ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಾಂಗ್ಲಾದಲ್ಲಿನ ಹಿಂದೂಗಳ ‘ಭೀಕರ’ ಪರಿಸ್ಥಿತಿಯನ್ನು ಬಿಚ್ಚಿಟ್ಟ ಬ್ರಿಟನ್ ಸಂಸದ!

ಬಾಂಗ್ಲಾದೇಶದಲ್ಲಿನ ಹಿಂದೂ ಅಲ್ಪಸಂಖ್ಯಾತರ ಸ್ಥಿತಿ ದಿನೇದಿನೇ ಭೀಕರವಾಗುತ್ತಿದೆ ಎಂಬುದನ್ನು ಬ್ರಿಟನ್‌ನ ಒಬ್ಬ ಸಂಸದರು ಬಹಿರಂಗಪಡಿಸಿದ್ದಾರೆ. ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ, ಭೇದಭಾವ, ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಗಳು ಹಾಗೂ ಆಸ್ತಿಪಾಸ್ತಿ ನಷ್ಟಗಳ ಬಗ್ಗೆ ಅವರು ಗಂಭೀರ ಚಿಂತೆ ವ್ಯಕ್ತಪಡಿಸಿದ್ದಾರೆ.

ಬ್ರಿಟನ್ ಸಂಸದ ಬಾಬ್ ಬ್ಲಾಕ್‌ಮನ್

ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಾದಿ ಬೀದಿಗಳಲ್ಲಿ ಹಿಂದೂ (Hindus)ಗಳನ್ನು ಹತ್ಯೆ ಮಾಡಲಾಗುತ್ತಿದೆ...ಅವರ ಮನೆ, ದೇವಾಲಯಗಳಿಗೆ ಬೆಂಕಿ ಹಚ್ಚಲಾಗುತ್ತಿದೆ ಎಂದು ಬ್ರಿಟನ್(Britain) ಸಂಸದ ಬಾಬ್ ಬ್ಲಾಕ್‌ಮನ್(Bob Blackman) ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ವಿಶೇಷವಾಗಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಬ್ರಿಟನ್ ಸಂಸತ್ತಿನಲ್ಲಿ ಮಾತನಾಡಿದ ಬ್ಲಾಕ್‌ಮನ್, ಫೆ.12ರಂದು ನಡೆಯಲಿರುವ ಬಾಂಗ್ಲಾದೇಶದ ರಾಷ್ಟ್ರೀಯ ಚುನಾವಣೆಗಳು ಪ್ರಜಾಪ್ರಭುತ್ವದ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.

ಬಾಬ್ ಬ್ಲಾಕ್‌ಮನ್ ಹೇಳಿದ್ದೇನು?


“ಈಗಾಗಲೇ ನಾನು ಬಾಂಗ್ಲಾದೇಶದ ವಿನಾಶಕಾರಿ ಪರಿಸ್ಥಿತಿಯನ್ನು ಎತ್ತಿ ತೋರಿಸಿದ್ದೇನೆ...ಅಲ್ಲದೇ ಈ ಬಗ್ಗೆ ಸದನದ ನಾಯಕರು ವಿದೇಶಾಂಗ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದಾರೆ. ಹಿಂದೂಗಳನ್ನು ಬೀದಿಗಳಲ್ಲಿ ಹತ್ಯೆ ಮಾಡಲಾಗುತ್ತಿದೆ; ಅವರ ಮನೆಗಳನ್ನು ಸುಡಲಾಗುತ್ತಿದೆ; ದೇವಾಲಯಗಳಿಗೆ ಬೆಂಕಿ ಹಚ್ಚಲಾಗುತ್ತಿದೆ; ಇತರ ಧಾರ್ಮಿಕ ಅಲ್ಪಸಂಖ್ಯಾತರೂ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ,” ಎಂದು ಅವರು ಹೇಳಿದರು.

2026ರ ಜನವರಿ 15ರಂದು ಯುಕೆಯ ಸಂಸತ್ತಿನಲ್ಲಿ ಮಾತನಾಡಿದ ಸಂಸದ ಬಾಬ್ ಬ್ಲಾಕ್‌ಮನ್, ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ಹಿಂಸಾಚಾರದ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು. ದೇವಾಲಯಗಳ ಧ್ವಂಸ, ಆಸ್ತಿ ಸುಟ್ಟುಹಾಕುವ ಘಟನೆಗಳ ವರದಿಗಳನ್ನು ಉಲ್ಲೇಖಿಸಿ, ಅಲ್ಪಸಂಖ್ಯಾತರ ರಕ್ಷಣೆಗೆ ತುರ್ತು ಸರ್ಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್‌ಗೆ ಮಹಾರಾಷ್ಟ್ರ ಪಾಲಿಕೆ ಚುನಾವಣೆಯಲ್ಲಿ ಗೆಲುವು!

ಮುಂದಿನ ತಿಂಗಳು ಅಲ್ಲಿ ‘ಸ್ವತಂತ್ರ ಮತ್ತು ನ್ಯಾಯಸಮ್ಮತ’ ಎಂದು ಕರೆಯಲಾಗುವ ಚುನಾವಣೆಗಳು ನಡೆಯಲಿವೆ. ಆದರೆ ಬಾಂಗ್ಲಾದೇಶದ ಪ್ರಮುಖ ರಾಜಕೀಯ ಪಕ್ಷವಾದ ಅವಾಮಿ ಲೀಗ್ ಜನಾಭಿಪ್ರಾಯ ಸಮೀಕ್ಷೆಗಳಲ್ಲಿ ಸುಮಾರು ಶೇ.30ರಷ್ಟು ಬೆಂಬಲ ಹೊಂದಿದ್ದರೂ ಅದನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧಿಸಲಾಗಿದೆ. ಇದೇ ವೇಳೆ, ಇಸ್ಲಾಮಿಕ್ ತೀವ್ರವಾದಿಗಳು ಬಾಂಗ್ಲಾದೇಶದ ಸಂವಿಧಾನವನ್ನು ಶಾಶ್ವತವಾಗಿ ಬದಲಾಯಿಸುವ ಜನಮತ ಸಂಗ್ರಹಕ್ಕೆ ಕರೆ ನೀಡಿದ್ದಾರೆ,” ಎಂದು ಬ್ಲಾಕ್‌ಮನ್ ಹೇಳಿದರು.

ಬಾಂಗ್ಲಾದೇಶದಾದ್ಯಂತ ಅಲ್ಪಸಂಖ್ಯಾತರ ರಕ್ಷಣೆಗೆ ಹಾಗೂ ದಕ್ಷಿಣ ಏಷ್ಯಾದ ಈ ರಾಷ್ಟ್ರದಲ್ಲಿ ಸ್ವತಂತ್ರ, ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಯುಕೆ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದರ ಬಗ್ಗೆ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿಯಿಂದ ಸ್ಪಷ್ಟ ಹೇಳಿಕೆ ನೀಡುವಂತೆ ಅವರು ಆಗ್ರಹಿಸಿದ್ದಾರೆ.

ಬಾಂಗ್ಲಾದೇಶದ ಮುಹಮ್ಮದ್ ಯೂನಸ್ ನೇತೃತ್ವದ ತಾತ್ಕಾಲಿಕ ಸರ್ಕಾರವು ಜನಪ್ರಿಯ ರಾಜಕೀಯ ಪಕ್ಷಗಳ ಮೇಲೆ ವಿಧಿಸಿರುವ ನಿಷೇಧದ ಬಗ್ಗೆ ಯುಕೆಯ ನಾಲ್ವರು ಸಂಸದರು ಕಳೆದ ವಾರ ಆತಂಕ ವ್ಯಕ್ತಪಡಿಸಿದ್ದರು. ಈ ಕ್ರಮವು ವಿಶ್ವಸಂಸ್ಥೆ ಹಾಗೂ ಯುಕೆ ಸೇರಿದಂತೆ ಬಾಂಗ್ಲಾದೇಶದ ಇತರ ದೀರ್ಘಕಾಲದ ಮಿತ್ರ ರಾಷ್ಟ್ರಗಳ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುತ್ತದೆ ಎಂದು ಬ್ಲಾಕ್‌ಮನ್ ತಿಳಿಸಿದ್ದಾರೆ.

ಚುನಾಯಿತವಲ್ಲದ” ಯೂನಸ್ ನೇತೃತ್ವದ ತಾತ್ಕಾಲಿಕ ಸರ್ಕಾರವು ಬಾಂಗ್ಲಾದೇಶದ ಮತದಾರರ ಮೇಲೆ ಇಂತಹ ನಿರ್ಬಂಧಗಳನ್ನು ವಿಧಿಸಬಾರದಿತ್ತು ಎಂದು ಬಾಬ್ ಬ್ಲಾಕ್‌ಮನ್, ಜಿಮ್ ಶ್ಯಾನನ್, ಜಾಸ್ ಅಥ್ವಾಲ್ ಮತ್ತು ಕ್ರಿಸ್ ಲಾ ಸೇರಿದಂತೆ ವಿವಿಧ ಪಕ್ಷಗಳ ಬ್ರಿಟಿಷ್ ಸಂಸದರು ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳನ್ನು ಹೊರಗಿಟ್ಟು ನಡೆಯುವ ಯಾವುದೇ ಚುನಾವಣೆಯನ್ನು ಪ್ರಜಾಪ್ರಭುತ್ವ, ನ್ಯಾಯಸಮ್ಮತ ಎಂದು ಪರಿಗಣಿಸಲಾಗದು ಎಂದು ಅವರು ಎಚ್ಚರಿಸಿದ್ದಾರೆ.