ಭೋಪಾಲ್, ಜ. 3: ಭಾರತೀಯ ಜನತಾ ಪಕ್ಷ (BJP), ವಿಶ್ವ ಹಿಂದೂ ಪರಿಷತ್ (VHP) ಮತ್ತು ವಿದ್ಯಾ ಭಾರತಿಯಂತಹ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಅವು ಸಂಘದ ನಿಯಂತ್ರಣದಲ್ಲಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಶುಕ್ರವಾರ ಪ್ರತಿಪಾದಿಸಿದ್ದಾರೆ.
ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ಮಾತನಾಡಿದ ಅವರು, ಬಿಜೆಪಿ ಅಥವಾ ವಿಎಚ್‌ಪಿ ಮೂಲಕ ಆರ್‌ಎಸ್‌ಎಸ್ ಅನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಡಿ. ಅವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತವೆ. ಸಂಘದ ರಿಮೋಟ್ ಕಂಟ್ರೋಲ್‌ಗೆ ಒಳಪಡುವುದಿಲ್ಲ ಎಂದು ಭಾಗವತ್ ಹೇಳಿದರು. ಆರ್‌ಎಸ್‌ಎಸ್ ಅನ್ನು ಅದರ ಅಂಗಸಂಸ್ಥೆಗಳ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರು ಮೂಲಭೂತ ತಪ್ಪನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಘದ ನಿಲುವನ್ನು ವಿವರಿಸಿದ ಅವರು, ಸಂಘವು ಸ್ವಯಂ ಸೇವಕರನ್ನು ರೂಪಿಸುತ್ತದೆ. ಆದರೆ ಅದು ಅವರನ್ನು ಎಂದಿಗೂ ನಿಯಂತ್ರಿಸುವುದಿಲ್ಲ ಎಂದು ಹೇಳಿದರು. ಆರ್‌ಎಸ್‌ಎಸ್ ಸ್ವಯಂಸೇವಕರಿಗೆ ತರಬೇತಿ ನೀಡುತ್ತದೆ ಮತ್ತು ಅವರಲ್ಲೂ ಮೌಲ್ಯಗಳು, ಚಿಂತನೆಗಳು ಹಾಗೂ ಭಾರತದ ಪರಮ ವೈಭವಕ್ಕಾಗಿ ಕಾರ್ಯನಿರ್ವಹಿಸುವ ಗುರಿಗಳನ್ನು ಬೆಳೆಸುತ್ತದೆ. ಆದರೆ ಆ ಸ್ವಯಂ ಸೇವಕರು ಸಂಘದಿಂದಲೂ ನಿಯಂತ್ರಿಸಲ್ಪಡುವುದಿಲ್ಲ. ನಮ್ಮ ಸ್ವಯಂ ಸೇವಕರಿಂದ ನಡೆಸಲ್ಪಡುತ್ತಿರುವ ಬಿಜೆಪಿ, ವಿಎಚ್ಪಿ ಮತ್ತು ವಿದ್ಯಾಭಾರತಿ ಸಂಸ್ಥೆಗಳು ಸ್ವತಂತ್ರ ಗುರುತು ಮತ್ತು ತಮ್ಮ ಸಂವಿಧಾನ ಅನುಸಾರ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.
ಭಾರತ ಹಿಂದೂ ರಾಷ್ಟ್ರ ಎನ್ನುವುದಕ್ಕೆ ಸಾಂವಿಧಾನಿಕ ಅನುಮೋದನೆಯ ಅಗತ್ಯವಿಲ್ಲ: ಮೋಹನ್ ಭಾಗವತ್
ಈ ಸಂಸ್ಥೆಗಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಮತ್ತು ವಿಭಿನ್ನ ಹಿನ್ನೆಲೆಯ ಜನರೊಂದಿಗೆ ಕೆಲಸ ಮಾಡುತ್ತವೆ ಎಂದು ಅವರು ಹೇಳಿದರು. ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ವಿವಿಧ ಪ್ರದೇಶಗಳಲ್ಲಿ ಮತ್ತು ವಿವಿಧ ರೀತಿಯಲ್ಲಿ ಸ್ವಯಂ ಸೇವಕರಲ್ಲದವರೊಂದಿಗೆ ಕೆಲಸ ಮಾಡುತ್ತಾರೆ. ಇದನ್ನು ನಾವು 40 ವರ್ಷಗಳ ಹಿಂದೆ ಜನರಿಗೆ ಹೇಳಿದಾಗ, ಅವರು ನಮಗೆ ಹಾಸ್ಯ ಮಾಡಿ, ನಾವು ಪದಗಳ ಆಟದಲ್ಲಿ ತೊಡಗಿದ್ದೇವೆಂದು ಹೇಳಿದರು. ಆದರೆ ಈಗ ಜನರು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಭಾಗವತ್ ಹೇಳಿದರು.
ಆರ್‌ಎಸ್‌ಎಸ್ ಸಂಘಟನೆಯು ಬಹಳ ಹಿಂದಿನಿಂದಲೂ ತಪ್ಪು ಮಾಹಿತಿ ಮತ್ತು ತಪ್ಪು ತಿಳುವಳಿಕೆಗೆ ಒಳಗಾಗಿದೆ ಎಂದು ಅವರು ಹೇಳಿದರು. ಆರಂಭದಿಂದಲೂ ಆರ್‌ಎಸ್‌ಎಸ್ ಅದರ ಬಗ್ಗೆ ಕಟ್ಟು ಕಥೆಗಳನ್ನು ಎದುರಿಸಬೇಕಾಯಿತು. ಕೇವಲ ವಿರೋಧಿಗಳಿಂದ ಮಾತ್ರವಲ್ಲ, ಸಂಘವನ್ನು ಟೀಕಿಸದವರಿಂದಲೂ ಸಹ ಇಂತಹ ಮಾತುಗಳನ್ನು ಎದುರಿಸಬೇಕಾಯಿತು. ಇಡೀ ಜಗತ್ತಿಗೆ ಆರ್‌ಎಸ್‌ಎಸ್ ತಿಳಿದಿದೆ. ಆದರೆ ಬಹಳ ಕಡಿಮೆ ಜನರಿಗೆ ಮಾತ್ರ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿಯ ಮಾತನ್ನು ವಿಶ್ವದ ನಾಯಕರು ಎಚ್ಚರಿಕೆಯಿಂದ ಆಲಿಸುತ್ತಾರೆ: ಮೋಹನ್ ಭಾಗವತ್
ಆರ್‌ಎಸ್‌ಎಸ್ ಅನ್ನು ಜಗತ್ತಿನ ಯಾವುದೇ ಸಂಘಟನೆಯೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಅದರ ಕಾರ್ಯವೈಖರಿ ವಿಶಿಷ್ಟವಾಗಿದೆ. ಆದರೆ ಇದು ಗೌತಮ ಬುದ್ಧ ಪ್ರೇರಣೆಯನ್ನು ಪಡೆಯುತ್ತದೆ ಎಂದರು. ಆರ್‌ಎಸ್‌ಎಸ್ ಅನ್ನು ಎಂದಿಗೂ ಅರೆಸೈನಿಕ ಪಡೆ ಎಂದು ತಪ್ಪಾಗಿ ಭಾವಿಸಬಾರದು. ಇದು ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತದೆ ಎಂದು ಹೇಳಿದರು.
ಆರ್‌ಎಸ್‌ಎಸ್ ಅನ್ನು ಅರ್ಥ ಮಾಡಿಕೊಳ್ಳಲು, ನೀವು ವಿಕಿಪೀಡಿಯಾದಲ್ಲಿ ಅದರ ಬಗ್ಗೆ ಹುಡುಕುವ ಬದಲು, ಆರ್‌ಎಸ್‌ಎಸ್‌ನೊಂದಿಗೆ ಬಂದು ಇರಬೇಕು. ಹಿಂದೂ ಸಮಾಜವನ್ನು ಸಂಘಟಿಸುವುದು ಅದರ ಗುರಿಯಾಗಿದೆ ಎಂದು ಅವರು ಹೇಳಿದರು.