ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್ ಆಯ್ಕೆ
Nitin Nabin: ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರ ಸಚಿವ ನಿತಿನ್ ನಬಿನ್ ಆಯ್ಕೆಯಾಗಿದ್ದಾರೆ. ಜಾರ್ಖಂಡ್‌ನ ರಾಂಚಿಯಲ್ಲಿ 1980ರ ಮೇ 23ರಂದು ಜನಿಸಿದ ನಿತಿನ್ ನಬಿನ್ ರಾಜಕೀಯ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು. ಅವರು ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಮಗ.
ನಿತಿನ್ ನಬಿನ್ -
ದೆಹಲಿ, ಡಿ. 14: ಬಿಜೆಪಿ ತನ್ನ ಪದಾಧಿಕಾರಿಗಳ ಆಯ್ಕೆ ನಡೆಸುತ್ತಿದೆ. ಈಗಾಗಲೇ 7 ಬಾರಿಯ ಸಂಸದ ಪಂಕಜ್ ಚೌಧರಿ ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿದ್ದು, ಇದೀಗ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ (National Working President) ಬಿಹಾರ ಸಚಿವ ನಿತಿನ್ ನಬಿನ್ (Nitin Nabin) ಆಯ್ಕೆಯಾಗಿದ್ದಾರೆ. ʼʼಬಿಜೆಪಿ ಸಂಸದೀಯ ಮಂಡಳಿಯು ಬಿಹಾರದ ಸಚಿವ ನಿತಿನ್ ನಬಿನ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ (Arun Singh) ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದು, ಅವರ ಕಾರ್ಯ ವೈಖರಿ ಪಕ್ಷಕ್ಕೆ ಶಕ್ತಿ ತುಂಬಲಿದೆ ಎಂದಿದ್ದಾರೆ. "ನಿತಿನ್ ನಬಿನ್ ಕಠಿಣ ಪರಿಶ್ರಮದ ಕಾರ್ಯಕರ್ತ ಎಂದೇ ಗುರುತಿಸಿಕೊಂಡಿದ್ದಾರೆ. ಅವರು ಯುವ ಮತ್ತು ಕಠಿಣ ಪರಿಶ್ರಮದ ನಾಯಕರಾಗಿದ್ದು, ಶ್ರೀಮಂತ ಸಂಘಟನಾ ಅನುಭವ ಹೊಂದಿದ್ದಾರೆ ಮತ್ತು ಬಿಹಾರದಲ್ಲಿ ಶಾಸಕರಾಗಿ ಮತ್ತು ಸಚಿವರಾಗಿ ಪ್ರಭಾವ ಬೀರಿದ್ದಾರೆ. ಜನರ ಬೇಡಿಕೆಗಳನ್ನು ಪೂರೈಸಲು ಅವರು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಶಕ್ತಿ ಮತ್ತು ಸಮರ್ಪಣೆ ಮುಂಬರುವ ದಿನಗಳಲ್ಲಿ ನಮ್ಮ ಪಕ್ಷವನ್ನು ಬಲಪಡಿಸುವ ನಿರೀಕ್ಷೆ ಇದೆ. ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಿಗೆ ಅಭಿನಂದನೆಗಳು" ಎಂದು ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.
ಮೋದಿ ಅವರ ಎಕ್ಸ್ ಪೋಸ್ಟ್:
Shri Nitin Nabin Ji has distinguished himself as a hardworking Karyakarta. He is a young and industrious leader with rich organisational experience and has an impressive record as MLA as well as Minister in Bihar for multiple terms. He has diligently worked to fulfil people’s…
— Narendra Modi (@narendramodi) December 14, 2025
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಾಟ್ನಾ ಜಿಲ್ಲೆಯ ಬಂಕಿಪುರ ವಿಧಾನಸಭಾ ಕ್ಷೇತ್ರವನ್ನು ನಿತಿನ್ ನಬಿನ್ ಉಳಿಸಿಕೊಂಡಿದ್ದರು. ಆರ್‌ಜೆಡಿಯ ರೇಖಾ ಕುಮಾರಿ ಅವರನ್ನು 51,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಅವರು ಪ್ರಸ್ತುತ ನಿತೀಶ್ ಕುಮಾರ್ ಸಂಪುಟದಲ್ಲಿ ರಸ್ತೆ ನಿರ್ಮಾಣ, ನಗರಾಭಿವೃದ್ಧಿ ಮತ್ತು ವಸತಿ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.
5 ಬಾರಿ ಬಿಹಾರ ಶಾಸಕರಾಗಿರುವ ಕಾಯಸ್ಥ ಸಮುದಾಯಕ್ಕೆ ಸೇರಿದ ನಬಿನ್, ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆಯಿದೆ. 2020ರ ಜನವರಿಯಲ್ಲಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವಧಿ ಪೂರ್ಣಗೊಂಡಿತ್ತು. 2024ರ ಲೋಕಸಭಾ ಚುನಾವಣೆಗಳು ಸೇರಿದಂತೆ ನಿರ್ಣಾಯಕ ರಾಜಕೀಯ ಸನ್ನಿವೇಶಗಳನ್ನು ಎದುರಿಸಲು ನಡ್ಡಾ ಅವರ ಅಧಿಕಾರಾವಧಿ ಹಲವು ಬಾರಿ ವಿಸ್ತರಿಸಲಾಗಿತ್ತು. ಇದೀಗ ಅವರ ಉತ್ತರಾಧಿಕಾರಿಯನ್ನು ನೇಮಿಸಲು ಬಿಜೆಪಿ ಮುಂದಾಗಿದೆ. ಈ ನಿಟ್ಟಿನಲ್ಲಿ ಚಟಿವಟಿಕೆ ಗರಿಗೆದರಿದೆ.
ಹಿಂದೂ ಧರ್ಮ ದೂಷಿಸುವ ಪ್ರವೃತ್ತಿ ಅಪಾಯಕಾರಿ: ನರೇಂದ್ರ ಮೋದಿ ವಾಗ್ದಾಳಿ
ನಬಿನ್ ಹಿನ್ನೆಲೆ
ಜಾರ್ಖಂಡ್‌ನ ರಾಂಚಿಯಲ್ಲಿ 1980ರ ಮೇ 23ರಂದು ಜನಿಸಿದ ನಿತಿನ್ ನಬಿನ್ ರಾಜಕೀಯ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು. ಅವರು ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಮಗ. ನಬಿನ್ ತಮ್ಮ ತಂದೆಯ ನಿಧನದ ನಂತರ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು.
ಪಾಟ್ನಾದ ಬಂಕಿಪುರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದ ನಬಿನ್ 2006ರಲ್ಲಿ ಉಪಚುನಾವಣೆಯ ಮೂಲಕ ಮೊದಲು ಬಿಹಾರ ವಿಧಾನಸಭೆಗೆ ಪ್ರವೇಶಿಸಿದರು ಮತ್ತು 2010, 2015, 2020 ಮತ್ತು 2025ರಲ್ಲಿ ನಡೆದ ಪ್ರತಿಯೊಂದು ನಂತರದ ಚುನಾವಣೆಯಲ್ಲೂ ಜಯ ಗಳಿಸಿದರು.