ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ವಿರುದ್ಧ ಭೂ ವ್ಯವಹಾರ ಆರೋಪ; ಕರ್ನಾಟಕದಲ್ಲಿ ಖರ್ಗೆ ಕುಟುಂಬದ ಟ್ರಸ್ಟ್ ವಿರುದ್ಧ ಬಿಜೆಪಿ ಕಿಡಿ: ಏನಿದು ವಿವಾದ?

Mohan Yadav: ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಕುಟುಂಬದ ಭೂ ಖರೀದಿ ವಿಚಾರವಾಗಿ ಕಾಂಗ್ರೆಸ್ ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ. ಇತ್ತ ಕರ್ನಾಟಕದಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್ ಮೂಲಕ ಭೂಮಿ ಪಡೆದಿರುವ ಆರೋಪವನ್ನು ಬಿಜೆಪಿ ಖರ್ಗೆ ಕುಟುಂಬದ ವಿರುದ್ಧ ಮಾಡಿದೆ. ಈ ಬೆಳವಣಿಗೆಯಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ.

ಮೋಹನ್ ಯಾದವ್ - ಪ್ರಿಯಾಂಕ್‌ ಖರ್ಗೆ ಮತ್ತು ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ)

ಭೋಪಾಲ್‌, ಜೂ. 24: ಮಧ್ಯ ಪ್ರದೇಶ (Madhya Pradesh) ಮತ್ತು ಕರ್ನಾಟಕ (Karnataka)ದಲ್ಲಿ ಭೂ ವ್ಯವಹಾರಗಳ ವಿಚಾರವಾಗಿ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ನಡುವೆ ತೀವ್ರ ರಾಜಕೀಯ ವಾಕ್ಸಮರ ನಡೆಯುತ್ತಿದೆ. ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ (CM Mohan Yadav) ಅವರ ಕುಟುಂಬದ ಭೂ ಖರೀದಿಗಳ ಕುರಿತು ಕಾಂಗ್ರೆಸ್ ಪ್ರಶ್ನೆ ಎತ್ತಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೆ ಸಂಬಂಧಿಸಿದ ಸಿದ್ಧಾರ್ಥ ವಿಹಾರ ಟ್ರಸ್ಟ್ ವಿರುದ್ಧ ಬಿಜೆಪಿ ಗಂಭೀರ ಆರೋಪಗಳನ್ನು ಮಾಡಿದೆ.

ಮಾಧ್ಯಮ ವರದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್, 2023ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಆದ ಬಳಿಕ ಮೋಹನ್ ಯಾದವ್ ಅವರ ಕುಟುಂಬ ಮತ್ತು ಅವರ ರಿಯಲ್ ಎಸ್ಟೇಟ್ ಕಂಪನಿಗಳು ಸುಮಾರು ₹45 ಕೋಟಿ ಮೌಲ್ಯದ 168 ಎಕರೆ ಭೂಮಿಯನ್ನು ಖರೀದಿಸಿವೆ ಎಂದು ಆರೋಪಿಸಿದೆ.
ಈ ಭೂಮಿಗಳಿಗೆ ರಸ್ತೆ ಹಾಗೂ ಹೆದ್ದಾರಿ ಅಭಿವೃದ್ಧಿಯಿಂದ ಹೆಚ್ಚಿನ ಮೌಲ್ಯ ಸಿಕ್ಕಿದ್ದು, ಕೆಲವು ಜಾಗಗಳ ಬಳಕೆ ಕೃಷಿಯಿಂದ ವಸತಿ ಮತ್ತು ವಾಣಿಜ್ಯ ಉದ್ದೇಶಗಳಿಗೆ ಬದಲಾಗಿರುವುದರಿಂದ ದೊಡ್ಡ ಲಾಭವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಮತ್ತು ಪ್ರತಿಪಕ್ಷ ನಾಯಕ ಉಮಂಗ್ ಸಿಂಘರ್ ಈ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಕೂಡ ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐ ಏಕೆ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ ಬಿಜೆಪಿ ಈ ಆರೋಪಗಳನ್ನು ಸಂಪೂರ್ಣ ನಿರಾಧಾರ ಎಂದು ತಳ್ಳಿಹಾಕಿದ್ದು, ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಹೆಸರಿನಲ್ಲಿ 17 ಎಕರೆ ಭೂಮಿ ಮಾತ್ರ ಇದೆ ಹಾಗೂ ಅವರ ಚುನಾವಣಾ ಪ್ರಮಾಣಪತ್ರದಲ್ಲೂ ಇದೇ ವಿವರ ದಾಖಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಿಯಕರನಿಗಾಗಿ ಭಾವಿ ಪತಿಯನ್ನೇ ಹತ್ಯೆಗೈದ ಸಿಯಾ; ಸಹೋದರಿಯ ಅನುಮಾನದಿಂದ ಬಯಲಾಯ್ತು ಭೀಕರ ಸಂಚು ಸಂಚು

ಖರ್ಗೆ ಕುಟುಂಬದ ಟ್ರಸ್ಟ್ ವಿರುದ್ಧ ಬಿಜೆಪಿ ಆರೋಪ

ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಮಾತನಾಡಿ, ʼʼಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರ ಪುತ್ರ ಪ್ರಿಯಾಂಕ್ ಖರ್ಗೆ ಹಾಗೂ ಕುಟುಂಬದ ಸದಸ್ಯರು ಸಿದ್ಧಾರ್ಥ ವಿಹಾರ ಟ್ರಸ್ಟ್ ಮೂಲಕ ಕರ್ನಾಟಕದಲ್ಲಿ ಭೂಮಿ ಪಡೆದುಕೊಂಡಿದ್ದಾರೆʼʼ ಎಂದು ಆರೋಪಿಸಿದ್ದಾರೆ.

ಅವರ ಪ್ರಕಾರ, 2024ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಈ ಟ್ರಸ್ಟ್‌ಗೆ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದ ಸಂಶೋಧನೆಗಾಗಿ 5 ಎಕರೆ ಜಾಗ ನೀಡಿದೆ. ಈ ಜಾಗದ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು ₹100 ಕೋಟಿ ಎಂದು ಬಿಜೆಪಿ ಹೇಳಿದೆ. ಆದರೆ, ಈ ಜಾಗದಲ್ಲಿ ಯಾವುದೇ ಸಂಶೋಧನೆ ಅಥವಾ ಅಭಿವೃದ್ಧಿ ಚಟುವಟಿಕೆಗಳು ನಡೆದಿಲ್ಲ ಮತ್ತು ಅಧಿಕಾರದ ದುರುಪಯೋಗದಿಂದ ಭೂಮಿ ಪಡೆದುಕೊಳ್ಳಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ರಾಜಕೀಯ ವಾತಾವರಣ ಬಿಸಿ

ಒಂದೆಡೆ ಮಧ್ಯ ಪ್ರದೇಶದಲ್ಲಿ ಮೋಹನ್ ಯಾದವ್ ಕುಟುಂಬದ ಭೂ ಖರೀದಿ ವಿಚಾರವನ್ನು ಕಾಂಗ್ರೆಸ್ ಮುಂದಿಟ್ಟಿದ್ದರೆ, ಮತ್ತೊಂದೆಡೆ ಕರ್ನಾಟಕದಲ್ಲಿ ಖರ್ಗೆ ಕುಟುಂಬದ ಟ್ರಸ್ಟ್ ವಿರುದ್ಧ ಬಿಜೆಪಿ ಪ್ರತಿದಾಳಿ ನಡೆಸಿದೆ. ಎರಡೂ ಪಕ್ಷಗಳು ಪರಸ್ಪರ ಭ್ರಷ್ಟಾಚಾರ ಮತ್ತು ಭೂ ದುರ್ಬಳಕೆ ಆರೋಪಗಳನ್ನು ಮಾಡುತ್ತಿದ್ದು, ಈ ವಿಚಾರಗಳು ರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.