ಬಿಹಾರ ಚುನಾವಣೆಯ ಹೀನಾಯ ಸೋಲಿನ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ – ಪ್ರಶಾಂತ್ ಕಿಶೋರ್ ಭೇಟಿ; ‘ಕೈ’ ಹಿಡಿತಾರಾ ರಾಜಕೀಯ ಚಾಣಕ್ಯ?
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಇತ್ತೀಚೆಗೆ ಜನ ಸೂರಜ್ ಪಾರ್ಟಿಯ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿದ್ದಾರೆ. ಈ ಇಬ್ಬರು ನಾಯಕರ ದಿಢೀರ್ ಭೇಟಿ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ನವದೆಹಲಿಯಲ್ಲಿರುವ ಸೋನಿಯಾ ಗಾಂಧಿ ಅವರ 10 ಜನಪಥ್ ನಿವಾಸದಲ್ಲಿ ಕಳೆದ ವಾರ ಈ ಭೇಟಿ ನಡೆದಿದೆ.
ಪ್ರಶಾಂತ್ ಕಿಶೋರ್ ಮತ್ತು ಪ್ರಿಯಾಂಕಾ ಗಾಂಧಿ (ಸಂಗ್ರಹ ಚಿತ್ರ) -
ನವದೆಹಲಿ: ಕಾಂಗ್ರೆಸ್ (Congress) ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರು ಇತ್ತೀಚೆಗೆ ಜನ್ ಸೂರಜ್ ಪಕ್ಷದ ಪ್ರಶಾಂತ್ ಕಿಶೋರ್ (Prashant Kishor) ಅವರನ್ನು ಭೇಟಿಯಾಗಿ ಮಾತನಾಡಿರುವುದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ನವದೆಹಲಿಯಲ್ಲಿರುವ ಸೋನಿಯಾ ಗಾಂಧಿ ಅವರ 10, ಜನಪಥ್ ನಿವಾಸದಲ್ಲಿ ಕಳೆದ ವಾರ ಈ ಭೇಟಿ ನಡೆದಿದೆ ಎಂದು ಮೂಲಗಳು ಸುದ್ದಿ ಸಂಸ್ಥೆಗಳಿಗೆ ತಿಳಿಸಿವೆ.
ಇತ್ತೀಚೆಗೆ ಪ್ರಕಟಗೊಂಡ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟದ ಮುಂದೆ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಮತ್ತು ಪ್ರಶಾಂತ್ ಕಿಶೋರ್ ಅವರ ಹೊಸ ಪಕ್ಷ ಯಾವುದೇ ಜಾದೂ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದವು. ಇದಾದ ಬಳಿಕ ಇಂಡಿ ಒಕ್ಕೂಟ ಮತ್ತು ಪ್ರಶಾಂತ್ ಕಿಶೋರ್ ಮೌನಕ್ಕೆ ಶರಣಾಗಿದ್ದರು.
ಇದೀಗ ಈ ಇಬ್ಬರು ನಾಯಕರ ದಿಢೀರ್ ಭೇಟಿ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸದೆ ಪ್ರಿಯಾಂಕಾ ಗಾಂಧಿ, ‘ʼನಾನು ಯಾರನ್ನು ಭೇಟಿಯಾಗುತ್ತೇನೆ ಅಥವಾ ಆಗುವುದಿಲ್ಲ ಎಂಬ ವಿಚಾರದಲ್ಲಿ ಯಾರಿಗೂ ಆಸಕ್ತಿ ಇಲ್ಲʼ’ ಎಂದಷ್ಟೇ ನಿಗೂಢವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ ಪ್ರಶಾಂತ್ ಕಿಶೋರ್ ಅವರು ತಮ್ಮಿಬ್ಬರ ನಡುವಿನ ಭೇಟಿಯ ವಿಚಾರವನ್ನು ತಳ್ಳಿ ಹಾಕಿದ್ದಾರೆ.
ಈ ಇಬ್ಬರು ನಾಯಕರ ಭೇಟಿ ಕುರಿತಾಗಿ ನಂಬಲರ್ಹ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಇತ್ತೀಚೆಗೆ ನಡೆದ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳ ಕಳಪೆ ಪ್ರದರ್ಶನದ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ. ಪ್ರಶಾಂತ್ ಕಿಶೋರ್ ಅವರ ಜನ್ ಸೂರಜ್ ಪಕ್ಷವು 238 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಒಂದೂ ಕ್ಷೇತ್ರವನ್ನು ಗೆದ್ದುಕೊಳ್ಳದೆ ಶೂನ್ಯ ಸಂಪಾದನೆ ಮಾಡಿದ್ದರೆ, ಕಾಂಗ್ರೆಸ್ 61 ಕ್ಷೇತ್ರಗಳಲ್ಲಿ ಕೇವಲ 6 ಕ್ಷೇತ್ರಗಳನ್ನು ಮಾತ್ರವೇ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದು ಕಳೆದ ಬಾರಿಯ 13 ಸ್ಥಾನಗಳಿಗಿಂತಲೂ ಕಡಿಮೆ ಎಂಬುದು ಗಮನಿಸಬೇಕಾದ ಅಂಶ.
ಚುನಾವಣಾ ತಜ್ಞನಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಈ ಹಿಂದೆ ಕಾಂಗ್ರೆಸ್‌ನ ಜತೆ ಹಲವು ಚುನಾವಣೆಗಳಲ್ಲಿ ಕೆಲಸ ಮಾಡಿದ್ದರು ಮತ್ತು ಈ ಸಂದರ್ಭದಲ್ಲಿ ಮಿಶ್ರ ಫಲಿತಾಂಶ ಲಭ್ಯವಾಗಿತ್ತು. 2017ರಲ್ಲಿ ಪಂಜಾಬ್ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅಮರಿಂದರ್ ಸಿಂಗ್ ಪರ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಬಿಜೆಪಿ-ಅಕಾಲಿ ದಳ ಮೈತ್ರಿಗೆ ಸೋಲುಣಿಸುವಲ್ಲಿ ಈ ಜೋಡಿ ಯಶಸ್ವಿಯಾಗಿತ್ತು. ಆದರೆ ಉತ್ತರ ಪ್ರದೇಶದಲ್ಲಿ ಪ್ರಶಾಂತ್ ಜಾದೂ ಕೆಲಸ ಮಾಡಿರಲಿಲ್ಲ, ಅಲ್ಲಿನ ಚುನಾವಣೆಗಳಲ್ಲಿ ಕಾಂಗ್ರೆಸ್-ಸಮಾಜವಾದಿ ಪಕ್ಷಗಳಿಗೆ ಸೋಲುಂಟಾಗಿತ್ತು.
ಪ್ರಶಾಂತ್ ಕಿಶೋರ್ ಅವರ ಕಾರ್ಯವೈಖರಿ ಬಗ್ಗೆ ಹಲವು ಕೈ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ಕಾಂಗ್ರೆಸ್ ಜತೆ ಕೆಲಸ ಮಾಡುವುದನ್ನು ‘ಕೆಟ್ಟ ಅನುಭವ’ ಎಂದು ಪ್ರಶಾಂತ್ ಕಿಶೋರ್ ಬಣ್ಣಿಸಿದ್ದರು. ಆದರೆ ಆ ಬಳಿಕ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಮತ್ತೆ ಕಾಂಗ್ರೆಸ್ ಪಡಸಾಲೆಯಲ್ಲಿ ಕಾಣಿಸಿಕೊಂಡಿದ್ದರು. ಅವರು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಅವರ ಜತೆ ಮಾತುಕತೆಯನ್ನೂ ನಡೆಸಿದ್ದರು. ಆದರೆ ಬೇರೆ ಬೇರೆ ಕಾರಣಗಳಿಂದ ಈ ಮಾತುಕತೆ ಫಲಪ್ರದವಾಗದೇ, ಪ್ರಶಾಂತ್ ಅವರು ಕೈ ಟೀಂನಿಂದ ಹೊರಬಿದ್ದಿದ್ದರು.
ಇದೀಗ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ಹಲವು ಸೋಲುಗಳಿಂದ ಜರ್ಜರಿತವಾಗಿರುವ ಕಾಂಗ್ರೆಸ್ ಅನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರಶಾಂತ್ ಕಿಶೋರ್ ಅವರಿಗೆ ಫ್ರೀ ಹ್ಯಾಂಡ್ ನೀಡುವ ನಿಟ್ಟಿನಲ್ಲಿ ಪ್ರಿಯಾಂಕಾ ಗಾಂಧಿ ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಪ್ರಶಾಂತ್ ಕಿಶೋರ್ ಅವರಿಗೆ ಪಕ್ಷ ಸಂಘಟನೆಯಲ್ಲಿ ಫ್ರೀ ಹ್ಯಾಂಡ್ ನೀಡುವಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಮಾತ್ರವಲ್ಲದೇ ರಾಹುಲ್ ಗಾಂಧಿ ಸಹ ಸಮ್ಮತಿ ಸೂಚಿಸಿಲ್ಲ ಎನ್ನಲಾಗಿದೆ.
ಒಟ್ಟಿನಲ್ಲಿ ಇದೀಗ ಪ್ರಿಯಾಂಕಾ ಗಾಂಧಿ ಮತ್ತು ಪ್ರಶಾಂತ್ ಕಿಶೋರ್ ನಡುವಿನ ಈ ಭೇಟಿ ಮಾತ್ರ ರಾಜಕೀಯ ವಲಯದಲ್ಲಿ ಹಲವಾರು ಚರ್ಚೆಗಳನ್ನು ಹುಟ್ಟುಹಾಕಿದೆ.