಳ ಬಳಿಕ ಕ್ಷೌರ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ.

15 ವರ್ಷಗಳ ಬಳಿಕ ಕ್ಷೌರ ಮಾಡಿಸಿಕೊಂಡ ಬನೇಶ್ವರ್‌ ಬರ್ಮನ್‌

ಕೋಲ್ಕತ್ತಾ, ಮೇ 10: ಮೇ 4ರಂದು ಪ್ರಕಟಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Assembly Election Results) ಫಲಿತಾಂಶ ಹಲವು ಮಹತ್ವದ ರಾಜಕೀಯ ಬೆಳವಣಿಗೆಗೆ ಕಾರಣವಾಯ್ತು. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ (BJP) ಅಧಿಕಾರಕ್ಕೆ ಬಂದರೆ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಡಳಿತ ಕುಸಿದು ಬಿದ್ದಿದೆ. ಈ ಮಧ್ಯೆ ಟಿಎಂಸಿ ಆಡಳಿತ ಕೊನೆಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಬರೋಬ್ಬರಿ 15 ವರ್ಷಗಳ ಬಳಿಕ ಕ್ಷೌರ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ. 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದಾಗ ಮಾಡಿದ್ದ ಶಪಥದಂತೆ ಬಿಜೆಪಿ ಕಾರ್ಯಕರ್ತ ಬಾಮನ್‌ ಪಾರಾ ನಿವಾಸಿ ಬನೇಶ್ವರ್‌ ಬರ್ಮನ್‌ (Baneshwar Barman) 15 ವರ್ಷ ಕೂದಲು ಕತ್ತರಿಸಿಕೊಂಡಿರಲಿಲ್ಲ. ಇದೀಗ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮೂಲಕ ಅವರ ಪ್ರತಿಜ್ಞೆ ಈಡೇರಿದೆ.

ವೃತ್ತಿಯಲ್ಲಿ ಇಟ್ಟಿಗೆ ಕಾರ್ಮಿಕರಾಗಿರುವ ಬನೇಶ್ವರ್‌ ಬಿಜೆಪಿ ಕಟ್ಟಾ ಬೆಂಬಲಿಗರೆನಿಸಿಕೊಂಡಿದ್ದಾರೆ. 2011ರಲ್ಲಿ ಎಡಪಕ್ಷದ ಆಡಳಿತ ಕೊನೆಗೊಳಿಸಿ ಟಿಎಂಸಿ ಅಧಿಕಾರಕ್ಕೆ ಬರುತ್ತಿದ್ದಂತೆ ಬನೇಶ್ವರ್‌ ವಿಶಿಷ್ಟ ಶಪಥ ಕೈಗೊಂಡಿದ್ದರು.

15 ವರ್ಷಳ ಬಳಿಕ ಕ್ಷೌರ ಮಾಡಿಸಿಕೊಂಡ ಬಿಜೆಪಿ ಕಾರ್ಯಕರ್ತ:



ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವವರೆಗೆ ಕ್ಷೌರ ಮಾಡಿಸಿಕೊಳ್ಳುವುದಿಲ್ಲ ಎಂದು 15 ವರ್ಷಗಳ ಹಿಂದೆ ಬನೇಶ್ವರ್‌ ಶಪಥ ಮಾಡಿದ್ದರು. ಅದರಂತೆ ನಡೆದುಕೊಂಡಿದ್ದರು ಕೂಡ. ತಮ್ಮ ಕನಸು ಈಡೇರಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ನೆರೆಹೊರೆಯವರು ಮತ್ತು ಬಿಜೆಪಿ ಬೆಂಬಲಿಗರ ಸಮ್ಮುಖದಲ್ಲಿ ಬನೇಶ್ವರ್‌ ಕ್ಷೌರ ಮಾಡಿಸಿಕೊಂಡರು. ಈ ವೇಳೆ ಮಾತನಾಡಿದ ಅವರು ಬಿಜೆಪಿ ಅಧಿಕಾರಕ್ಕೆ ಬಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಬಿಜೆಪಿ ಗೆಲುವಿನ ಬಳಿಕ ಪಶ್ಚಿಮ ಬಂಗಾಳದಿಂದ ಪಲಾಯನ ಮಾಡುತ್ತಿರುವ ವಲಸಿಗರು!

ʼʼತೃಣಮೂಲ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಸೆಲೂನ್‌ಗೂ ಭೇಟಿ ನೀಡಿರಲಿಲ್ಲʼʼ ಎಂದು ಬನೇಶ್ವರ್‌ ತಿಳಿಸಿದ್ದಾರೆ. ಉದ್ದವಾಗಿ ಬೆಳೆದ ಕೂದಲು ಯಾವತ್ತಾದರೂ ಕೆಲಸಕ್ಕೆ ಅಡ್ಡಿಯಾಗಿತ್ತೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ʼʼಯಾವತ್ತೂ ಇದು ನನ್ನ ಕೆಲಸದ ಮೇಲೆ ಪರಿಣಾಮ ಬೀರಿಲ್ಲ. ಕೆಲಸಕ್ಕೆ ಹೋಗುವ ಮುನ್ನ ಕೂದಲನ್ನು ಗಟ್ಟಿಯಾಗಿ ಕಟ್ಟುತ್ತಿದ್ದೆʼʼ ಎಂದಿದ್ದಾರೆ.

ʼʼಮೇ 4ರಂದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನನ್ನ ಕಣ್ಣು ಟಿವಿಯತ್ತ ನೆಟ್ಟಿತ್ತು. ಬಿಜೆಪಿ 100 ಸ್ಥಾನಗಳ ಗಡಿ ದಾಟುತ್ತಿದ್ದಂತೆ ನನ್ನ ಮನಸ್ಸು ತುಂಬಿ ಬಂತುʼʼ ಎಂದು ವಿವರಿಸಿದ್ದಾರೆ. ಸಾಂಕೇತಿಕ ಪ್ರತಿಭಟನೆಯ ಬಳಿಕ ಇದೀಗ ಸಾಮಾನ್ಯ ಜೀವನಕ್ಕೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ. ʼʼಇದೀಗ ಬಿಜೆಪಿ ಸರ್ಕಾರ ರಚನೆಯಾಗಿದೆ. ಹೊಸದಾಗಿ ಬೆಳೆಯುವ ಕೂದಲನ್ನು ಮನಸ್ಸು ಬಂದಾಗಲೆಲ್ಲ ಕತ್ತರಿಸುತ್ತೇನೆʼʼ ಎಂದು ಹೇಳಿದ್ದಾರೆ. ಜತೆಗೆ ಬರ್ಮನ್‌ ಮನೆಯವರು ನೆರೆದವರಿಗೆ ಮಂಡಕ್ಕಿ ಹಂಚಿ ಬಿಜೆಪಿಯ ಗೆಲುವನ್ನು ಸಂಭ್ರಮಿಸಿದರು. ಟಿಎಂಸಿಯ ಆಡಳಿತದಿಂದಾಗಿ 15 ವರ್ಷಗಳಿಂದ ತಮ್ಮ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ ಎಂದು ಇದೇ ವೇಳೆ ಸ್ಥಳೀಯರು ದೂರಿದ್ದಾರೆ. ತಮ್ಮ ಕಟುಂಬವಲ್ಲದೆ ಸುತ್ತಮುತ್ತಲಿನ ನಿವಾಸಿಗಳೂ ತೊಂದರೆ ಅನುಭವಿಸಿದ್ದಾರೆ. ಅದಕ್ಕೆಲ್ಲ ವಿರಾಮ ಬೀಳಲಿದೆ ಎಂದು ಬರ್ಮನ್‌ ಹೇಳಿದ್ದಾರೆ.

293 ಸೀಟ್‌ಗಳ ಪೈಕಿ 207 ಕಡೆ ಜಯ ಗಳಿಸಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ, ಟಿಎಂಸಿ 80 ಸೀಟ್‌ಗೆ ಸೀಮಿತವಾಗಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author