ಪ್ರಿಯಕರನಿಗಾಗಿ ಭಾವಿ ಪತಿಯನ್ನೇ ಹತ್ಯೆಗೈದ ಸಿಯಾ; ಸಹೋದರಿಯ ಅನುಮಾನದಿಂದ ಬಯಲಾಯ್ತು ಭೀಕರ ಸಂಚು ಸಂಚು
Ketan Agarwal Murder: ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಸಾವನ್ನು ಆರಂಭದಲ್ಲಿ ಅಪಘಾತ ಎಂದು ಪರಿಗಣಿಸಲಾಗಿತ್ತು. ಆದರೆ ಸಹೋದರಿಯ ಅನುಮಾನದಿಂದ ಮರು ತನಿಖೆ ನಡೆದಿದ್ದು, ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಪೂರ್ವಯೋಜಿತವಾಗಿ ಕೊಲೆ ನಡೆಸಿದ್ದಾರೆ ಎಂಬ ಆರೋಪದಡಿ ಬಂಧಿಸಲಾಗಿದೆ.
ಮೃತ ಕೇತನ್ ಅಗರವಾಲ್ ಜತೆ ಸಿಯಾ ಗೋಯಲ್ -
ಮುಂಬೈ, ಜೂ. 24: ಮಹಾರಾಷ್ಟ್ರದ ಲೋಹಗಢ ಕೋಟೆ (Lohagad Fort)ಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ ಅಪಘಾತ ಎಂದು ಪರಿಗಣಿಸಿದ್ದ ಪ್ರಕರಣ ಇದೀಗ ಪೂರ್ವಯೋಜಿತ ಕೊಲೆ ಎಂಬ ಶಂಕೆಗೆ ತಿರುಗಿದ್ದು, ನಿಶ್ಚಿತಾರ್ಥವಾಗಿದ್ದ ಸಿಯಾ ಗೋಯಲ್ (Siya Goyal) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (Chetan Chaudhary) ಬಂಧನಕ್ಕೊಳಗಾಗಿದ್ದಾರೆ. ಜೂನ್ 18ರಂದು ಟ್ರೆಕ್ಕಿಂಗ್ ವೇಳೆ ಕೇತನ್ ಅಗರ್ವಾಲ್ ಕಣಿವೆಗೆ ಬಿದ್ದು ಮೃತಪಟ್ಟಿದ್ದರು. ಸಿಯಾ ಗೋಯಲ್ ಪೊಲೀಸರಿಗೆ ಕೇತನ್ ಫೋಟೊ ತೆಗೆಯುವ ವೇಳೆ ಕಾಲು ಜಾರಿ ಬಿದ್ದಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಳು. ಇದನ್ನೇ ಆಧರಿಸಿ ಲೋನಾವಾಲಾ ಗ್ರಾಮೀಣ ಪೊಲೀಸರು ಆರಂಭದಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದರು.
ಕೇತನ್ ಅವರ ಸಹೋದರಿಗೆ ಈ ಘಟನೆ ಬಗ್ಗೆ ಅನುಮಾನ ಮೂಡಿತ್ತು. ಅಂತ್ಯಕ್ರಿಯೆಯ ಬಳಿಕವೂ ಅವರು ಘಟನೆಯ ಪ್ರತಿಯೊಂದು ವಿವರವನ್ನು ಪ್ರಶ್ನಿಸುತ್ತಿದ್ದರು. ಘಟನೆ ನಡೆದ ನಾಲ್ಕು ದಿನಗಳ ನಂತರ ಸಂತಾಪ ಸೂಚಿಸಲು ಮನೆಗೆ ಬಂದ ಸಿಯಾ ಅವರನ್ನು ಸಹೋದರಿ ವಿವರವಾಗಿ ಪ್ರಶ್ನಿಸಿದಾಗ ಆಕೆಯ ಉತ್ತರಗಳಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದವು.
ಇದರಿಂದ ಕುಟುಂಬದವರು ಪೊಲೀಸರಿಗೆ ಮರು ತನಿಖೆ ನಡೆಸುವಂತೆ ಒತ್ತಾಯಿಸಿದರು. ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಗಳು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಸಂಬಂಧಪಟ್ಟವರನ್ನು ವಿಚಾರಣೆ ನಡೆಸಲು ಆರಂಭಿಸಿದರು.
ಕೇತನ್ ಕೊಲೆಯ ಕೆಲವೇ ತಾಸುಗಳ ಮೊದಲು ಕೆಫೆಯೊಂದರಲ್ಲಿ ಪ್ರಿಯಕರನನ್ನು ಭೇಟಿಯಾದ ಸಿಯಾ
ತನಿಖೆ ವೇಳೆ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ನಡುವೆ ಪ್ರೇಮ ಸಂಬಂಧವಿರುವ ಮಾಹಿತಿ ಬೆಳಕಿಗೆ ಬಂದಿದೆ. ಜೂನ್‌ನಂತಹ ಬಿರು ಬೇಸಗೆಯಲ್ಲಿಯೇ ಹೂಡಿ ಧರಿಸಿ ಲೋಹಗಢ ಪ್ರದೇಶದಲ್ಲಿ ಕೇತನ್ ಮತ್ತು ಸಿಯಾ ಅವರನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತ ಚೇತನ್ ಎಂದು ಪೊಲೀಸರು ಗುರುತಿಸಿದ್ದಾರೆ.
ಇದಲ್ಲದೆ, ಜನವರಿಯಿಂದ ಜೂನ್‌ವರೆಗೆ ಸಿಯಾ ಮತ್ತು ಚೇತನ್ 2,004 ಬಾರಿ ದೂರವಾಣಿ ಮೂಲಕ ಮಾತನಾಡಿದ್ದು, ಒಟ್ಟು 238 ಗಂಟೆಗಳ ಕಾಲ ಸಂಭಾಷಣೆ ನಡೆಸಿರುವ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಫೇಸ್‌ಟೈಮ್ ಹಾಗೂ ವಾಟ್ಸ್‌ಆ್ಯಪ್ ಕರೆಗಳ ಮೂಲಕವೂ ಇಬ್ಬರೂ ನಿರಂತರ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ತೀವ್ರ ವಿಚಾರಣೆಯ ಬಳಿಕ ಇದು ಅಪಘಾತವಲ್ಲ, ಪೂರ್ವಯೋಜಿತ ಕೊಲೆ ಎಂಬುದು ಗೊತ್ತಾಗಿದೆ. ಕೇತನ್ ಅವರನ್ನು ಸಿಯಾ ಮತ್ತು ಚೇತನ್ ಸೇರಿ ಕಣಿವೆಗೆ ತಳ್ಳಿದ ಬಳಿಕ ಅದನ್ನು ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 23ರಂದು ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಅವರನ್ನು ಬಂಧಿಸಿರುವ ಪೊಲೀಸರು, ಈ ಸಂಚಿನಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿಸಿದ್ದಾರೆ.