ಭೋಪಾಲ್, ಮೇ 18: ಮಾಜಿ ಮಿಸ್ ಪುಣೆ ಹಾಗೂ ನೋಯ್ಡಾದ ಎಂಬಿಎ ಪದವೀಧರೆಯಾಗಿದ್ದ 33 ವರ್ಷದ ತ್ವಿಶಾ ಶರ್ಮಾ (Twisha Sharma) ಇತ್ತೀಚೆಗೆ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿರುವ ತಮ್ಮ ಪತಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಮಾರ್ಕೆಟಿಂಗ್ ಕ್ಷೇತ್ರ, ಸೌಂದರ್ಯ ಸ್ಪರ್ಧೆಗಳು ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ಮೇ 12ರಂದು ಕಟಾರಾ ಹಿಲ್ಸ್‌ನಲ್ಲಿ ಪತಿ ಸಮರ್ಥ್ ಸಿಂಗ್‌ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಕೀಲ ಸಮರ್ಥ್ ಮತ್ತು ತ್ವಿಶಾ 2024ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾಗಿದ್ದು, 2025ರ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.
ತ್ವಿಶಾ ಜರ್ಮನ್ ಅಕಾಡೆಮಿ ಆಫ್ ಡಿಜಿಟಲ್ ಎಜುಕೇಶನ್‌ನಲ್ಲಿ ಮ್ಯಾನೇಜರ್ ಆಗಿ ದೀರ್ಘಕಾಲ ಕೆಲಸ ಮಾಡಿದ್ದರು ಮತ್ತು ತೆಲುಗಿನ ‘ಮುಗ್ಗುರು ಮೊನಗಾಳ್ಳು’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ವೃತ್ತಿಪರ ಬದುಕಿನ ಹೊರತಾಗಿ ಅವರು ಪ್ರಮಾಣೀಕೃತ ಯೋಗ ತರಬೇತುದಾರರು ಮತ್ತು ವಿಪಸ್ಸಾನಾ ಧ್ಯಾನಿ ಕೂಡ ಆಗಿದ್ದರು.
ಕೊನೆಯ ವಾಟ್ಸ್‌ಆ್ಯಪ್ ಸಂದೇಶ
ತ್ವಿಶಾ ಮತ್ತು ಅವರ ತಾಯಿಯ ನಡುವಿನ ವಾಟ್ಸ್‌ಆ್ಯಪ್ ಚಾಟ್‌ಗಳು ಅವರು ದಾಂಪತ್ಯ ಜೀವನದಲ್ಲಿ ತೀವ್ರ ಮಾನಸಿಕ ಕಿರುಕುಳ ಮತ್ತು ತಳಮಳ ಅನುಭವಿಸುತ್ತಿರುವುದನ್ನು ಬಹಿರಂಗಪಡಿಸಿವೆ. "ನನ್ನ ಜೀವನ ನರಕವಾಗಿದೆ, ಪತಿ ನನ್ನೊಂದಿಗೆ ಮಾತನಾಡುತ್ತಿಲ್ಲ, ನನ್ನನ್ನು ಇಲ್ಲಿಗೆ ಏಕೆ ಕಳುಹಿಸಿದೆ?" ಎಂದು ಅವರು ತಾಯಿಗೆ ಸಂದೇಶ ಕಳುಹಿಸಿ ಅತ್ತಿದ್ದರು. ಸ್ನೇಹಿತರೊಂದಿಗಿನ ಚಾಟ್‌ನಲ್ಲಿ, "ಮದುವೆಯಾಗಬೇಕೆಂಬ ಅವಸರದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ, ಮದುವೆಯ ನಂತರವೂ ನಿಮ್ಮ ಸ್ವಂತ ಬದುಕಿನ ಬಗ್ಗೆ ಯೋಚಿಸಿ ಮುನ್ನಡೆಯಿರಿ" ಎಂದು ಎಚ್ಚರಿಸಿದ್ದರು.
ಕುಟುಂಬದ ಆಕ್ರೋಶ ಮತ್ತು ವರದಕ್ಷಿಣೆ ಆರೋಪ
ತ್ವಿಶಾ ಅವರ ಸಾವು ಆತ್ಮಹತ್ಯೆಯಲ್ಲ, ಅದು ವ್ಯವಸ್ಥಿತ ಕೊಲೆ ಎಂದು ಅವರ ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. ಭೋಪಾಲ್ ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸುತ್ತಿದ್ದಾರೆ ಎಂದು ದೂರಿದ ಕುಟುಂಬವು, ಇಡೀ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮರು-ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನಿವಾಸದ ಹೊರಗೆ ದೊಡ್ಡ ಪ್ರತಿಭಟನೆ ನಡೆಸಲಾಗಿದೆ.
ತ್ವಿಶಾ ಪತಿ ಸಮರ್ಥ್ ಸಿಂಗ್ ಮತ್ತು ಆತನ ತಾಯಿ ಗಿರಿಬಾಲಾ ಸಿಂಗ್ (ನಿವೃತ್ತ ನ್ಯಾಯಾಧೀಶೆ) ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದ್ದು, ಸದ್ಯ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ಆರೋಪಿಗಳು ತಮ್ಮ ಕಾನೂನು ಪ್ರಭಾವ ಬಳಸಿ ಈಗಾಗಲೇ ಮುಂಗಡ ಜಾಮೀನು ಪಡೆದಿದ್ದಾರೆ ಎಂದು ನೊಂದ ಕುಟುಂಬಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.