ಗೋರಖ್‌ಪುರ-ಮುಂಬೈ ರೈಲಿಗೆ ಬಾಂಬ್ ಬೆದರಿಕೆ ಕರೆ; ಅನುಮಾನಾಸ್ಪದ ಬ್ಯಾಗ್ ಬರಿಕೈಯಲ್ಲೇ ಹಿಡಿದು ಹೊರಟ ಪೊಲೀಸ್ ಅಧಿಕಾರಿ
Bomb threat: ಗೋರಖ್‌ಪುರ-ಮುಂಬೈ ರೈಲಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಪ್ಲಾಟ್‌ಫಾರ್ಮ್‌ನಲ್ಲಿದ್ದ ಅನುಮಾನಾಸ್ಪದ ಚೀಲವನ್ನು ಪೊಲೀಸ್ ಅಧಿಕಾರಿ ವಶಪಡಿಸಿಕೊಂಡಿದ್ದಾರೆ. ಈ ವೇಳೆ ಪ್ರಯಾಣಿಕರು ಭಯ ಭೀತರಾದರು. ಎಲ್ಲರನ್ನೂ ದೂರ ಹೋಗುವಂತೆ ಹೇಳಿದ ಅಧಿಕಾರಿ, ಚೀಲವನ್ನು ಕೋಲಿನ ಮೂಲಕ ತಳ್ಳುತ್ತಾ ದೂರ ತೆಗೆದುಕೊಂಡು ಹೋಗಿದ್ದಾರೆ.
ಅನುಮಾನಾಸ್ಪದ ಚೀಲವನ್ನು ಬರಿಗೈನಿಂದ ಹಿಡಿದುಕೊಂಡು ಹೋದ ಪೊಲೀಸ್ ಅಧಿಕಾರಿ -
ಲಖನೌ, ಜ. 6: ಮಂಗಳವಾರ (ಜನವರಿ 6) ಗೋರಖ್‌ಪುರ-ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ (Bomb threat) ಕರೆ ಬಂದಿದ್ದು, ಪ್ರಯಾಣಿಕರು ಭಯ ಭೀತರಾದರು. ಆದರೆ ಪೊಲೀಸ್ ಅಧಿಕಾರಿಯು ತ್ವರಿತ ಕ್ರಮ ಕೈಗೊಂಡಿದ್ದು, ತನ್ನ ಜೀವವನ್ನೂ ಲೆಕ್ಕಿಸದೆ, ಪ್ರಯಾಣಿಕರ ಜೀವ ಉಳಿಸಲು ಮುಂದಾದರು. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಉತ್ತರ ಪ್ರದೇಶದ ಮೌ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕೇವಲ ಒಂದು ಕೋಲಿನ ಸಹಾಯದಿಂದ ಅನುಮಾನಾಸ್ಪದ ಚೀಲವನ್ನು ತಳ್ಳುತ್ತಾ ನಿಲ್ದಾಣದಿಂದ ದೂರಕ್ಕೆ ಸಾಗುತ್ತಿರುವುದು ಕಂಡು ಬಂದಿದೆ. ವಿಡಿಯೊದಲ್ಲಿ ಅಧಿಕಾರಿ ತನ್ನ ಸುತ್ತಮುತ್ತಲಿನ ಜನರನ್ನು ದೂರ ಸರಿಯುವಂತೆ ಹೇಳಿದ್ದಾರೆ. ಪ್ರಯಾಣಿಕರು ಗಾಬರಿಗೊಂಡಿದ್ದು, ಪೊಲೀಸ್ ಅಧಿಕಾರಿಯು ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಎಚ್ಚರಿಸಿದ್ದಾರೆ.
ಅಹಮದಾಬಾದ್ ಗ್ರಾಮೀಣ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್
ವರದಿಯ ಪ್ರಕಾರ, ಬೆದರಿಕೆ ಬಂದ ತಕ್ಷಣ ರೈಲನ್ನು ಮೌ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಭದ್ರತಾ ಸಿಬ್ಬಂದಿ ರೈಲನ್ನು ಸಂಪೂರ್ಣವಾಗಿ ಶೋಧಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಪ್ರಯಾಣಿಕರನ್ನು ರೈಲಿನಿಂದ ಇಳಿಯುವಂತೆ ಹೇಳಲಾಯಿತು. ಈ ವೇಳೆ ಎಕ್ಸ್‌ಪ್ರೆಸ್ ಗೋರಖ್‌ಪುರದಿಂದ ಮುಂಬೈಯ ಲೋಕಮಾನ್ಯ ತಿಲಕ್ ಟರ್ಮಿನಲ್‍ಗೆ ಪ್ರಯಾಣಿಸುತ್ತಿತ್ತು.
ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹೆಚ್ಚುವರಿ ಪಡೆಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುರಕ್ಷಿತಗೊಳಿಸಲು ಮತ್ತು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಬೋಗಿಗಳು ಮತ್ತು ಸುತ್ತಮುತ್ತಲಿನ ಆವರಣಗಳದಲ್ಲಿ ವ್ಯಾಪಕ ಪರಿಶೀಲನೆ ನಡೆಸಲಾಯಿತು.
ವಿಡಿಯೊ ಇಲ್ಲಿದೆ:
यूपी | गोरखपुर–मुंबई ट्रेन में बम विस्फोट की धमकी। जिला मऊ में ट्रेन रोकी गई। एक संदिग्ध बैग मिला। बम और डॉग स्क्वायड मौके पर है।
— Sachin Gupta (@SachinGuptaUP) January 6, 2026
बहादुर इंस्पेक्टर साहब डंडे से ही संदिग्ध बैग को बाहर खींच लाए हैं !! pic.twitter.com/8ExxD7ex2e
ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತದ ರೈಲು ನಿಲ್ದಾಣಗಳಲ್ಲಿ ಸರಣಿ ಬಾಂಬ್ ಬೆದರಿಕೆ ಕರೆಗಳು ವರದಿಯಾಗಿರುವ ನಡುವೆ ಈ ಘಟನೆ ಸಂಭವಿಸಿದೆ. ಇದಕ್ಕೂ ಮೊದಲು 2025ರ ಡಿಸೆಂಬರ್ 16ರಂದು ರಾಜಸ್ಥಾನದ ಸಿಕಾರ್ ಜಿಲ್ಲೆಯ ನೀಮ್ ಕಾ ಥಾಣಾ ರೈಲು ನಿಲ್ದಾಣಕ್ಕೂ ಇದೇ ರೀತಿಯ ಬೆದರಿಕೆ ಕರೆ ಬಂದಿತ್ತು. ಆದರೆ ವ್ಯಾಪಕ ಹುಡುಕಾಟದ ನಂತರ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿರಲಿಲ್ಲ.
ಇತ್ತೀಚೆಗಷ್ಟೇ ಕರ್ನಾಟಕದ ತುಮಕೂರು ಡಿಸಿ ಕಚೇರಿಗೂ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾಧಿಕಾರಿಯ ಅಧಿಕೃತ ಇಮೇಲ್ ಐಡಿಗೆ ಬೆದರಿಕೆ ಸಂದೇಶ ಬಂದಿತ್ತು. ಬಾಂಬ್ ಸ್ಫೋಟಗೊಳ್ಳಲಿದೆ ಎಂಬ ಬೆದರಿಕೆ ಹಾಕಲಾಗಿತ್ತು. ಇಮೇಲ್ ಗಮನಿಸಿದ ಕೂಡಲೇ ಜಿಲ್ಲಾಧಿಕಾರಿ ಶುಭಕಲ್ಯಾಣ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ತಕ್ಷಣ ಬಾಂಬ್ ನಿಷ್ಕ್ರಿಯದಳ, ಶ್ವಾನ ದಳ ಸಿಬ್ಬಂದಿ ಸೇರಿ ಸುಮಾರು 100 ಮಂದಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜಿಲ್ಲಾಧಿಕಾರಿ ಕಚೇರಿ ಒಳಗಡೆ ಸಾರ್ವಜನಿಕರನ್ನು ಬಿಡದೆ ತಪಾಸಣೆ ಕೈಗೊಳ್ಳಲಾಗಿತ್ತು. ಆದರೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ.