ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಶ್ಚಿಮ ಏಷ್ಯಾ ಉದ್ವಿಗ್ನ: ಕಚ್ಚಾ ತೈಲ ಬೆಲೆ ಏರಿಕೆ; ಭಾರತದ ಮೇಲೇನು ಪರಿಣಾಮ?

ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯಿಂದ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಗರಿಷ್ಠ ಮಟ್ಟಕ್ಕೆ ಏರಿವೆ. ಬ್ರೆಂಟ್ ಕ್ರೂಡ್ ಬ್ಯಾರೆಲ್‌ಗೆ 80 ಡಾಲರ್ ದಾಟಿದ್ದು, ಇದು ಭಾರತಕ್ಕೆ ಹೆಚ್ಚುವರಿ ಆಮದು ಹೊರೆ ತಂದೊಡ್ಡಲಿದೆ. ಒಂದು ಡಾಲರ್ ಬೆಲೆ ಏರಿದರೆ ಭಾರತಕ್ಕೆ ವರ್ಷಕ್ಕೆ ಸುಮಾರು 2 ಬಿಲಿಯನ್ ಡಾಲರ್ ಹೆಚ್ಚುವರಿ ವೆಚ್ಚವಾಗುತ್ತದೆ.

ಇರಾನ್- ಇಸ್ರೇಲ್ ಯುದ್ಧ;  ಗಗನಕ್ಕೇರಿದ ತೈಲ ಬೆಲೆ

ಸಾಂದರ್ಭಿಕ ಚಿತ್ರ. -

Profile
Sushmitha Jain Mar 2, 2026 9:06 PM

ನವದೆಹಲಿ, ಮಾ. 2: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil Prices) ಬೆಲೆಗಳು ಗಗನಕ್ಕೇರಿವೆ. ಸೋಮವಾರದ (ಮಾರ್ಚ್‌ 2) ವಹಿವಾಟಿನಲ್ಲಿ ಬ್ರೆಂಟ್ ಕ್ರೂಡ್ ಬ್ಯಾರೆಲ್‌ಗೆ 80 ಡಾಲರ್ ಗಡಿ ದಾಟಿದ್ದು, ಹಲವು ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಇದುವರೆಗೆ ಸುಮಾರು 60 ಡಾಲರ್ ಆಸುಪಾಸಿನಲ್ಲಿ ತೈಲ ಖರೀದಿ ಮಾಡುತ್ತಿದ್ದ ಭಾರತಕ್ಕೆ ಈ ಏರಿಕೆ ಆರ್ಥಿಕ ಒತ್ತಡ ತಂದೊಡ್ಡಲಿದೆ. ಭಾರತ ತನ್ನ ಒಟ್ಟು ತೈಲ ಅಗತ್ಯದ ಬಹುಪಾಲನ್ನು ಆಮದು ಮಾಡಿಕೊಳ್ಳುತ್ತದೆ. ವಿಶೇಷವಾಗಿ ಇರಾನ್ ಹಾಗೂ ಕೊಲ್ಲಿ ರಾಷ್ಟ್ರಗಳ ಮೇಲೆ ಹೆಚ್ಚಿನ ಅವಲಂಬನೆ ಇದೆ. ಒಂದು ಬ್ಯಾರೆಲ್ ತೈಲದ ಬೆಲೆ ಒಂದು ಡಾಲರ್ ಏರಿದರೆ, ಭಾರತಕ್ಕೆ ವರ್ಷಕ್ಕೆ ಸುಮಾರು 2 ಬಿಲಿಯನ್ ಡಾಲರ್ ಹೆಚ್ಚುವರಿ ಹೊರೆ ಬೀಳುತ್ತದೆ. ಇದು ಭಾರತೀಯ ರೂಪಾಯಿಯಲ್ಲಿ ಸುಮಾರು 19 ಸಾವಿರ ಕೋಟಿ ರುಪಾಯಿಗೆ ಸಮಾನ.

ತೈಲ ಹಾಗೂ ಚಿನ್ನದ ಆಮದು ಪ್ರಮಾಣ ಹೆಚ್ಚಿರುವುದರಿಂದಲೇ ಭಾರತದ ಕರೆಂಟ್ ಅಕೌಂಟ್ ಡೆಫಿಸಿಟ್ ಈಗಾಗಲೇ ಉನ್ನತ ಮಟ್ಟದಲ್ಲಿದೆ. ಬೆಲೆ ಏರಿಕೆ ಮುಂದುವರಿದರೆ ಆಮದು ವೆಚ್ಚ ಮತ್ತಷ್ಟು ಹೆಚ್ಚಾಗಿ ಸಿಎಡಿ ವಿಸ್ತರಿಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

ಭಾರತಕ್ಕೆ ಅಗತ್ಯವಿರುವ ತೈಲದ ಶೇಕಡಾ 50ಕ್ಕೂ ಹೆಚ್ಚು ಪೂರೈಕೆ ಪಶ್ಚಿಮ ಏಷ್ಯಾದ ರಾಷ್ಟ್ರಗಳಿಂದಲೇ ಆಗುತ್ತದೆ. ಶೇಕಡಾ 35ರಿಂದ 50ರವರೆಗೆ ತೈಲವು ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತದೆ. ಈ ಮಾರ್ಗದಲ್ಲಿ ವ್ಯತ್ಯಯ ಉಂಟಾದರೆ ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆ ಅಸ್ತವ್ಯಸ್ತವಾಗಿ ಬೆಲೆಗಳು ಮತ್ತಷ್ಟು ಏರಬಹುದು.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ವಿಮಾನಯಾನ ಪುನಾರಂಭಕ್ಕೆ ಕಾಯುತ್ತಿರುವ ಸಾವಿರಾರು ಭಾರತೀಯರು

ಇದರ ನಡುವೆ ತೈಲ ಉತ್ಪಾದಕ ರಾಷ್ಟ್ರಗಳು ಉತ್ಪಾದನೆ ಹೆಚ್ಚಿಸುವ ನಿರ್ಧಾರ ಕೈಗೊಂಡಿವೆ. ಏಪ್ರಿಲ್‌ನಲ್ಲಿ ದಿನಕ್ಕೆ ಸುಮಾರು 2,06,000 ಬ್ಯಾರೆಲ್ ಹೆಚ್ಚುವರಿ ಉತ್ಪಾದನೆ ಮಾಡುವುದಾಗಿ ಘೋಷಿಸಲಾಗಿದೆ. ಆದರೆ ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಟಕ್ಕೆ ಅಡ್ಡಿ ಮುಂದುವರಿದರೆ, ಉತ್ಪಾದನೆ ಹೆಚ್ಚಿಸಿದರೂ ತಕ್ಷಣದ ಪರಿಹಾರ ಸಿಗುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನೊಂದೆಡೆ ಇರಾನ್–ಇಸ್ರೇಲ್ ಹಾಗೂ ಅಮೆರಿಕ ನಡುವಿನ ಉದ್ವಿಗ್ನತೆ ಮಧ್ಯಪ್ರಾಚ್ಯದಲ್ಲಿ ಆತಂಕ ಹೆಚ್ಚಿಸಿದೆ. ಇರಾನ್ ದಿನಕ್ಕೆ ಸರಾಸರಿ 1.6 ಮಿಲಿಯನ್ ಬ್ಯಾರೆಲ್ ತೈಲ ರಫ್ತು ಮಾಡುತ್ತದೆ. ಈ ರಫ್ತು ಕಡಿಮೆಯಾದರೆ ಜಾಗತಿಕ ಮಾರುಕಟ್ಟೆಯಲ್ಲಿ ಕೊರತೆ ಉಂಟಾಗಿ ಬೆಲೆಗಳು 100ರಿಂದ 110 ಡಾಲರ್ ಮಟ್ಟ ತಲುಪುವ ಸಾಧ್ಯತೆ ಇದೆ. ಒಟ್ಟಾರೆ, ಪಶ್ಚಿಮ ಏಷ್ಯಾದ ಪರಿಸ್ಥಿತಿ ಮುಂದುವರಿದರೆ ಭಾರತಕ್ಕೆ ಆರ್ಥಿಕ ಹಾಗೂ ರಾಜತಾಂತ್ರಿಕವಾಗಿ ದೊಡ್ಡ ಸವಾಲು ಎದುರಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯ ಬಿಸಿ ದೇಶದ ಆರ್ಥಿಕ ಸ್ಥಿರತೆಗೆ ಹೊಡೆತ ನೀಡುವ ಆತಂಕ ವ್ಯಕ್ತವಾಗಿದೆ.