ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಕೃಷ್ಣನ ನೆಲ ಗುರುವಾಯೂರ್‌ಗೆ ಹಿಂದೂ ಶಾಸಕನ ಅಗತ್ಯವಿದೆʼʼ: ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಅಭ್ಯರ್ಥಿಯ ಹೇಳಿಕೆ

Keralam Assembly Election: ಕೇರಳಂ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ವಿವಿಧ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಈ ಮಧ್ಯೆ ಗುರುವಾಯೂರ್‌ ಬಿಜೆಪಿ ಅಭ್ಯರ್ಥಿ ಹಿಂದೂ ಶಾಸಕ ಆಯ್ಕೆಯಾಗಬೇಕು ಎಂದು ಕರೆ ನೀಡುವ ಮೂಲಕ ವಿವಾದದ ಅಲೆ ಎಬ್ಬಿಸಿದ್ದಾರೆ.

ಗುರುವಾಯೂರ್‌ನಲ್ಲಿ ಹಿಂದೂ ಶಾಸಕ ಆಯ್ಕೆಯಾಗಲಿ ಎಂದ ಬಿಜೆಪಿ ಅಭ್ಯರ್ಥಿ

ಬಿ. ಗೋಪಾಲಕೃಷ್ಣನ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Mar 21, 2026 6:47 PM

ತಿರುವನಂತಪುರಂ, ಮಾ. 21: ಕೇರಳಂ ವಿಧಾನಸಭಾ ಚುನಾವಣೆಗೆ (Keralam Assembly Election) ಸುಮಾರು 2 ವಾರವಷ್ಟೇ ಬಾಕಿ ಉಳಿದಿದ್ದು, ಪ್ರಚಾರ ರಂಗೇರಿದೆ. ಆತಳಿತ ರೂಢ ಎಲ್‌ಡಿಎಫ್‌ (LDF) ಮತ್ತು ವಿಪಕ್ಷ ಯುಡಿಎಫ್‌ (UDF) ಶತಾಯ ಗತಾಯ ಈ ಬಾರಿ ಅಧಿಕಾರಕ್ಕೆ ಏರಲೇ ಬೇಕೆಂಬ ಪಣ ತೊಟ್ಟಿದ್ದು, ಬಿಜೆಪಿಯೂ ಪ್ರಬಲ ಪೈಪೋಟಿ ಒಡ್ಡುವ ತಯಾರಿಯಲ್ಲಿದೆ. ಈ ಮಧ್ಯೆ ತ್ರಿಶ್ಶೂರ್‌ ಜಿಲ್ಲೆಯ ಗುರುವಾಯೂರ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್‌ (B Gopalakrishnan) ನೀಡಿರುವ ಹಿಂದೂ ಶಾಸಕರ ಕುರಿತಾದ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ. ಅವರು ಕೋಮು ಸೌಹಾರ್ದತೆ ಕೆಡಿಸುತ್ತಿದ್ದಾರೆ ಎಂದು ಆರೋಪಿಸಿ ಸಿಪಿಎಂ ದೂರು ನೀಡಿದೆ.

ಪ್ರಸಿದ್ಧ ಧಾರ್ಮಿಕ ತಾಣ ಗುರುವಾಯೂರ್‌ನಲ್ಲಿ 50 ವರ್ಷಗಳಲ್ಲಿ ಹಿಂದೂ ಶಾಸಕ ಆಯ್ಕೆಯಾಗಲೇ ಇಲ್ಲ ಎಂದು ಗೋಪಾಲಕೃಷ್ಣನ್‌ ಹೇಳಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ. ಅವರ ಈ ಹೇಳಿಕೆಯನ್ನು ಕಾಂಗ್ರೆಸ್‌ ಸೇರಿದಂತೆ ಎಡಪಕ್ಷಗಳು ಖಂಡಿಸಿವೆ.

ಬಿ. ಗೋಪಾಲಕೃಷ್ಣನ್‌ ಅವರ ಹೇಳಿಕೆ:



ಗೋಪಾಲಕೃಷ್ಣನ್‌ ಹೇಳಿದ್ದೇನು?

ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ʼʼಈಗಲೂ ಶೇಕಡಾ 48ರಷ್ಟು ಹಿಂದೂ ಜನಸಂಖ್ಯೆ ಇರುವ ಗುರುವಾಯೂರ್‌ನಲ್ಲಿ ಕಳೆದ 50 ವರ್ಷಗಳಲ್ಲಿ ಒಬ್ಬನೇ ಒಬ್ಬ ಹಿಂದೂ ಶಾಸಕ ಆಯ್ಕೆಯಾಗಿಲ್ಲ. ಎಲ್‌ಡಿಎಫ್‌ (ಎಡ ಪಕ್ಷಗಳ ಒಕ್ಕೂಟ) ಮತ್ತು ಯುಡಿಎಎಫ್‌ (ಕಾಂಗ್ರೆಸ್‌ ನೇತೃತ್ವದ ಒಕ್ಕೂಟ) ಹಿಂದೂಗಳನ್ನು ಕಣಕ್ಕೆ ಇಳಿಸುತ್ತಿಲ್ಲ. 50 ವರ್ಷಗಳಿಂದ ಗುರುವಾಯೂಪ್ಪನ ನೆಲ ದೇವಸ್ಥಾನವನ್ನು ಕೊಳ್ಳೆ ಹೊಡೆಯುವವರ ಮತ್ತು ದೇವಸ್ಥಾನವನ್ನು ವಿರೋಧಿಸುವವರ ಕೈಯಲ್ಲಿದೆ. ಈ ಭೂಮಿಯನ್ನು ದೇವಾಲಯ ಲೂಟಿಕೋರರ ಹಿಡಿತದಿಂದ ಮುಕ್ತಗೊಳಿಸಲು ಭಗವಂತನೇ ನನ್ನನ್ನು ನಿಯೋಜಿಸಿದ್ದಾನೆ. ನೀವು ನನ್ನೊಂದಿಗೆ ಕೈ ಜೋಡಿಸಬೇಕು" ಎಂದು ಹೇಳಿದರು.

ʼʼಗುರುವಾಯೂರ್‌ ಸಮೀಪದ ಮಲಪ್ಪುರಂ ಜಿಲ್ಲೆಯ ಮೀಸಲು ಕ್ಷೇತ್ರ ಬಿಟ್ಟು ಬೇರೆಲ್ಲೂ ಕಾಂಗ್ರೆಸ್‌ನ ಹಿಂದೂ ಅಭ್ಯರ್ಥಿಗಳಿಲ್ಲʼʼ ಎಂದು ತಿಳಿಸಿದರು. ಅವರ ಈ ಹೇಳಿಕೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ಖಂಡಿಸಿವೆ. ಅವರ ವಿರುದ್ಧ ಹರಿಹಾಯ್ದಿದ್ದು, ಕೋಮು ಸೌಹಾರ್ದತೆಯನ್ನು ಕದಡುತ್ತಿರುವುದಾಗಿ ಆರೋಪಿಸಿವೆ. ಈಗಾಗಲೇ ಅವರ ವಿರುದ್ಧ ದೂರೂ ದಾಖಲಾಗಿದೆ.

ಪಶ್ಚಿಮ ಬಂಗಾಳ, ಕೇರಳಂ ಸೇರಿ 5 ವಿಧಾನಸಭೆಗಳ ಚುನಾವಣೆ ದಿನಾಂಕ ಘೋಷಣೆ

ಹೇಳಿಕೆಗೆ ಸಮರ್ಥನೆ

ಅದಾಗ್ಯೂ ಗೋಪಾಲಕೃಷ್ಣನ್‌ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. "ಈ ಕ್ಷೇತ್ರದಲ್ಲಿ ಧಾರ್ಮಿಕ ಭಯೋತ್ಪಾದನೆಯ ಬೇರುಗಳು ಆಳವಾಗಿವೆ. ಇದು ಹಿಂದೂ ಬಹುಸಂಖ್ಯಾತ ಕ್ಷೇತ್ರ. ಹಾಗಾದರೆ ಎಡ ಮತ್ತು ಬಲಪಂಥೀಯರು (ಕಾಂಗ್ರೆಸ್‌) ಇದುವರಗೆ ಯಾಕೆ ಒಬ್ಬ ಹಿಂದೂ ಶಾಸಕನನ್ನು ಆಯ್ಕೆ ಮಾಡಿಲ್ಲ?" ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಸಿದ್ಧ ಧಾರ್ಮಿಕ ಸ್ಥಳ ಶ್ರೀ ಗುರುವಾಯೂರ್‌ ಶ್ರೀ ಕೃಷ್ಣ ದೇವಸ್ಥಾನವನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯ ಸಾಧ್ಯತೆ ದಟ್ಟವಾಗಿದೆ. ಗೋಪಾಲಕೃಷ್ಣನ್‌ ಅವರ ಪ್ರತಿಸ್ಪರ್ಧಿಗಳಾಗಿ ಸಿಪಿಐ(ಎಂ)ನಿಂದ (ಎಲ್‌ಡಿಎಫ್‌) ಎನ್‌.ಕೆ. ಅಕ್ಬರ್‌ ಮತ್ತು ಐಯುಎಂಎಲ್‌ನಿಂದ (ಯುಡಿಎಫ್‌) ಸಿ.ಎಚ್‌. ರಶೀದ್‌ ಕಣದಲ್ಲಿದ್ದಾರೆ. ಇವರಿಬ್ಬರೂ ಮುಸ್ಲಿಂ ಸಮುದಾಯದವರು. ಹಾಲಿ ಶಾಸಕ ಎನ್‌.ಕೆ. ಅಕ್ಬರ್‌ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಬಾರಿ ಗೋಪಾಲಕೃಷ್ಣನ್‌ ಯಾವ ರೀತಿ ಇವರಿಗೆ ಸವಾಲೊಡ್ಡಲಿದ್ದಾರೆ ಎನ್ನುವ ಕುತೂಹಲ ಮನೆ ಮಾಡಿದೆ.