ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CP Radhakrishnan: ಉಪರಾಷ್ಟ್ರಪತಿ ಹುದ್ದೆಯ ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್‌ ಆಯ್ಕೆ

Vice President: ಎನ್‌ಡಿಎಯ ಉಪರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬಿಜೆಪಿಯು ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್‌ ಅವರನ್ನು ಆಯ್ಕೆ ಮಾಡಿದೆ. ಭಾನುವಾರ ದೆಹಲಿಯಲ್ಲಿ (ಆಗಸ್ಟ್‌ 17) ನಡೆದ ಬಿಜೆಪಿಯ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉಪರಾಷ್ಟ್ರಪತಿ ಚುನಾವಣೆ ಸೆಪ್ಟಂಬರ್‌ 9ರಂದು ನಡೆಯಲಿದೆ.

ಉಪರಾಷ್ಟ್ರಪತಿ ಹುದ್ದೆಯ ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್‌

Ramesh B Ramesh B Aug 17, 2025 8:20 PM

ದೆಹಲಿ: ಎನ್‌ಡಿಎಯ (NDA) ಉಪರಾಷ್ಟ್ರಪತಿ (Vice President) ಹುದ್ದೆಯ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬಿಜೆಪಿಯು ಮಹಾರಾಷ್ಟ್ರದ ರಾಜ್ಯಪಾಲ, 68 ವರ್ಷದ ಸಿ.ಪಿ. ರಾಧಾಕೃಷ್ಣನ್‌ (CP Radhakrishnan) ಅವರನ್ನು ಆಯ್ಕೆ ಮಾಡಿದೆ. ತಮಿಳುನಾಡು ಮೂಲದ ರಾಧಾಕೃಷ್ಣನ್‌ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರು. ಅವರು ಈ ಹಿಂದೆ ಜಾರ್ಖಂಡ್‌ನ ರಾಜ್ಯಪಾಲರಾಗಿದ್ದರು. ಅಲ್ಲದೆ ಕೊಯಂಬತ್ತೂರಿನಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಭಾನುವಾರ ದೆಹಲಿಯಲ್ಲಿ (ಆಗಸ್ಟ್‌ 17) ನಡೆದ ಬಿಜೆಪಿಯ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉಪರಾಷ್ಟ್ರಪತಿ ಚುನಾವಣೆ ಸೆಪ್ಟಂಬರ್‌ 9ರಂದು ನಡೆಯಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಬಿಜೆಪಿ ಅಧ್ಯಕ್ಷ, ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಸಿ.ಪಿ. ರಾಧಾಕೃಷ್ಣನ್‌ ಆಯ್ಕೆಯನ್ನು ಘೋಷಿಸಿದರು.



ಈ ಸುದ್ದಿಯನ್ನೂ ಓದಿ: Jagdeep Dhankhar: ಕಟು ಮಾತಿನ ಮೂಲಕ ವಿರೋಧ ಪಕ್ಷಗಳನ್ನು ಕೆರಳಿಸಿದ್ದ ಜಗದೀಪ್ ಧನ್‌ಕರ್‌

ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಹುದ್ದೆಗೆ ಅಲ್ಲಿನ ಅಭ್ಯರ್ಥಿಗಳನ್ನೇ ಆರಿಸಿ ಮತದಾರರಿಗೆ ಸ್ಪಷ್ಟ ಸಂದೇಶವನ್ನು ಬಿಜೆಪಿ ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದರು. ಉಪರಾಷ್ಟ್ರಪತಿ ಚುನಾವಣೆ ಸಂಬಂಧವಾಗಿ ಕಳೆದ ಒಂದು ತಿಂಗಳಲ್ಲಿ ಹಲವು ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಅಭ್ಯರ್ಥಿಯ ಘೋಷಣೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಜೆ.ಪಿ. ನಡ್ಡಾ, ʼʼಉಪರಾಷ್ಟ್ರಪತಿ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯುವಂತೆ ನಾವು ವಿಪಕ್ಷ ಸದ್ಯರೊಂದಿಗೆ ಮಾತನಾಡುತ್ತೇವೆ. ಇದಕ್ಕಾಗಿ ಅವರ ಬೆಂಬಲ ಅಗತ್ಯವಾಗಿದ್ದು, ಈಗಾಗಲೇ ಅವರನ್ನು ಸಂಪರ್ಕಿಸಿದ್ದೇವೆʼʼ ಎಂದು ತಿಳಿಸಿದರು.



ಸಿ.ಪಿ. ರಾಧಾಕೃಷ್ಣನ್‌ ಹಿನ್ನೆಲೆ

1957ರ ಅಕ್ಟೋಬರ್‌ 20ರಂದು ತಮಿಳುನಾಡಿನ ತಿರುಪ್ಪೂರ್‌ನಲ್ಲಿ ಜನಿಸಿದ ರಾಧಾಕೃಷ್ಣನ್‌ 16 ವರ್ಷದಿಂದಲೇ ಆರ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಜುಲೈಯಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು 2023ರ ಫೆಬ್ರವರಿಯಿಂದ 2024 ಜುಲೈ ತನಕ ಜಾರ್ಖಂಡ್‌ ರಾಜ್ಯಪಾಲರಾಗಿದ್ದರು. ಜತೆಗೆ 2024ರ ಮಾರ್ಚ್‌ನಿಂದ ಜುಲೈ ತನಕ ತೆಲಂಗಾಣದ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿಯೂ ಸೇವೆ ಸಲ್ಲಿಸಿದ್ದರು. ಈ ಹಿಂದೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

1998 ಮತ್ತು 1999ರಲ್ಲಿ ಕೊಯಂಬತ್ತೂರು ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರು. ರಾಧಾಕೃಷ್ಣನ್‌ ಕೊಯಂಬತ್ತೂರಿನ ಚಿದಂಬರ್‌ ಕಾಲೇಜಿನಲ್ಲಿ ಬಿಬಿಎ ಪದವಿ ಪಡೆದುಕೊಂಡಿದ್ದಾರೆ.

ಯಾರು ಆಯ್ಕೆ ಮಾಡುತ್ತಾರೆ?

ಮೇಲ್ಮನೆಯ ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಂತೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ದೇಶದ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲಿದ್ದಾರೆ.

ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ಅರ್ಹತೆ ಏನು?

ಭಾರತದ ನಾಗರಿಕರಾಗಿರಬೇಕು, 35 ವರ್ಷ ಪೂರ್ಣವಾಗಿರಬೇಕು, ರಾಜ್ಯಸಭೆಯ ಸದಸ್ಯರಾಗಿ ಚುನಾವಣೆಗೆ ಅರ್ಹತೆ ಪಡೆದಿರಬೇಕು. ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಯಾವುದೇ ಅಧೀನ ಸ್ಥಳೀಯ ಪ್ರಾಧಿಕಾರದ ಅಡಿಯಲ್ಲಿ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.