Delhi Blast: 25 ವರ್ಷಗಳಿಂದ ಭಾರತದಲ್ಲಿ ನಿರಂತರವಾಗಿದೆ ಬಾಂಬ್ ಸ್ಫೋಟ ಪ್ರಕರಣಗಳು
ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ರಾತ್ರಿ ಬಾಂಬ್ ಸ್ಫೋಟ (Delhi bomb Blast) ಸಂಭವಿಸಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಇದೊಂದು ಶಂಕಿತ ಭಯೋತ್ಪಾಕ ಕೃತ್ಯ ಎಂದು ಊಹಿಸಲಾಗಿದೆ. ಇದೊಂದೇ ಅಲ್ಲ ಕಳೆದ 25 ವರ್ಷಗಳಿಂದ ಭಾರತದಲ್ಲಿ ನಿರಂತರವಾಗಿ ಬಾಂಬ್ ಸ್ಫೋಟ ಪ್ರಕರಣಗಳು ನಡೆಯುತ್ತಲೇ ಇದೆ. ಎಲ್ಲ ಪ್ರಕರಣಗಳಲ್ಲೂ ಭಯೋತ್ಪಾದಕ ಸಂಘಟನೆಗಳು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಇದು ಈಗ ದೆಹಲಿ ಕೃತ್ಯದಲ್ಲೂ ಭಯೋತ್ಪಾದಕರ ಪಾತ್ರವಿರುವುದನ್ನು ಊಹಿಸುವಂತೆ ಮಾಡಿದೆ. ಕಳೆದ 25 ವರ್ಷಗಳಿಂದ ಭಾರತದಲ್ಲಿ ನಡೆದಿರುವ ಪ್ರಮುಖ ಸ್ಫೋಟ ಪ್ರಕರಣಗಳು ಇಂತಿವೆ.
ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ರಾತ್ರಿ ನಡೆದ ಬಾಂಬ್ ಸ್ಫೋಟ. (ಸಂಗ್ರಹ ಚಿತ್ರ) -
ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ರಾತ್ರಿ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಕಾರೊಂದು ಸ್ಪೋಟಗೊಂಡು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಮೆಟ್ರೋ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರು ಸ್ಪೋಟಗೊಂಡಿದ್ದರಿಂದ ಹಲವಾರು ವಾಹನಗಳು ಸುಟ್ಟು ಕರಕಲಾಗಿವೆ. ಸ್ಫೋಟಗೊಂಡ ಕಾರಿನಲ್ಲಿ ಮೂವರು ಇದ್ದುದರಿಂದ ಇದೊಂದು ಆತ್ಮಹತ್ಯಾ ಬಾಂಬ್ ದಾಳಿ ಎಂದು ಶಂಕಿಸಲಾಗಿದೆ.
2024 ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ಬ್ರೂಕ್ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದರು. ಐಸಿಸ್ಗೆ ಸೇರಿದ ಇಬ್ಬರು ಭಯೋತ್ಪಾದಕರಾದ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮತೀನ್ ತಹಾ ಒಂದು ಚೀಲದೊಳಗೆ ಸುಧಾರಿತ ಸ್ಫೋಟಕ ಸಾಧನಗಳನ್ನು ತಂದು ಇಲ್ಲಿ ಇರಿಸಿದ್ದರು.
2011ರಲ್ಲಿ ದೆಹಲಿ ಹೈಕೋರ್ಟ್ ಹೊರಗೆ ಬ್ರೀಫ್ಕೇಸ್ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡು 12 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹರ್ಕತ್-ಉಲ್-ಜಿಹಾದ್ ಅಲ್-ಇಸ್ಲಾಮಿ (ಹುಜಿ) ಈ ದಾಳಿಯನ್ನು ತಾನು ಮಾಡಿರುವುದಾಗಿ ಹೇಳಿಕೊಂಡಿತ್ತು.
2010ರ ಫೆಬ್ರವರಿಯಲ್ಲಿ ಪುಣೆಯ ಕೋರೆಗಾಂವ್ ಪಾರ್ಕ್ನಲ್ಲಿರುವ ಜರ್ಮನ್ ಬೇಕರಿಯಲ್ಲಿ ಬಾಂಬ್ ಸ್ಫೋಟಗೊಂಡು 17 ಜನರು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಬೇಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಯರು, ವಿದ್ಯಾರ್ಥಿಗಳು ಬರುತ್ತಿದ್ದರು. ಈ ದಾಳಿಯ ಹೊಣೆಯನ್ನು ಇಂಡಿಯನ್ ಮುಜಾಹಿದ್ದೀನ್ ವಹಿಸಿಕೊಂಡಿದೆ.
2008ರ ಸೆಪ್ಟೆಂಬರ್ ತಿಂಗಳಲ್ಲಿ ಕನ್ನಾಟ್ ಪ್ಲೇಸ್ ಮತ್ತು ಕರೋಲ್ ಬಾಗ್ ಸೇರಿದಂತೆ ದೆಹಲಿಯ ಜನನಿಬಿಡ ಮಾರುಕಟ್ಟೆಗಳಲ್ಲಿ ಐದು ಸರಣಿ ಸ್ಫೋಟಗಳು ಸಂಭವಿಸಿ 30 ಜನರು ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದರ ಹೊಣೆಯನ್ನು ಕೂಡ ಇಂಡಿಯನ್ ಮುಜಾಹಿದ್ದೀನ್ ವಹಿಸಿಕೊಂಡಿತ್ತು.
2008ರ ಮೇ ತಿಂಗಳಲ್ಲಿ ಜೈಪುರದ ಮಾರುಕಟ್ಟೆ ಮತ್ತು ಪ್ರವಾಸಿ ಪ್ರದೇಶಗಳಲ್ಲಿ ಏಕಕಾಲದಲ್ಲಿ ಒಂಬತ್ತು ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ಉಂಟಾಗಿ 63 ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸೈಕಲ್ ಗಳಲ್ಲಿ ಸ್ಫೋಟಕಗಳನ್ನು ತುಂಬಿ ದಾಳಿ ನಡೆಸಲಾಗಿತ್ತು.
2007ರ ಫೆಬ್ರವರಿ ತಿಂಗಳಲ್ಲಿ ಹರಿಯಾಣದ ಪಾಣಿಪತ್ ಬಳಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಪರ್ಕಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂಜೋತಾ ಎಕ್ಸ್ಪ್ರೆಸ್ನಲ್ಲಿ ಎರಡು ಬಾಂಬ್ಗಳು ಸ್ಫೋಟಗೊಂಡು 68 ಮಂದಿ ಸಾವನ್ನಪ್ಪಿದ್ದರು.
2005ರ ಅಕ್ಟೋಬರ್ ತಿಂಗಳಲ್ಲಿ ದೆಹಲಿಯ ಸರೋಜಿನಿ ನಗರ, ಪಹರ್ಗಂಜ್ ಮತ್ತು ಗೋವಿಂದಪುರಿ ಪ್ರದೇಶಗಳಲ್ಲಿ ಮೂರು ಸ್ಫೋಟಗಳು ಉಂಟಾಗಿ 62 ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
2000ರ ಡಿಸೆಂಬರ್ ತಿಂಗಳಲ್ಲಿ ಲಷ್ಕರ್-ಎ-ತೈಬಾದ ಉಗ್ರರು ಭಾರತದ ಐತಿಹಾಸಿಕ ತಾಣವಾಗಿರುವ ದೆಹಲಿಯ ಕೆಂಪು ಕೋಟೆಯೊಳಗೆ ಗುಂಡು ಹಾರಿಸಿದರು. ಈ ಘಟನೆಯಲ್ಲಿ ಇಬ್ಬರು ಸೈನಿಕರು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರು. ಇದು ಭಾರತ ಮತ್ತು ಪಾಕಿಸ್ತಾನಡಾ ನಡುವೆ ನಡೆಯುತ್ತಿದ್ದ ಶಾಂತಿ ಮಾತುಕತೆಗಳನ್ನು ಹಳಿತಪ್ಪಿಸುವ ಪ್ರಯತ್ನ ಎಂದೇ ಹೇಳಲಾಗಿತ್ತು.