ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೆಹಲಿ ವಿಧಾನಸಭಾ ಸ್ಪೀಕರ್‌ಗೆ ಬಾಂಬ್ ಬೆದರಿಕೆ ಇಮೇಲ್; ಸದನ, ಮೆಟ್ರೋ ನಿಲ್ದಾಣ ಸ್ಫೋಟಿಸುವುದಾಗಿ ಮೆಸೇಜ್‌

Bomb Threat Email: ದೆಹಲಿ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಸದನ ಮತ್ತು ವಿಧಾನಸಭಾ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆಗಳ ಸರಣಿಯಲ್ಲಿ ಈ ಇಮೇಲ್ ಇತ್ತೀಚಿನದು.

ಸಾಂದರ್ಭಿಕ ಚಿತ್ರ

ನವದೆಹಲಿ, ಮಾ. 24: ದೆಹಲಿ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ (Vijender Gupta) ಅವರಿಗೆ ಬಾಂಬ್ ಬೆದರಿಕೆ ಇ-ಮೇಲ್ (Bomb Threat Email) ಬಂದಿದ್ದು, ಸದನ ಮತ್ತು ವಿಧಾನಸಭಾ ಮೆಟ್ರೋ ನಿಲ್ದಾಣವನ್ನು (Metro Stations) ಸ್ಫೋಟಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಬೆದರಿಕೆ ಕರೆಯಿಂದಾಗಿ ದೆಹಲಿ ವಿಧಾನಸಭೆ ಆವರಣದಲ್ಲಿ ತಪಾಸಣೆ ನಡೆಸಲಾಯಿತು. ಆದರೆ ಇಲ್ಲಿಯವರೆಗೆ ನಡೆದ ಶೋಧಗಳಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ.

ಇಮೇಲ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ತರಣ್‌ಜಿತ್ ಸಿಂಗ್ ಸಂಧು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ದೆಹಲಿ ಸಿಎಂ ರೇಖಾ ಗುಪ್ತಾ ಮತ್ತು ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರಿಗೂ ಬೆದರಿಕೆ ಸಂದೇಶ ಇದ್ದವು ಎಂದು ಹೇಳಲಾಗಿದೆ. ಕೆಲವು ತಿಂಗಳ ದೆಹಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು.

ಇನ್ನು ಈ ತಿಂಗಳ ಆರಂಭದಲ್ಲಿ ನಗರದ ಕನಿಷ್ಠ ಮೂರು ಬ್ಯಾಂಕ್‌ಗಳು ಮತ್ತು ಆರು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು. ಕನ್ನಾಟ್ ಪ್ಲೇಸ್‌ನಲ್ಲಿರುವ ಆಕ್ಸಿಸ್ ಬ್ಯಾಂಕ್ ಶಾಖೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏಮ್ಸ್ ಶಾಖೆ ಮತ್ತು ಪೂರ್ವ ದೆಹಲಿಯ ಶಹದಾರಾದಲ್ಲಿರುವ ಎಸ್‌ಬಿಐಗೆ ಬೆದರಿಕೆ ಇಮೇಲ್‌ಗಳು ಬಂದಿದ್ದವು.

ಜೈಲಿನಲ್ಲಿ ಸಿಗುವ ಉಚಿತ ಊಟಕ್ಕಾಗಿ ಹುಸಿ ಬಾಂಬ್ ಬೆದರಿಕೆ ಹಾಕಿದ ಭೂಪ

ದೆಹಲಿ ಕ್ಯಾಂಟ್‌ನಲ್ಲಿರುವ ಆರ್ಮಿ ಪಬ್ಲಿಕ್ ಶಾಲೆ, ಸಲ್ವಾನ್ ಪಬ್ಲಿಕ್ ಶಾಲೆ, ಸರ್ದಾರ್ ಪಟೇಲ್ ವಿದ್ಯಾಲಯ, ಜನಕಪುರಿಯ ಮೀರಾ ಪಬ್ಲಿಕ್ ಶಾಲೆ, ರಾಮ್‌ಜಾಸ್ ಪಬ್ಲಿಕ್ ಶಾಲೆ ಮತ್ತು ರಾಜೇಂದ್ರ ನಗರದ ರಾಮ್‌ಜಾಸ್ ಶಾಲೆಗಳಿಗೆ ಇದೇ ರೀತಿಯ ಬೆದರಿಕೆ ಇಮೇಲ್‌ಗಳು ಬಂದಿದ್ದವು ಎಂದು ವರದಿಯಾಗಿದೆ. ಬೆದರಿಕೆಯ ಕಾರಣ ಶಾಲೆಗಳಲ್ಲಿದ್ದವರನ್ನು ಸ್ಥಳಾಂತರಿಸಲಾಗಿತ್ತು. ಆದರೆ ತಪಾಸಣೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬರಲಿಲ್ಲ.

ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಇತ್ತೀಚೆಗೆ ಅಪರಿಚಿತ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಹೀಗಾಗಿ ನ್ಯಾಯಾಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕಲಬುರಗಿ ಜಿಲ್ಲಾ ಕೋರ್ಟ್ ಆಫೀಸ್ ಇಮೇಲ್‌ಗೆ ಬಂದ ಸಂದೇಶದಲ್ಲಿ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಉಲ್ಲೇಖಿಸಲಾಗಿತ್ತು. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಧಾವಿಸಿ ತಪಾಸಣೆ ನಡೆಸಿದ್ದರು.

ನ್ಯಾಯಾಲಯದ ಆವರಣದಲ್ಲಿ ಇದ್ದ ವಕೀಲರು, ಕಕ್ಷಿದಾರರು ಹಾಗೂ ಸಾರ್ವಜನಿಕರನ್ನು ಪೊಲೀಸರು ಹೊರಗೆ ಕಳುಹಿಸಿ, ತಪಾಸಣೆ ಕಾರ್ಯ ನಡೆಸಿದ್ದರು. ಇದರಿಂದ ನ್ಯಾಯಾಲಯದ ಕಲಾಪ ಕೆಲಕಾಲ ಸ್ಥಗಿತಗೊಂಡಿತ್ತು.