ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಭಿಷೇಕ್‌ ಬ್ಯಾನರ್ಜಿ ಮೇಲಿನ ದಾಳಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ರಾಜಕೀಯ ಜೀವನಕ್ಕೆ ಮತ್ತೊಂದು ತಿರುವಾಗುತ್ತ? 35 ವರ್ಷಗಳ ಹಿಂದಿನ ಆ ಘಟನೆ ನೆನಪಾಗುತ್ತಿರೋದೇಕೆ?

Mamata Banerjee: ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಸ್ಥಿತ್ಯಂತರ ನಡೆಯುತ್ತಾ? ಸದ್ಯ ಅಂತಹದ್ದೊಂದು ಪ್ರಶ್ನೆಗೆ ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ಮೇಲಿನ ಹಲ್ಲೆ ಕಾರಣವಾಗಿದೆ. ಈ ಹಲ್ಲೆ ಬಿಜೆಪಿಗೆ ಮೈನಸ್‌ ಆಗುತ್ತ? ಟಿಎಂಸಿಗೆ ಪ್ಲಸ್‌ ಆಗುತ್ತ? ಎನ್ನುವುದನ್ನು ಕಾದು ನೋಡಬೇಕಿದೆ.

ಮಮತಾ ಬ್ಯಾಬರ್ಜಿ ಮತ್ತು ಅಭಿಷೇಕ್‌ ಬ್ಯಾನರ್ಜಿ (ಸಂಗ್ರಹ ಚಿತ್ರ)

ಕೋಲ್ಕತ್ತಾ, ಮೇ 31: ಮಮತಾ ಬ್ಯಾನರ್ಜಿ (Mamata Banerjee)-ರಾಷ್ಟ್ರ ರಾಜಕಾರಣದ ಪ್ರಮುಖ ನಾಯಕಿ. ತೃಣಮೂಲ ಕಾಂಗ್ರೆಸ್‌ (TMC) ಪಕ್ಷ ಹುಟ್ಟು ಹಾಕಿ ಪಶ್ಚಿಮ ಬಂಗಾಳದಲ್ಲಿ ಬೇರುಬಿಟ್ಟ ಎಡಪಕ್ಷಗಳ ಆಡಳಿತವನ್ನು ಬುಡ ಸಮೇತ ಕಿತ್ತು ಹಾಕಿ ಸತತ 15 ವರ್ಷ ಆಡಳಿತ ನಡೆಸುವ ʼದೀದಿʼ ಹೆಸರನ್ನು ಅನ್ವರ್ಥಗೊಳಿಸಿದವರು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಅಲೆಗೆ ಅವರ ಟಿಎಂಸಿ ಕೊಚ್ಚಿ ಹೋಗಿದ್ದು, ಒಂದು ಕಾಲದಲ್ಲಿ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮಧ್ಯೆ ಮಮತಾ ಅವರ ಸೋದರಳಿಯ, ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಮತ್ತು ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಮೇಲೆ ನಡೆದಿರುವ ಹಲ್ಲೆ ಸೋತು ಸೊರಗಿದ ಮಮತಾ ಬ್ಯಾನರ್ಜಿ ಅವರಿಗೆ ಗೆಲುವು ತಂದು ಕೊಡುತ್ತಾ? 35 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸುತ್ತಾ? ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ. ಹಾಗಾದರೆ ಅಂದು ಏನಾಗಿತ್ತು?

ಕಾಂಗ್ರೆಸ್‌ ಮೂಲಕ ರಾಜಕೀಯ ಜೀವನ ಆರಂಭಿಸಿದ ಮಮತಾ ಒಂದು ಕಾಲದಲ್ಲಿ ಹಲ್ಲೆಗೊಳಗಾಗಿ ಕೋಲ್ಕತ್ತಾದ ಬೀದಿಯಲ್ಲಿ ಬಿದ್ದಿದ್ದರು. ಬಳಿಕ ತಮ್ಮದೇ ಪಕ್ಷ ಸ್ಥಾಪಿಸಿ ಮುಖ್ಯಮಂತ್ರಿ ಪಟ್ಟಕ್ಕೇರಿದರು.

ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ವಾಧಿಕಾರ ಅಂತ್ಯ; ಸುದೀರ್ಘ ಆಡಳಿತಕ್ಕೆ ಬ್ರೇಕ್‌ ಬಿದ್ದಿದ್ದೇಗೆ?

ಅಂದಿನ ಘಟನೆ ನೆನಪಾಗುತಿರೋದ್ಯಾಕೆ?

ಅದು 1990ರ ಆಗಸ್ಟ್ 16. ಕಾಂಗ್ರೆಸ್ ನಾಯಕಿಯಾಗಿದ್ದ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಬೀದಿಗಳಲ್ಲಿ ಹಗಲು ಹೊತ್ತಿನಲ್ಲಿ ದಾಳಿಗೊಳಗಾಗಿ ಒಬ್ಬಂಟಿಯಾಗಿ ಬಿದ್ದಿದ್ದರು. ಎರಡು ಹೊಡೆತಗಳು ಅವರ ತಲೆಯ ಮೇಲೆ ಬಿದ್ದಿತ್ತು. ಮೂರನೆಯ ಹೊಡೆತ ಬೀಳುವ ಮುನ್ನ ಅವರು ಕೈ ಅಡ್ಡ ಹಿಡಿದಿದ್ದರು. ಹೀಗೆ ನೆಲದ ಮೇಲೆ ಕುಸಿದು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಫೀನಿಕ್ಸ್‌ನಂತೆ ಎದ್ದು ಬಂದು ದೀದಿ ಎನಿಸಿಕೊಂಡರು.

2026ರ ಮೇ 30. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಮತಾ ಅವರ ಆಪ್ತ ಅಭಿಷೇಕ್‌ ಬ್ಯಾನರ್ಜಿ ಹಲ್ಲೆ ನಡೆದಿದೆ. ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಲು ಪಶ್ಚಿಮ ಬಂಗಾಳದ ಸೋನಾರ್‌ಪುರಕ್ಕೆ ತೆರಳಿದ್ದ ಅಭಿಷೇಕ್‌ ಬ್ಯಾನರ್ಜಿ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ. ಅಲ್ಲದೆ ಮತ್ತೋರ್ವ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೂ ಹಲ್ಲೆ ನಡೆದಿದೆ. ಈ ಘಟನೆಗಳಿಗೆ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ. ಈ ದಾಳಿಯ ಹಿಂದಿದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಒಂದಾಯ್ತು ಒಡೆದು ಛಿದ್ರವಾಗಿದ್ದ ʼಇಂಡಿಯಾʼ ಒಕ್ಕೂಟ

ಈ ಹಲ್ಲೆಗಳು ಸದ್ಯ 1990ರ ಘಟನೆಯನ್ನು ನೆನಪಿಸಿದೆ. ಪಶ್ಚಿಮ ಬಂಗಾಳದಲ್ಲಿ ಒಡೆದು ಚೂರಾಗಿದ್ದ ವಿಪಕ್ಷಗಳ ʼಒಂಡಿಯಾʼ ಒಕ್ಕೂಟವನ್ನು ಈ ಹಲ್ಲೆಗಳು ಒಂದುಗೂಡಿಸುವಲ್ಲಿ ಯಶಸ್ವಿಯಾಗಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್‌ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿ ಅನೇಕ ನಾಯಕರು ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷ ಬಿಜೆಪಿ ರಾಜಕೀಯ ಹಿಂಸಾಚಾರವನ್ನು ಪೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆ ಮೂಲಕ ಮಮತಾ ಬ್ಯಾನರ್ಜಿ ಪರವಾಗಿ ಧ್ವನಿ ಎತ್ತಿದ್ದಾರೆ. ಇದರಿಂದ ಮಮತಾ ಬ್ಯಾನರ್ಜಿ ಅವರಿಗೆ ತಕ್ಕ ಮಟ್ಟಿನ ಬೂಸ್ಟ್‌ ಸಿಕ್ಕಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದಾಗ್ಯೂ 1990ರ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಇದರ ಸಂಪೂರ್ನ ಲಾಭ ದೀದಿಗೆ ದೊರೆಯುವುದು ಅನುಮಾನ.

Mamata

ಮಮತಾ ಪರ ಅಲೆಯಾಗಿ ಬದಲಾಗೋದು ಸಂಶಯ

ಈ ಹಲ್ಲೆ ಪ್ರಕರಣಗಳು ಹಿಂದಿನಂತೆ ಮಮತಾ ಬ್ಯಾನರ್ಜಿ ಪರವಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇದಕ್ಕೆ ಕಾರಣವೂ ಹಲವು. 1990ರಲ್ಲಿ ಮಮತಾ ಅಂದಿನ ಎಡರಂಗ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದರು. ಇದೀಗ ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಅವರು ಆಡಳಿತ ವಿರೋಧಿ ಅಲೆಗೆ ಸಿಲುಕಿದ್ದಾರೆ. ಭ್ರಷ್ಟಾಚಾರ, ಓಲೈಕೆ ರಾಜಕೀಯದ ಆರೋಪ, ಟಿಎಂಸಿಯ ಗೂಂಡಾಗಿರಿ ಮತ್ತು ಆರ್‌ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದ ಅವರ ವಿರುದ್ಧ ಜನಾಕ್ರೋಶ ರೂಪುಗೊಂಡಿದೆ. ಹೀಗಾಗಿ ಈ ಘಟನೆಗಳು ಟಿಎಂಸಿ ಪರ ಅನುಕಂಪ ಮೂಡಿಸುವಲ್ಲಿ ಹಿಂದಿನಷ್ಟು ಯಶಸ್ವಿ ಆಗಲಾರವು. ಅಲ್ಲದೆ ಅಭಿಷೇಕ್‌ ಬ್ಯಾನರ್ಜಿ ಹಲ್ಲೆಯ ಹಿಂದೆ ಮಾಜಿ ಟಿಎಂಸಿ ಶಾಸಕಿ ಲವ್ಲಿ ಮೈತ್ರಾ ಅವರಿಗೆ ಅತ್ಯಂತ ಆಪ್ತರಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಬಂಧಿತರಾದ ತಪನ್ ಮೈತಿ, ನಿರ್ಮಲ್ಯ ಸೇನ್​ಗುಪ್ತ, ಕಾಜಲ್ ದಾಸ್ ಮತ್ತು ದೇವಶಿಷ್ ದತ್ತ ಟಿಎಂಸಿಯ ಮಾಜಿ ಶಾಸಕಿಗೆ ಆಪ್ತರೆನ್ನಲಾಗಿದೆ. ಹಾಗೆಯೇ ಮತ್ತೊಬ್ಬ ಬಂಧಿತ ಆರೋಪಿ ಅಶೋಕ್ ಗಯಾನ್ ಕೂಡ ಟಿಎಂಸಿ ಕಾರ್ಯಕರ್ತ ಎನ್ನುವುದು ಗೊತ್ತಾಗಿದೆ. ರಾಜಕೀಯ ಲಾಭ ಪಡೆದುಕೊಳ್ಳುವ ಹವಣಿಕೆಯಲ್ಲಿರುವ ಮಮತಾಗೆ ಇದೆಲ್ಲ ತಿರುಗಿ ಬೀಳುವ ಸಾಧ್ಯತೆ ಇದೆ.

ಕರಿ ಕೋಟ್‌ನಲ್ಲಿ ಹೈ ಕೋರ್ಟ್‌ಗೆ ಬಂದಿದ್ದ ಮಮತಾ ವಿರುದ್ಧ "ಕಳ್ಳಿ ಕಳ್ಳಿ" ಘೋಷಣೆ!

ಜೂನ್‌ 2ರಂದು ಹೋರಾಟಕ್ಕೆ ಕರೆ ನೀಡಿದ ದೀದಿ

ಕೊನೆಯ ಅಸ್ತ್ರ ಎನ್ನುವಂತೆ ಇದೀಗ ಮಮತಾ ಟಿಎಂಸಿ ನಾಯಕರ ಮೇಲಿನ ಹಲ್ಲೆ ಖಂಡಿಸಿ ಜೂನ್‌ 2ರಂದು ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದ್ದಾರೆ. ಸದ್ಯ ಟಿಎಂಸಿ ಒಳಗೆ ನಡೆಯುತ್ತಿರುವ ಆಂತರಿಕ ಜಗಳವನ್ನು ಈ ಪ್ರತಿಭಟನೆ ಶಮನಗೊಳಿಸುತ್ತ ಎನ್ನುವುದನ್ನು ಕಾದು ನೋಡಬೇಕಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author