ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಇಂದು ಮಧ್ಯಾಹ್ನ ಏರ್ ಇಂಡಿಯಾ ವಿಮಾನದಿಂದ (Air India) ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಬಸ್ಸೊಂದಕ್ಕೆ (Fire Accident) ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹತ್ತಿಕೊಂಡಿದ್ದಾಗ ಯಾವುದೇ ಪ್ರಯಾಣಿಕರಿರಲಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಬಸ್ಸು ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಸ್ಸನ್ನು ಏರ್ ಇಂಡಿಯಾ SATS ಏರ್‌ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿತ್ತು. ಬೆಂಕಿಯ ಹಿಂದಿನ ಕಾರಣವನ್ನು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಐಜಿಐಎ) ನಿರ್ವಹಿಸುತ್ತಿದ್ದ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಡಿಐಎಎಲ್) ನಿಂದ ತಕ್ಷಣದ ಯಾವುದೇ ಹೇಳಿಕೆ ಬಂದಿಲ್ಲ. ದೆಹಲಿ ವಿಮಾನ ನಿಲ್ದಾಣವು ಮೂರು ಟರ್ಮಿನಲ್‌ಗಳು ಮತ್ತು ನಾಲ್ಕು ರನ್‌ವೇಗಳನ್ನು ಹೊಂದಿದ್ದು, ಇದು ವಾರ್ಷಿಕವಾಗಿ 100 ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಬಲ್ಲದು.
2010 ರಲ್ಲಿ ಉದ್ಘಾಟನೆಯಾದ ಟರ್ಮಿನಲ್ ೩, ವಿಶ್ವದ ಅತಿದೊಡ್ಡ ಟರ್ಮಿನಲ್‌ಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ 40 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸಬಲ್ಲದು. ಇದು ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳೆರಡನ್ನೂ ನಿರ್ವಹಿಸುತ್ತದೆ, ಕೆಳ ಹಂತವು ಆಗಮನ ಪ್ರದೇಶವಾಗಿ ಮತ್ತು ಮೇಲಿನ ಹಂತವು ನಿರ್ಗಮನ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತದೆ.
ಪ್ರತ್ಯೇಕ ಘಟನೆಯಲ್ಲಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಟ್ಯಾಕ್ಸಿ ಮಾಡುತ್ತಿದ್ದಾಗ, ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಬೆಂಕಿ ಹೊತ್ತಿಕೊಂಡಿತ್ತು. ವಿಮಾನ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೇಶಿಸಿ, ಕೆಲವೇ ಸೆಕೆಂಡ್ ಗಳಲ್ಲಿ ಬೆಂಕಿಯನ್ನು ನಂದಿಸಿದರು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಇಂಡಿಗೋ ಖಚಿತಪಡಿಸಿದೆ.
ಈ ಸುದ್ದಿಯನ್ನೂ ಓದಿ: Fire Accident: ದಿನಸಿ ಅಂಗಡಿಯಲ್ಲಿ ಬೆಂಕಿ ಅವಘಡ; ಸುಟ್ಟು ಕರಕಲಾದ ವಸ್ತುಗಳು
ಇಂಡಿಗೋ ವಿಮಾನ 6E 2107, ದೆಹಲಿಯಿಂದ ದಿಮಾಪುರಕ್ಕೆ ಹೊರಟಿತ್ತು. ವಿಮಾನ ಟೇಕ್-ಆಫ್ ಗೆ ಸಿದ್ಧವಾಗುತ್ತಿದ್ದಾಗ, ಪ್ರಯಾಣಿಕರೊಬ್ಬರ ಸೀಟ್-ಬ್ಯಾಕ್ ಪಾಕೆಟ್ ನಲ್ಲಿ ಇರಿಸಿದ್ದ ವೈಯಕ್ತಿಕ ಎಲೆಕ್ಟ್ರಾನಿಕ್ ಉಪಕರಣದಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.