ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಶ್ಚಿಮ ಬಂಗಾಳದ ಬಿಜೆಪಿ ಸಚಿವ ಸಂಪುಟಕ್ಕೆ ಆಯ್ಕೆಯಾದ ಏಕೈಕ ಮಹಿಳೆ ಅಗ್ನಿಮಿತ್ರ ಪಾಲ್ ಯಾರು? ಏನಿವರ ಹಿನ್ನೆಲೆ?

BJP leader Agnimitra Paul: 51 ವರ್ಷದ ಬಿಜೆಪಿ ನಾಯಕಿ ಅಗ್ನಿಮಿತ್ರ ಪಾಲ್ ಪಶ್ಚಿಮ ಬಂಗಾಳ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದಿಲೀಪ್ ಘೋಷ್, ಅಶೋಕ್ ಕೀರ್ತಾನಿಯಾ, ಕ್ಷುದಿರಾಮ್ ತುಡು ಮತ್ತು ನಿಸಿತ್ ಪ್ರಾಮಾಣಿಕ್ ಅವರೊಂದಿಗೆ ಅಗ್ನಿಮಿತ್ರ ಪಾಲ್ ಸಂಪುಟಕ್ಕೆ ಸೇರ್ಪಡೆಗೊಂಡರು. ಈ ಮೂಲಕ ಬಂಗಾಳದ ಹೊಸ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆ ಎನಿಸಿಕೊಂಡಿದ್ದಾರೆ.

ಬಂಗಾಳದ ನೂತನ ಸಚಿವೆ ಅಗ್ನಿಮಿತ್ರ ಪಾಲ್ ಯಾರು?

ಅಗ್ನಿಮಿತ್ರ ಪಾಲ್ ಮತ್ತು ನರೇಂದ್ರ ಮೋದಿ -

Priyanka P
Priyanka P May 9, 2026 5:33 PM

ಕೋಲ್ಕತ್ತಾ, ಮೇ 9: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸರ್ಕಾರದಲ್ಲಿ ಪ್ರಸ್ತುತ ಒಬ್ಬ ಮಹಿಳೆ ಮಾತ್ರ ಇದ್ದಾರೆ. ಆ ಮಹಿಳೆ 51 ವರ್ಷದ ಬಿಜೆಪಿ ನಾಯಕಿ ಅಗ್ನಿಮಿತ್ರ ಪಾಲ್ (Agnimitra Paul) ಯಾರೆಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಫ್ಯಾಷನ್ ಡಿಸೈನರ್‌ನಿಂದ ರಾಜಕಾರಣಿಯಾಗಿ ಪರಿವರ್ತನೆಗೊಂಡ ಅವರು ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರೊಂದಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಗ್ನಿಮಿತ್ರ ಪಾಲ್ ಬಿಜೆಪಿ ಹಿರಿಯ ನಾಯಕರಾದ ದಿಲೀಪ್ ಘೋಷ್, ಅಶೋಕ್ ಕೀರ್ತಾನಿಯಾ, ಕ್ಷುದಿರಾಮ್ ತುಡು ಮತ್ತು ನಿಸಿತ್ ಪ್ರಾಮಾಣಿಕ್ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಬಂಗಾಳದ ಹೊಸ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾದರು.

ಅವರ ಪದೋನ್ನತಿ ಬಿಜೆಪಿಗೆ ರಾಜಕೀಯವಾಗಿ ಮಹತ್ವದ ಸಮಯದಲ್ಲಿ ನಡೆದಿದ್ದು, ಮಹಿಳಾ ಪ್ರತಿನಿಧಿತ್ವದ ಪರ ಹೋರಾಟಗಾರರಾಗಿ ತಾವು ಇರುವುದನ್ನು ಬಿಜೆಪಿ ಹಲವು ಬಾರಿ ಪ್ರಚಾರ ಮಾಡಿದೆ. ಇದೇ ವೇಳೆ ವಿಧಾನಮಂಡಲಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೆ ತರುವ ವಿಚಾರದಲ್ಲಿ ವಿಳಂಬ ಮಾಡಿರುವುದಾಗಿ ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ಆರೋಪಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಮಮತಾ ಅವರ ಮಹಿಳಾ ಕೇಂದ್ರಿತ ರಾಜಕೀಯ ಪ್ರಭಾವ ಹೆಚ್ಚಿರುವ ಪಶ್ಚಿಮ ಬಂಗಾಳದಲ್ಲಿ, ಪಾಲ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದನ್ನು ಬಿಜೆಪಿ ಸಾಂಕೇತಿಕ ಹಾಗೂ ತಂತ್ರಾತ್ಮಕ ಹೆಜ್ಜೆಯಾಗಿ ಕಾಣುವ ಸಾಧ್ಯತೆ ಇದೆ.

ಬಂಗಾಳ ಚುನಾವಣೆ ಫಲಿತಾಂಶದ ಮೇಲೆ ‘ಎಸ್‌ಐಆರ್’ ಪ್ರಭಾವ ಬೀರಿದೆಯೇ?

ಅಸನ್ಸೋಲ್ ದಕ್ಷಿಣದಿಂದ ಎರಡು ಬಾರಿ ಶಾಸಕಿ ಮತ್ತು ಬಿಜೆಪಿಯ ಬಂಗಾಳ ಉಪಾಧ್ಯಕ್ಷೆಯಾಗಿದ್ದ ಪಾಲ್, 2026ರ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಪಕ್ಷದ ಅತ್ಯಂತ ಗುರುತಿಸಬಹುದಾದ ಮಹಿಳಾ ನಾಯಕಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಟಿಎಂಸಿಯ ತಪಸ್ ಬ್ಯಾನರ್ಜಿ ಅವರನ್ನು 40,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.

ಫ್ಯಾಷನ್ ಡಿಸೈನರ್

2019ರಲ್ಲಿ ರಾಜಕೀಯ ಪ್ರವೇಶಿಸುವ ಮೊದಲು, ಪಾಲ್ ಕೋಲ್ಕತ್ತಾದಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದರು. ಅವರು ಶ್ರೀದೇವಿ ಮತ್ತು ಹೇಮಾ ಮಾಲಿನಿ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳಿಗೆ ಬಟ್ಟೆಗಳನ್ನು ವಿನ್ಯಾಸಗೊಳಿಸಿದ್ದರು. ಬಂಗಾಳದ ಸಾಂಪ್ರದಾಯಿಕ ಕರಕುಶಲ ಕಾಂತ ಕಸೂತಿಯನ್ನು ಹೆಚ್ಚಾಗಿ ವಿನ್ಯಾಸ ಮಾಡುತ್ತಿದ್ದರು. ಲಾಕ್ಮೆ ಫ್ಯಾಷನ್ ವೀಕ್ ಸೇರಿ ಹಲವು ಕಾರ್ಯಕ್ರಮಗಳಲ್ಲಿ ತಮ್ಮ ವಿನ್ಯಾಸದ ಬಟ್ಟೆಗಳನ್ನು ಪ್ರದರ್ಶಿಸುತ್ತಿದ್ದರು.

ಅಸನ್ಸೋಲ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಪಾಲ್, ಫ್ಯಾಷನ್ ಡಿಸೈನರ್ ಆಗುವ ಮುನ್ನ ಸಸ್ಯಶಾಸ್ತ್ರವನ್ನು ಅಧ್ಯಯನ ಮಾಡಿದ್ದರು. ನಂತರ ಅವರು ಫ್ಯಾಷನ್‌ ಡಿಸೈನರ್ ಆಗಿ ಯಶಸ್ವಿ ವೃತ್ತಿಜೀವನವನ್ನು ಆರಂಭಿಸಿದರು. ಬಳಿಕ ಮಹಿಳಾ ಸಬಲೀಕರಣ ಮತ್ತು ತಳಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡರು.

ಮಣ್ಣಿನ ಮಗಳು

ಬಿಜೆಪಿಯಲ್ಲಿ ಅವರ ಬೆಳವಣಿಗೆ ವೇಗವಾಗಿದೆ. ಮಹಿಳಾ ಮೋರ್ಚಾ ಸೇರುವುದರಿಂದ ಹಿಡಿದು ಬಂಗಾಳದಲ್ಲಿ ಪಕ್ಷದ ಪ್ರಮುಖ ಪ್ರಚಾರಕರಲ್ಲಿ ಒಬ್ಬರಾಗುವವರೆಗೆ, ಪಾಲ್ ತಮ್ಮನ್ನು ಮಣ್ಣಿನ ಮಗಳು ಎಂಬುದಾಗಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಅಂತಿಮವಾಗಿ ಸುವೇಂದು ಅಧಿಕಾರಿಯನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡುವ ಮೊದಲು, ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಇವರ ಹೆಸರೂ ಕೇಳಿಬಂದಿತ್ತು.

ಅಂದಹಾಗೆ, ವಿವಾದಗಳಿಂದ ಅಗ್ನಿಮಿತ್ರ ಪಾಲ್ ಕೂಡ ಹೊರತಾಗಿಲ್ಲ. ಅವರ ಚುನಾವಣಾ ಅಫಿಡವಿಟ್ ಪ್ರಕಾರ, ಕಾನೂನುಬಾಹಿರ ಸಭೆ, ಗಲಭೆ ಮತ್ತು ಪ್ರತಿಭಟನೆಗೆ ಸಂಬಂಧಿಸಿದ ಅಪರಾಧಗಳು ಸೇರಿದಂತೆ ಅವರ ವಿರುದ್ಧ 23 ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ.