ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S Jaishankar : "ಭದ್ರತಾ ಉಲ್ಲಂಘನೆಯನ್ನು ಖಂಡಿಸುತ್ತೇವೆ" ; ಸಚಿವರ ಮೇಲಿನ ದಾಳಿಯ ನಂತರ ವಿದೇಶಾಂಗ ಇಲಾಖೆಯಿಂದ ಪ್ರತಿಕ್ರಿಯೆ

ವಿದೇಶಾಂಗ ಸಚಿವ (ಇಎಎಂ) ಎಸ್ ಜೈಶಂಕರ್ ಅವರು ಬ್ರಿಟನ್‌ ಪ್ರವಾಸದಲ್ಲಿದ್ದಾಗ ನಡೆದ ಭದ್ರತಾ ಉಲ್ಲಂಘನೆಯನ್ನು ಕೇಂದ್ರ ಸರ್ಕಾರ ಇಂದು ತೀವ್ರವಾಗಿ ಖಂಡಿಸಿದೆ. ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ವಿದೇಶಾಂಗ ಇಲಾಖೆ ಬ್ರಿಟನ್‌ ಭೇಟಿಯ ಸಮಯದಲ್ಲಿ ಭದ್ರತಾ ಉಲ್ಲಂಘನೆಯ ದೃಶ್ಯಗಳನ್ನು ನಾವು ನೋಡಿದ್ದೇವೆ. ಖಲಿಸ್ತಾನಿಗಳ ವರ್ತನೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದೆ.

ಎಸ್‌ ಜೈಶಂಕರ್‌

ಲಂಡನ್‌: ವಿದೇಶಾಂಗ ಸಚಿವ (ಇಎಎಂ) ಎಸ್ ಜೈಶಂಕರ್ (S Jaishankar) ಅವರು ಬ್ರಿಟನ್‌ ಪ್ರವಾಸದಲ್ಲಿದ್ದಾಗ ನಡೆದ ಭದ್ರತಾ ಉಲ್ಲಂಘನೆಯನ್ನು ಕೇಂದ್ರ ಸರ್ಕಾರ ಇಂದು ತೀವ್ರವಾಗಿ ಖಂಡಿಸಿದೆ. ಲಂಡನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಮೇಲೆ ಖಲಿಸ್ತಾನಿ ಉಗ್ರರ ( Khalistani Extremists) ಗುಂಪೊಂದು ದಾಳಿ ನಡೆಸಲು ಯತ್ನಿಸಿದ್ದ. ಸಚಿವರು ಚೆವನಿಂಗ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಿಂದ ಹೊರಬಂದ ನಂತರ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ವಿದೇಶಾಂಗ ಸಚಿವರ ಕಾರಿನ ಕಡೆಗೆ ಓಡಿಹೋಗಿ ರಾಷ್ಟ್ರಧ್ವಜವನ್ನು ಹರಿದು ಹಾಕಿದ್ದಾನೆ. ಚೆವನಿಂಗ್ ಹೌಸ್‌ ಹೊರಗೆ ಭಾರತದ ವಿರುದ್ಧದ ಘೋಷಣೆಗಳನ್ನು ಕೂಗಿ ಉಗ್ರರು ಪ್ರತಿಭಟನೆ ನಡೆಸಿದ್ದಾರೆ.

ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ವಿದೇಶಾಂಗ ಇಲಾಖೆ ಬ್ರಿಟನ್‌ ಭೇಟಿಯ ಸಮಯದಲ್ಲಿ ಭದ್ರತಾ ಉಲ್ಲಂಘನೆಯ ದೃಶ್ಯಗಳನ್ನು ನಾವು ನೋಡಿದ್ದೇವೆ. ಖಲಿಸ್ತಾನಿಗಳ ವರ್ತನೆಯನ್ನು ನಾವು ಖಂಡಿಸುತ್ತೇವೆ. ಪ್ರಜಾಪ್ರಭುತ್ವ ಸ್ವಾತಂತ್ರ್ಯಗಳ ದುರುಪಯೋಗ ತಪ್ಪು. ಈ ಘಟನೆಗೆ ಸಂಬಂಧಿಸಿದಂತೆ ಬ್ರಿಟನ್‌ನ ಸರ್ಕಾರವು ಸರಿಯಾದ ಕ್ರಮವನ್ನು ಕೈಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಘಟನೆಯ ಹೊರತಾಗಿಯೂ ಜೈಶಂಕರ್‌ ಅವರು ಮ್ಮ ರಾಜತಾಂತ್ರಿಕ ಕಾರ್ಯಕ್ರಮಗಳನ್ನು ಮುಂದುವರೆಸಿದ್ದಾರೆ. ಬ್ರಿಟನ್‌ ಧಾನಿ ಕೀರ್ ಸ್ಟಾರ್ಮರ್, ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಮತ್ತು ಇತರ ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಚೆವೆನಿಂಗ್ ಹೌಸ್‌ನಲ್ಲಿ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರೊಂದಿಗೆ ವ್ಯಾಪಕ ಮತ್ತು ಉತ್ಪಾದಕ ಮಾತುಕತೆಗಳನ್ನು ನಡೆಸಿದ್ದೇವೆ. ನಾವು ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಚರ್ಚಿಸಿದ್ದೇವೆ, ವಿಶೇಷವಾಗಿ ಕಾರ್ಯತಂತ್ರದ ಸಮನ್ವಯ, ರಾಜಕೀಯ ಸಹಕಾರ, ವ್ಯಾಪಾರ ಒಪ್ಪಂದ ಮಾತುಕತೆ, ಶಿಕ್ಷಣ, ತಂತ್ರಜ್ಞಾನ, ಚಲನಶೀಲತೆ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಜೈಶಂಕರ್‌ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: S Jaishankar: ಖಲಿಸ್ತಾನಿ ಉಗ್ರರಿಂದ ವಿದೇಶಾಂಗ ಸಚಿವ ಜೈಶಂಕರ್ ಮೇಲೆ ದಾಳಿ ಯತ್ನ; ಭಾರತದ ಧ್ವಜ ಹರಿದು ಪ್ರತಿಭಟನೆ

ಲಂಡನ್‌ನಲ್ಲಿ ಖಾಲಿಸ್ತಾನಿ ಗುಂಪುಗಳು ಪ್ರದರ್ಶನ ನೀಡುತ್ತಿರುವುದು ಇದೇ ಮೊದಲಲ್ಲ. ಜನವರಿಯಲ್ಲಿ, ಖಾಲಿಸ್ತಾನ ಪರ ಉಗ್ರಗಾಮಿಗಳು ಭಾರತೀಯ ಹೈಕಮಿಷನ್ ಹೊರಗೆ ಪ್ರತಿಭಟನೆ ನಡೆಸಿದ್ದರು. ಕಳೆದ ಕೆಲವು ವರ್ಷಗಳಿಂದ, ಬ್ರಿಟನ್‌, ಅಮೆರಿಕ ಮತ್ತು ಕೆನಡಾದಲ್ಲಿರುವ ಖಲಿಸ್ತಾನ್ ಉಗ್ರಗಾಮಿಗಳಿಂದ ಭಾರತೀಯ ರಾಜತಾಂತ್ರಿಕರು ಮತ್ತು ವಲಸಿಗರಿಗೆ ಬೆದರಿಕೆ ಹೆಚ್ಚಾಗಿದೆ. ಈ ಹಿಂದೆ ಬ್ರಿಟನ್‌ನಲ್ಲಿ ಕಂಗನಾ ರನೌತ್ ಅಭಿನಯದ ಎಮರ್ಜೆನ್ಸಿ ಚಿತ್ರ ಪ್ರದರ್ಶನವನ್ನು ನಿಲ್ಲಿಸಲು ಖಲಿಸ್ತಾನಿ ಉಗ್ರರು ಚಿತ್ರಮಂದಿರದ ಮೇಲೆ ದಾಳಿ ನಡೆಸಿದ್ದರು.