ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಬಗ್ಗೆ ಭಾರತದ ನಿಲುವನ್ನು ಶ್ಲಾಘಿಸಿದ ಶಶಿ ತರೂರ್ ಹೇಳಿಕೆಗೆ ಬಿಜೆಪಿ ಪ್ರಶಂಸೆ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ

BJP slams Congress: ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಭಾರತದ ಪ್ರತಿಕ್ರಿಯೆಯನ್ನು ಜವಾಬ್ದಾರಿಯುತ ರಾಜತಾಂತ್ರಿಕತೆಯ ಉದಾಹರಣೆ ಎಂದು ಕಾಂಗ್ರೆಸ್‌ ನಾಯಕ ಶಶಿ ತರೂರ್ ಬಣ್ಣಿಸಿದ್ದಾರೆ. ಸಂಯಮ ಎಂದರೆ ಶರಣಾಗತಿಯಲ್ಲ. ಸಂಯಮವೇ ಶಕ್ತಿ ಎಂದು ಹೇಳಿದ್ದಾರೆ. ತರೂರ್ ಅವರ ಹೇಳಿಕೆಯನ್ನು ಇದೀಗ ಬಿಜೆಪಿ ಪ್ರಶಂಸಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್‌ ನಾಯಕ ಶಶಿ ತರೂರ್ (ಸಂಗ್ರಹ ಚಿತ್ರ)

ನವದೆಹಲಿ, ಮಾ. 20: ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ (US-Israel-Iran war) ಈ ಸಂದರ್ಭದಲ್ಲಿ ಭಾರತದ ನಿಲುವನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ (Shashi Tharoor) ಶ್ಲಾಘಿಸಿದ್ದರು. ತರೂರ್ ಅವರ ಹೇಳಿಕೆಯನ್ನು ಇದೀಗ ಬಿಜೆಪಿ ಪ್ರಶಂಸಿಸಿದ್ದು, ಕಾಂಗ್ರೆಸ್ ಅನ್ನು ಟೀಕಿಸಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಭಾರತದ ಪ್ರತಿಕ್ರಿಯೆಯನ್ನು ಜವಾಬ್ದಾರಿಯುತ ರಾಜತಾಂತ್ರಿಕತೆಯ ಉದಾಹರಣೆ ಎಂದು ತರೂರ್ ಬಣ್ಣಿಸಿದ್ದರು. ಇಂತಹ ಅಸ್ಥಿರ ಪರಿಸ್ಥಿತಿಯಲ್ಲಿ ಸಂಯಮವನ್ನು ತೋರಿಸುವುದು ದೌರ್ಬಲ್ಯವನ್ನಲ್ಲ, ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದರು. ಅಂತಾರಾಷ್ಟ್ರೀಯ ಕಾನೂನಿನಡಿ ಯುದ್ಧವನ್ನು ಸಮರ್ಥಿಸಲು ಸಾಧ್ಯವಿಲ್ಲ. ಇದು ಭಾರತವು ದೀರ್ಘಕಾಲದಿಂದ ಎತ್ತಿಹಿಡಿದಿರುವ ಸಾರ್ವಭೌಮತ್ವ ಮತ್ತು ಆಕ್ರಮಣಶೀಲವಲ್ಲದಿರುವಿಕೆ ಸೇರಿದಂತೆ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದರು.

ಸಂಯಮ ಎಂದರೆ ಶರಣಾಗತಿಯಲ್ಲ. ಸಂಯಮವೇ ಶಕ್ತಿ. ನಮ್ಮ ಹಿತಾಸಕ್ತಿಗಳು ಏನೆಂದು ನಮಗೆ ತಿಳಿದಿದೆ. ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಮೊದಲು ಕಾರ್ಯನಿರ್ವಹಿಸುತ್ತೇವೆ ಎಂದು ಶಶಿ ತರೂರ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವಾಗ ತಿಳಿಸಿದ್ದರು.

ಮಧ್ಯಪ್ರಾಚ್ಯ ಸಂಘರ್ಷ: ಕೇಂದ್ರ ಸರ್ಕಾರವನ್ನು ಬೆಂಬಲಿಸಿದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ

ಭಾರತದಂತಹ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ರಚನಾತ್ಮಕ ರಾಜತಾಂತ್ರಿಕ ಪಾತ್ರವಹಿಸಬೇಕು. ನಮ್ಮಂತಹ ಅನೇಕ ದೇಶಗಳು ಮಾಡಬೇಕಾದದ್ದು ಶಾಂತಿಗೆ ಕರೆ ನೀಡಲು ಮುಂದಾಗುವುದು. ಎರಡೂ ಕಡೆಯವರೂ ಯುದ್ಧದಿಂದ ಹಿಂದೆ ಸರಿಯುವಂತೆ ತಿಳಿಸುವುದಾಗಿ ಎಂದು ಅವರು ಹೇಳಿದ್ದರು.

ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ಭಾರತ ಸರ್ಕಾರದ ಕ್ರಮವನ್ನು ಅವರು ಬೆಂಬಲಿಸಿದರೂ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಹತ್ಯೆಯ ನಂತರ ಭಾರತವು ಮೊದಲೇ ಸಂತಾಪ ಸೂಚಿಸಬೇಕಿತ್ತು. ಅದೇ ಸಮಯದಲ್ಲಿ ಎಚ್ಚರಿಕೆಯ ರಾಜತಾಂತ್ರಿಕ ನಿಲುವನ್ನು ಕಾಯ್ದುಕೊಳ್ಳಬೇಕಿತ್ತು. ಖಂಡನೆ ಮತ್ತು ಸಂತಾಪದ ನಡುವೆ ವ್ಯತ್ಯಾಸವಿದೆ. ಸಂತಾಪವು ಸಹಾನುಭೂತಿಯ ಅಭಿವ್ಯಕ್ತಿ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಪಶ್ಚಿಮ ಏಷ್ಯಾದ ಪರಿಸ್ಥಿತಿಗೆ ಭಾರತದ ಸಂಯಮ ವಿಧಾನವನ್ನು ಬೆಂಬಲಿಸಿದ ತರೂರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯು ಪ್ರಶಂಸೆ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರಸ್ತುತ ಜಾಗತಿಕ ಸಂಘರ್ಷಗಳ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮತೋಲನದ ನಿಲುವನ್ನು ಕಾಂಗ್ರೆಸ್ ಹಿರಿಯ ನಾಯಕರು ಗುರುತಿಸಿರುವುದು, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಮರು ಟೀಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಒಂದು ಬದಲಾವಣೆಯನ್ನು ಸೂಚಿಸುತ್ತದೆ ಎಂದು ಪಕ್ಷದ ವಕ್ತಾರ ಸಿ.ಆರ್. ಕೇಶವನ್ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಸರ್ಕಾರದ ಬುದ್ದಿಹೀನ ಟೀಕೆಗೆ ಹೋಲಿಸಿದರೆ ಇದು ನಿಜಕ್ಕೂ ಸ್ವಾಗತಾರ್ಹ ಬದಲಾವಣೆ. ಪ್ರಧಾನ ಮಂತ್ರಿಗೆ, ಭಾರತ ಮತ್ತು ಜನರ ಕಲ್ಯಾಣ ಯಾವಾಗಲೂ ಅತ್ಯುನ್ನತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಒಮಾನ್‌ ಸುಲ್ತಾನ, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜತೆ ಪ್ರಧಾನಿ ಮೋದಿ ಮಾತುಕತೆ: ಹೊರ್ಮುಜ್ ಜಲಸಂಧಿ ಬಿಕ್ಕಟ್ಟಿನ ಬಗ್ಗೆ ಚರ್ಚೆ

ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಕೂಡ ತರೂರ್ ಅವರ ಹೇಳಿಕೆಗಳನ್ನು ಸ್ವಾಗತಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರತಿಕ್ರಿಯಾತ್ಮಕ ಮತ್ತು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಟೀಕಿಸಿದ್ದಾರೆ. ಶಶಿ ತರೂರ್ ಮತ್ತು ಮನೀಶ್ ತಿವಾರಿ ಅವರಂತಹ ಹಿರಿಯ ನಾಯಕರು ಈ ವಿಷಯದ ಬಗ್ಗೆ ಹೆಚ್ಚು ಸೂಕ್ಷ್ಮ ಮತ್ತು ಜವಾಬ್ದಾರಿಯುತ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದಾರೆ. ಕಾರ್ಯತಂತ್ರದ ಸ್ವಾಯತ್ತತೆ ಮತ್ತು ರಾಜತಾಂತ್ರಿಕ ಸಮತೋಲನದ ಮಹತ್ವವನ್ನು ಒತ್ತಿಹೇಳಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ತರೂರ್ ಹೇಳಿಕೆಗೆ ಕಾಂಗ್ರೆಸ್ ಪ್ರತಿಕ್ರಿಯೆ

ಸರ್ಕಾರದ ನಿಲುವನ್ನು ಬೆಂಬಲಿಸಿ ಮಾತನಾಡಿದ ತರೂರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ, ಈ ಬಿಕ್ಕಟ್ಟಿನ ಬಗ್ಗೆ ಭಾರತದ ಮೌನ ಖಂಡನೀಯ ಎಂದು ಕರೆದರು.

ಇದು ನಾಚಿಕೆಗೇಡಿನ ವಿಷಯ. ಇದು ನಮ್ಮ ನೈತಿಕತೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಸ್ವಾಯತ್ತ ರಾಷ್ಟ್ರದಲ್ಲಿ ನಡೆದ ಹತ್ಯೆಯ ಬಗ್ಗೆ ಮೌನವಾಗಿರುವುದು ಭಾರತದ ಇತಿಹಾಸವಲ್ಲ. ಭಾರತ ಇರಾನ್‌ನಿಂದ ದೂರವಿದ್ದು, ಇಸ್ರೇಲ್‌ನತ್ತ ಹೆಚ್ಚು ಒಲವು ತೋರಿಸಿದೆ ಎಂದು ಅವರು ಹೇಳಿದರು.