ಬೆಂಗಳೂರು: ನವದೆಹಲಿ ಭಾರತ್ ಮಂಟಪದಲ್ಲಿ ನಡೆದ ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ಭಾರತದ ಮೊದಲ AI-ಚಾಲಿತ ಏರ್ ಟ್ಯಾಕ್ಸಿ ಮಾದರಿಯನ್ನು ಪ್ರದರ್ಶಿಸಲಾಯಿತು. ವಿಜ್ಞಾನ ಕತೆಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ “ಹಾರುವ ಟ್ಯಾಕ್ಸಿ” ಯೋಚನೆ ಈಗ ನಿಜವಾಗುವ ಹಂತಕ್ಕೆ ಬಂದಿದೆ. ಈ ಯೋಜನೆಯನ್ನು ಐಐಟಿ ಮದ್ರಾಸ್ ಸಹಯೋಗದೊಂದಿಗೆ “ದಿ ಇ-ಪ್ಲೇನ್ ಕಂಪನಿ” ಅಭಿವೃದ್ಧಿಪಡಿಸಿದೆ. ಇದು ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಅಂಡ್ ಲ್ಯಾಂಡಿಂಗ್ (eVTOL) ತಂತ್ರಜ್ಞಾನ ಆಧಾರಿತ ವಿಮಾನವಾಗಿದ್ದು, ನಗರಗಳಲ್ಲಿ ಸಂಚಾರದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲು ರೂಪಿಸಲಾಗಿದೆ.
ರನ್‌ವೇ ಅಗತ್ಯವಿಲ್ಲ
ಸಾಂಪ್ರದಾಯಿಕ ವಿಮಾನಗಳಿಗಿಂತ ವಿಭಿನ್ನವಾಗಿ, ಈ eVTOL ವಿಮಾನವು ನೆಲದಿಂದ ಲಂಬವಾಗಿ ಆಕಾಶಕ್ಕೆ ಏರಿ, ಆಕಾಶದಲ್ಲಿ ನಿಗದಿತ ಎತ್ತರಕ್ಕೆ ಹೋದ ಮೇಲೆ ಅಲ್ಲಿಂದ ಅಡ್ಡವಾಗಿ ಚಲಿಸುತ್ತಾ ಹೋಗಲಿದ್ದು, ದೊಡ್ಡ ರನ್‌ವೇಗಳ ಅವಶ್ಯಕತೆ ಇಲ್ಲ ಎನ್ನಲಾಗಿದೆ. ದಟ್ಟ ನಗರ ಪ್ರದೇಶಗಳಲ್ಲಿ, ಸಣ್ಣ ಲ್ಯಾಂಡಿಂಗ್ ಪ್ಯಾಡ್‌ಗಳಲ್ಲಿ ಇದು ಕಾರ್ಯನಿರ್ವಹಿಸಲಿದ್ದು, , ಜನರ ಕೆಗೆಟಕುವ ಬೆಲೆಯಲ್ಲಿ ಈ ಸೇವೆಗಳನ್ನು ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಕೇವಲ 8 ನಿಮಿಷದಲ್ಲಿ 36 ಕಿ.ಮೀ ಪ್ರಯಾಣ
ಕಂಪನಿಯ ಪ್ರಕಾರ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಬಿ ಸಿಟಿಗೆ 36 ಕಿ.ಮೀ ಪ್ರಯಾಣ ರಸ್ತೆ ಮಾರ್ಗದಲ್ಲಿ ಸುಮಾರು 2 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ. ಆದರೆ ಏರ್ ಟ್ಯಾಕ್ಸಿಯಲ್ಲಿ ಅದೇ ದೂರವನ್ನು ಕೇವಲ 8 ನಿಮಿಷಗಳಲ್ಲಿ ಕ್ರಮಿಸಬಹುದಾಗಿದ್ದು, ಅಂದಾಜು ದರ ಸುಮಾರು 1,700 ರೂ. ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಪ್ರಾರಂಭದಲ್ಲಿ ಪ್ರೀಮಿಯಂ ಸೇವೆಯಾಗಿ ಲಭ್ಯವಾಗುವ ಸಾಧ್ಯತೆ ಇದ್ದರೂ, ಭವಿಷ್ಯದಲ್ಲಿ ಸಾಮಾನ್ಯ ಪ್ರಯಾಣಿಕರಿಗೂ ಲಭ್ಯವಾಗುವಂತೆ ದರವನ್ನು ಕಡಿಮೆ ಮಾಡುವ ಉದ್ದೇಶವಿದೆ.
ಇಂದು ನಿಮ್ಮ ಸ್ಮಾರ್ಟ್‌ಫೋನ್‌ಗೆ ತುರ್ತು ಎಚ್ಚರಿಕೆ ಸಂದೇಶ ಬಂದಿದೆಯೇ? ಇದರ ಅರ್ಥ ಏನು ಗೊತ್ತಾ?
‘ಮೇಕ್ ಇನ್ ಇಂಡಿಯಾ’ಗೆ ಉತ್ತೇಜನ
ಇದು ಸ್ವದೇಶಿ ಉತ್ಪನ್ನವಾಗಲಿದ್ದು, ವಿಮಾನ ದೇಹ, ಏರ್‌ಫ್ರೇಮ್ ಮತ್ತು ಪ್ರೊಪೆಲ್ಲರ್‌ಗಳನ್ನು ಭಾರತದಲ್ಲೇ ತಯಾರಿಸಲಾಗುತ್ತಿದೆ. ಪ್ರಮುಖ ತಾಂತ್ರಿಕ ವಿನ್ಯಾಸಗಳು ದೇಶದಲ್ಲೇ ರೂಪಗೊಂಡಿದ್ದು, ಕೆಲವು ಪ್ರಮುಖ ಘಟಕಗಳು ವಿದೇಶದಲ್ಲಿ ತಯಾರಾಗಲಿವೆ.
ಅನುಮೋದನೆ ನೀಡಿದ DGCA
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಕಂಪನಿಗೆ ವಿನ್ಯಾಸ ಸಂಸ್ಥೆ ಅನುಮೋದನೆ (DOA) ನೀಡಿದೆ. ಅಂತಿಮ ಉತ್ಪಾದನಾ ಮಾದರಿ ಸಿದ್ಧವಾದ ನಂತರ ಪರೀಕ್ಷಾ ಹಾರಾಟಗಳು ಆರಂಭವಾಗಲಿವೆ.
ಮೊದಲು ಏರ್ ಆಂಬ್ಯುಲೆನ್ಸ್ ಸೇವೆ
ವಾಣಿಜ್ಯ ಏರ್ ಟ್ಯಾಕ್ಸಿ ಸೇವೆ ಆರಂಭಿಸುವ ಮೊದಲು 2027ರಲ್ಲಿ ಏರ್ ಆಂಬ್ಯುಲೆನ್ಸ್ ಸೇವೆ ಆರಂಭಿಸುವ ಯೋಜನೆ ಇದೆ. ಬೆಂಗಳೂರು, ಚೆನ್ನೈ, ಪುಣೆ, ಮುಂಬೈ ಮತ್ತು ಅಹಮದಾಬಾದ್ ನಗರಗಳಲ್ಲಿ ಆರಂಭಿಕ ಸೇವೆ ಲಭ್ಯವಾಗಲಿದೆ.
ಇನ್ನು ಸದ್ಯದ ವಿನ್ಯಾಸದಲ್ಲಿ ಪೈಲಟ್ ಸೇರಿ 3 ಆಸನಗಳಿದ್ದು, ಮುಂದಿನ ಹಂತದಲ್ಲಿ 19 ಆಸನಗಳ ದೊಡ್ಡ ಮಾದರಿಯನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ. ದೊಡ್ಡ ದೋಡ ನಗರಗಳ ಟ್ರಾಫಿಕ್ ಸಮಸ್ಯೆಗೆ ಪರ್ಯಾಯವಾಗಿ, ಪರಿಸರ ಸ್ನೇಹಿ ಹಾಗೂ ವೇಗದ ಸಂಚಾರ ಆಯ್ಕೆಯಾಗಿ ಈ ಏರ್ ಟ್ಯಾಕ್ಸಿ ಸೇವೆ ರೂಪುಗೊಳ್ಳುತ್ತಿದೆ.