ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ವಾಧಿಕಾರ ಅಂತ್ಯ; ಸುದೀರ್ಘ ಆಡಳಿತಕ್ಕೆ ಬ್ರೇಕ್‌ ಬಿದ್ದಿದ್ದೇಗೆ?

ಪಶ್ಚಿಮ ಬಂಗಾಳದ ಚುನಾವಣೆ ಇಡೀ ಬಂಗಾಳದ ರಾಜಕೀಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಟಿಎಂಸಿಯಿಂದ 15 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ದೀದಿ ಎಂದೇ ಪ್ರಸಿದ್ಧರಾಗಿದ್ದ ಮಮತಾ ಬಂಗಾಳದಲ್ಲಿ ಭದ್ರ ಕೋಟೆಯನ್ನು ಕಟ್ಟಿದ್ದರು. ಆದರೆ ಈ ಬಾರಿ ಬ್ಯಾನರ್ಜಿಗೆ ಭಾರೀ ಸೋಲಾಗಿದೆ.

ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ವಾಧಿಕಾರ ಅಂತ್ಯ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar May 4, 2026 2:31 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣೆ ಇಡೀ ಬಂಗಾಳದ ರಾಜಕೀಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಟಿಎಂಸಿಯಿಂದ 15 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ದೀದಿ ಎಂದೇ ಪ್ರಸಿದ್ಧರಾಗಿದ್ದ ಮಮತಾ ಬಂಗಾಳದಲ್ಲಿ ಭದ್ರ ಕೋಟೆಯನ್ನು ಕಟ್ಟಿದ್ದರು. ಆದರೆ ಈ ಬಾರಿ ಬ್ಯಾನರ್ಜಿಗೆ ಭಾರೀ ಸೋಲಾಗಿದ್ದು, ಕೋಟೆ ಛಿದ್ರವಾಗಿದೆ. ಮಹಿಳೆಯೊಬ್ಬಳು ಪಕ್ಷ ಕಟ್ಟಿ ಮೂರು ಬಾರಿ ಮುಖ್ಯಮಂತ್ರಿಯಾಗುವುದು ಸುಲಭದ ಮಾತಲ್ಲ. ಹೋರಾಟದ ಹಾದಿಯಿಂದಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಮಮತಾ ಸ್ಟ್ರೀಟ್ ಫೈಟರ್ ಎಂದೇ ಖ್ಯಾತಿಯನ್ನು ಪಡೆದುಕೊಂಡಿದ್ದರು. ಹಾಗಿದ್ದರೆ ಇವರ ಆರಂಭಿಕ ಜೀವನ ಹೇಗಿತ್ತು? ರಾಜಕೀಯಕ್ಕೆ ಬರಲು ಮಮತಾ ಮಾಡಿದ ಕಸರತ್ತೇನು ಎಲ್ಲದರ ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ .

ಮಮತಾ ಬ್ಯಾನರ್ಜಿಯವರು 5 ಜನವರಿ 1955ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಜನಿಸಿದರು. ಇವರ ತಂದೆ ಪ್ರೊಮಿಲೇಶ್ವರ ಬ್ಯಾನರ್ಜಿ ಹಾಗೂ ತಾಯಿ ಗಾಯತ್ರಿ ಬ್ಯಾನರ್ಜಿ. ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಮಹಿಳಾ ಕಾಲೇಜಿನಿಂದ ಮಾನ್ಯತೆ ಪಡೆದ ಜೋಗಾಮಯ ದೇವಿ ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಕೊಲ್ಕತ್ತಾದ ಜೋಗೀಶ್ ಚಂದ್ರ ಚೌದರಿ ಕಾನೂನು ಮಹಾವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿಯನ್ನು ಪಡೆದುಕೊಂಡಿದ್ದಾರೆ.

Mamata  Banerjee (4)

ರಾಜಕೀಯ ಜೀವನ ಹೇಗಿತ್ತು?

1970 ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ರಾಜಕೀಯ ಜರ್ನಿ ಪ್ರಾರಂಭಿಸಿದ ಮಮತಾ ರಾಜ್ಯದ ಮಹಿಳಾ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. 1984ರ ಸಾರ್ವತ್ರಿಕ ಚುನಾವಣೆಯಲ್ಲಿ, ಪಶ್ಚಿಮ ಬಂಗಾಳದ ಜಾದವ್ ಪುರ್ ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧಿಸಿದ್ದ ಹಳೆಯ ಕಮ್ಯುನಿಸ್ಟ್ ರಾಜಕೀಯ ಮುತ್ಸದಿಯಾದ ಸೋಮನಾಥ್ ಚಟರ್ಜಿಯವರನ್ನು ಸೋಲಿಸುವುದರ ಮೂಲಕ ಭಾರತದ ಅತ್ಯಂತ ಕಿರಿಯ ಸಂಸದರಾದರು. ಬಳಿಕ ಕಾಂಗ್ರೆಸ್‌ ಅವರ ಹೆಗಲಿಗೆ ಅಖಿಲ ಭಾರತ ಯುವ ಕಾಂಗ್ರೆಸ್‌ನ ಕಾರ್ಯದರ್ಶಿ ಜವಾಬ್ದಾರಿಯನ್ನು ನೀಡಿತು.

1989ರಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡ ನಂತರ 1991ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು, ಕೊಲ್ಕತ್ತ ದಕ್ಷಿಣ ಕ್ಷೇತ್ರದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡರು. ಕೊಲ್ಕತ್ತಾದ ಬೀದಿಗಳಿಂದ ದಿಲ್ಲಿಯ ವರೆಗೆ ಅವರು ನಡೆಸಿದ ಹೋರಾಟ ಪಶ್ಚಿಮ ಬಂಗಾಳದಲ್ಲಿ ದೀದಿಗೊಂದು ಸ್ಥಾನಮಾನವನ್ನು ಕಲ್ಪಿಸಿತ್ತು. ನರಸಿಂಹರಾವ್ ಸರ್ಕಾರದ ಅವಧಿಯಲ್ಲಿ ಮಮತಾ ಬ್ಯಾನರ್ಜಿಯವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ, ಯುವ ಹಾಗೂ ಕ್ರೀಡಾ, ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣದ ರಾಜ್ಯದ ಕೇಂದ್ರ ಸಚಿವರನ್ನಾಗಿ ಮಾಡಲಾಯಿತು. ಆದರೆ ಕೆಲವೇ ದಿನಗಳಲ್ಲಿ ಪಕ್ಷದೊಳಗಿನ ವೈಮನಸ್ಸಿನಿಂದಾಗಿ ರಾಜೀನಾಮೆ ನೀಡಿ ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಹೋರಾಟದ ಜೀವನ

ಬಂಗಾಳದ ದೀದಿ ಎಂದೇ ಫೇಮಸ್‌ ಆಗಿದ್ದ ಮಮತಾ ರ್ಥಿಕ ವಲಯಗಳನ್ನು ವಿರೋಧಿಸುವುದರ ಮೂಲಕ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೈಗಾರಿಕೆಗಳ ಸ್ಥಾಪನೆಗೋಸ್ಕರ ಕೃಷಿಕರು ಹಾಗೂ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳುವುದರ ವಿರುದ್ಧ ಹೋರಾಟ ನಡೆಸಿ ಭಾರೀ ಸುದ್ದಿಯಾಗಿದ್ದರು. ಯುಪಿಎ ಸರ್ಕಾರದ ಜೊತೆ ಕೈಜೋಡಿಸಿದ್ದರೂ, ಪೆಟ್ರೋಲ್‌ ಹಾಗೂ ಬೆಲೆ ಏರಿಕೆ ವಿರುದ್ಧ ಬಹಿರಂಗವಾಗಿ ಧ್ವನಿಯೆತ್ತಿದ್ದರು.

ತೃಣಮೂಲ ಕಾಂಗ್ರೆಸ್‌ ಸ್ಥಾಪನೆ

1997ರಲ್ಲಿ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದ ಕಾಂಗ್ರೆಸ್‌ನಿಂದ ಹೊರ ಬಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಅನ್ನು ಸ್ಥಾಪಿಸಿದರು. ಇದು ಬಂಗಾಳದಲ್ಲಿ ಆಡಳಿತದಲ್ಲಿದ್ದ ಕಮ್ಯುನಿಸ್ಟ್ ಸರ್ಕಾರದ ಪ್ರಪ್ರಥಮ ವಿರೋಧಿ ಪಕ್ಷವಾಗಿ ಹೊರಹೊಮ್ಮಿತು. ಬಿಳಿ ಕಾಟನ್ ಸೀರೆ ಮತ್ತು ಚಪ್ಪಲಿ ಧರಿಸಿ ಬಂಗಾಳದ ಬೀದಿ ಬೀದಿಯಲ್ಲಿ ಪಕ್ಷದ ಪರ ಪ್ರಚಾರ ನಡೆಸಿದರು. ಮಮತಾರ ಪ್ರಚಾರದ ಫಲವಾಗಿ ಬಂಗಾಳದಲ್ಲಿ ಮೂರು ಬಾರಿ ಟಿಎಂಸಿ ಅಧಿಕಾರಕ್ಕೇರಿತು.

ಬಿಜೆಪಿ vs ಟಿಎಂಸಿ

ಸತತವಾಗಿ ಗೆಲ್ಲುತ್ತಿದ್ದ ಕುದುರೆಯನ್ನು ಬಿಜೆಪಿ ಈ ಬಾರಿ ಕಟ್ಟಿ ಹಾಕಿದೆ. ಮಮತಾ ಕಟ್ಟಿದ್ದ ಬಂಗಾಳದ ಕೋಟೆಯಲ್ಲಿ ಬಿಜೆಪಿಯ ಧ್ವಜಗಳು ಇದೀಗ ಹಾರಾಡುತ್ತಿವೆ. 293 ಕ್ಷೇತ್ರಗಳಲ್ಲಿ ಟಿಎಂಸಿ ಕೇವಲ 93 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. 15 ವರ್ಷಗಳ ನಿರಂತರ ಆಡಳಿತದ ನಂತರ, ಮತದಾರರಲ್ಲಿ ಆಡಳಿತದ ಬಗ್ಗೆ ಬೇಸರ ಮೂಡಿದೆ ಎಂಬುದು ಈ ಸೋಲಿನಿಂದ ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲದೇ ಆರ್‌ಜಿ ಕರ್ (RG Kar) ಪ್ರಕರಣಗಳಂತಹ ಘಟನೆಗಳು ಮಹಿಳಾ ಸುರಕ್ಷತೆಯ ಬಗ್ಗೆ ತೀವ್ರ ಆತಂಕವನ್ನು ಮೂಡಿಸಿದವು, ಇದು ಟಿಎಂಸಿ ವಿರುದ್ಧ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು. ಬಿಜೆಪಿ ಮಹಿಳಾ ಸುರಕ್ಷತೆಯ ವಿಷಯವನ್ನು ಮುಂದಿಟ್ಟುಕೊಂಡು ನಡೆಸಿದ ಪ್ರಚಾರವು ಮಹಿಳಾ ಮತದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.