ಮುಂಬೈ, ಸೆ. 2: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ (Disha Salian) ಸಾವಿನ ಬಗ್ಗೆ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಕೇಂದ್ರ ತನಿಖಾ ದಳಕ್ಕೆ (CBI) ಆದೇಶ ಹೊರಡಿಸಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈಯ ಬಾಂದ್ರಾದಲ್ಲಿನ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗುವ ಕೆಲವು ದಿನಗಳ ಮೊದಲು ಅಂದರೆ 2020ರ ಜೂನ್ 8ರಂದು ಮುಂಬೈಯ ಮಲಾಡ್ ಪ್ರದೇಶದ ವಸತಿ ಕಟ್ಟಡದ 14ನೇ ಮಹಡಿಯಿಂದ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ದಿಶಾ ಸಾಲಿಯಾನ್ ಪತ್ತೆಯಾದರು. ಆ ಸಮಯದಲ್ಲಿ ಮುಂಬೈ ನಗರ ಪೊಲೀಸರು ಸಾಲಿಯಾನ್ ಅವರ ಪ್ರಕರಣದಲ್ಲಿ ಆಕಸ್ಮಿಕ ಮರಣ ವರದಿಯನ್ನು (ADR) ದಾಖಲಿಸಿದ್ದರು.
ಯಾವುದೇ ವ್ಯಕ್ತಿಯ ವಿರುದ್ಧ ತನಿಖಾಧಿಕಾರಿಗೆ ಬಲವಾದ ಸಾಕ್ಷ್ಯಾಧಾರಗಳು ಸಿಗುವವರೆಗೆ ಯಾರನ್ನೂ ಆರೋಪಿ ಎಂದು ಪರಿಗಣಿಸಬಾರದು ಎಂದು ನ್ಯಾಯಮೂರ್ತಿಗಳಾದ ಸಾರಂಗ್ ಕೋತ್ವಾಲ್ ಮತ್ತು ರಂಜಿತ್‌ಸಿನ್ಹಾ ರಾಜಾ ಭೋನ್ಸಾಲೆ ಅವರ ಪೀಠವು ತಿಳಿಸಿದೆ. 2020ರ ಜೂನ್‌ನಲ್ಲಿ ನಡೆದ ತಮ್ಮ ಮಗಳ ಸಾವಿನ ತನಿಖೆಯಲ್ಲಿ ಮುಂಬೈ ಪೊಲೀಸರು ಲೋಪ ಎಸಗಿದ್ದಾರೆ ಎಂದು ಆರೋಪಿಸಿ ದಿಶಾ ಸಾಲಿಯಾನ್ ಅವರ ತಂದೆ ಸತೀಶ್ ಸಾಲಿಯಾನ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ಹೊರಬಿದ್ದಿದೆ.
ಪ್ರಕರಣದ ಎಲ್ಲ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ನ್ಯಾಯಾಲಯವು ಮುಂಬೈ ಪೊಲೀಸರಿಗೆ ಆದೇಶ ನೀಡಿದೆ. ಒಂದು ವೇಳೆ ತನಿಖೆಯ ವೇಳೆ ಯಾವುದೇ ಅಪರಾಧ ನಡೆದಿರುವುದು ಸಾಬೀತಾಗದಿದ್ದರೆ (ಪ್ರಕರಣ ದಾಖಲಿಸಲು ಆಧಾರವಿಲ್ಲದಿದ್ದರೆ), ಸಿಬಿಐ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಸೂಕ್ತ ಅಂತಿಮ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಪೀಠವು ತಿಳಿಸಿದೆ. ಸತೀಶ್ ಸಾಲಿಯಾನ್ ಅವರಿಗೆ ವರದಿಯನ್ನು ಪ್ರಶ್ನಿಸಲು ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ದೇವಾಲಯದ ಬೀಗ ಮುರಿದು 12 ಲಕ್ಷ ಮೌಲ್ಯದ ಬೆಳ್ಳಿ, ಚಿನ್ನಾಭರಣ ಕಳ್ಳತನ
“ಸತೀಶ್ ಸಾಲಿಯಾನ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು, ಎಫ್‌ಐಆರ್ ನೋಂದಾಯಿಸಲು ಮತ್ತು ತನಿಖೆ ನಡೆಸಲು ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ನ್ಯಾಯಾಲಯವು ಸಿಬಿಐಗೆ ನಿರ್ದೇಶನ ನೀಡಿದೆ. ಹಾಗೆಯೇ ಎಲ್ಲ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ಮಾಲ್ವಾನಿ ಪೊಲೀಸ್ ಠಾಣೆಗೆ ಸೂಚಿಸಿದೆ. ಇಷ್ಟೇ ಅಲ್ಲದೆ, ಯಾರ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಾಗುತ್ತವೆಯೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಸಾಕ್ಷ್ಯಗಳಿಲ್ಲದಿದ್ದರೆ ಯಾರನ್ನೂ ಆರೋಪಿ ಎಂದು ಹೆಸರಿಸಲಾಗುವುದಿಲ್ಲ. ಒಂದು ವೇಳೆ ಸಿಬಿಐ ಬಿ-ರಿಪೋರ್ಟ್ ಸಲ್ಲಿಸಿದರೆ, ಆಕ್ಷೇಪಣೆಗಳನ್ನು ಎತ್ತಲು ಮತ್ತು ಪ್ರತಿಭಟನಾ ಅರ್ಜಿಯನ್ನು ಸಲ್ಲಿಸಲು ನಮಗೆ ಹಕ್ಕಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಇದಕ್ಕಾಗಿ ನಾನು ನ್ಯಾಯಾಲಯಕ್ಕೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಸಾಲಿಯಾನ್ ಅವರ ತಂದೆ ಮತ್ತು ಅರ್ಜಿದಾರರ ಪರ ವಕೀಲರಾದ ನಿಲೇಶ್ ಓಜಾ ತಿಳಿಸಿದ್ದಾರೆ.
ಪ್ರಕರಣದಲ್ಲಿ ಪ್ರಭಾವಿಗಳು ಇದ್ದಾರೆ ಎಂಬುದು ಸತೀಶ್ ಸಾಲಿಯಾನ್ ಆರೋಪ. ದಿಶಾ ಸಾಲಿಯಾನ್ ಸಾವಿನ ತನಿಖೆ ನಡೆಸಿದ್ದ ಪೊಲೀಸರು, ಇದೊಂದು ಆತ್ಮಹತ್ಯೆಯ ಪ್ರಕರಣ ಎಂದು ಪ್ರತಿಪಾದಿಸಿದ್ದರು. ಆದರೆ, ಆಕೆಯ ತಂದೆ ಕಳೆದ ವರ್ಷ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಮಗಳನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಪ್ರಕರಣದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಭಾರತಿ ಡಾಂಗ್ರೆ ಮತ್ತು ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠವು, ಕುಟುಂಬದವರು ಕೊಲೆ ಆರೋಪ ಹೊರಿಸಿದ್ದರೂ, ಪ್ರಕರಣದಲ್ಲಿ ಕೇವಲ ಅಪಘಾತ ಸಾವಿನ ವರದಿ (ಎಡಿಆರ್) ಮಾತ್ರ ದಾಖಲಾಗಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿತು.
ದಿಶಾ ಸಾಲಿಯನ್ ಮೃತಪಟ್ಟು ಐದು ವರ್ಷಗಳಾದರೂ ಮರಣೋತ್ತರ ಪರೀಕ್ಷೆ ವರದಿ ಮತ್ತು ಎಡಿಆರ್ ಪ್ರತಿಗಳನ್ನು ಅವರ ಕುಟುಂಬಕ್ಕೆ ಒದಗಿಸಲಾಗಿಲ್ಲ ಎಂಬುದನ್ನು ನ್ಯಾಯಾಲಯವು ಗಮನಿಸಿದೆ.