ಪಶ್ಚಿಮ ಬಂಗಾಳ ಚುನಾವಣೆಯ ಹೀನಾಯ ಸೋಲಿನ ಬಳಿಕ ಬದಲಾದ ಮಮತಾ ಬ್ಯಾನರ್ಜಿ ಸ್ಟ್ರಾಟಜಿ; ಬಹುದೊಡ್ಡ ರಾಜಕೀಯ ನಿರ್ಧಾರ ತೆಗೆದುಕೊಂಡ ದೀದಿಯ ಮುಂದಿನ ನಡೆಯ ಬಗ್ಗೆ ಕುತೂಹಲ
Cockroach Janata Party: ವಿಧಾನಸಭೆ ಚುನಾವಣೆ ಸೋಲಿನ ಬಳಿಕ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಲ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಕಾಕ್ರೋಚ್ ಜನತಾ ಪಾರ್ಟಿಗೆ ಬೆಂಬಲ ನೀಡಿದ್ದಾರೆ. ಬೋಸ್ಟನ್ ಮೂಲದ ಅಭಿಜಿತ್ ದಿಪ್ಕೆ ಸ್ಥಾಪಿಸಿದ ಕಾಕ್ರೋಚ್ ಜನತಾ ಪಾರ್ಟಿ ಮೇ 16ರಂದು ಪ್ರಾರಂಭವಾದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -
ಕೋಲ್ಕತ್ತಾ, ಮೇ 25: ರಾಜ್ಯ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಇದೀಗ ಕಾಕ್ರೋಚ್ ಜನತಾ ಪಾರ್ಟಿಗೆ (Cockroach Janata Party) ಬೆಂಬಲ ನೀಡಿದ್ದಾರೆ. ಮಮತಾ ಬ್ಯಾನರ್ಜಿ ಜತೆಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡ ವಿಡಂಬನಾತ್ಮಕ ಅಭಿಯಾನ ಕಾಕ್ರೋಚ್ ಜನತಾ ಪಾರ್ಟಿ (CJP)ಗೆ ಬೆಂಬಲ ಸೂಚಿಸಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಸೋಲಿನ ನಂತರ ನಡೆದ ಆಂತರಿಕ ಪರಿಶೀಲನಾ ಸಭೆಗಳ ನಡುವೆಯೂ, ಇಬ್ಬರೂ ನಾಯಕರು ಉತ್ತಮ ಹೋರಾಟವನ್ನು ಎದುರಿಸುವತ್ತ ಗಮನಹರಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರೇನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೋಸ್ಟನ್ ಮೂಲದ ಅಭಿಜಿತ್ ದಿಪ್ಕೆ ಸ್ಥಾಪಿಸಿದ ಕಾಕ್ರೋಚ್ ಜನತಾ ಪಾರ್ಟಿಯು ಮೇ 16ರಂದು ಪ್ರಾರಂಭವಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಜನಪ್ರಿಯವಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಗಳ ವಿವಾದದ ನಂತರ ಈ ಆಂದೋಲನ ಆರಂಭವಾಗಿದೆ. ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಖ್ಯಾನಿಸಲಾಯಿತು.
ಕಾಕ್ರೋಚ್ ಜನತಾ ಪಾರ್ಟಿಯಿಂದ ವಿಚಲಿತ ಆಗಿದ್ದು ಕಾಂಗ್ರೆಸ್ ಪಕ್ಷವೇ: ಜೋಶಿ ತಿರುಗೇಟು
ಜಿರಳೆ ಚಿಹ್ನೆಯನ್ನು ಡಿಜಿಟಲ್ ಪ್ರತಿಭಟನೆಯ ಒಂದು ರೂಪವಾಗಿ ಅಳವಡಿಸಿಕೊಳ್ಳಲಾಯಿತು. ಇದು ಬಹಳ ಬೇಗನೆ ಜೆನ್ ಝೀ ಪೀಳಿಗೆಯ ಗಮನಸೆಳೆಯಿತು. ಪಕ್ಷ ರೂಪ ತಾಳಿದ ಕೆಲವೇ ದಿನಗಳಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಗಳಿಸಿತು. 2026ರ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿನ ವೈಫಲ್ಯಗಳ ವಿರುದ್ಧ ಸಿಜೆಪಿ ಸಿಡಿದೆದ್ದಿತು. ಜತೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿದೆ.
ಇನ್ನು ತಮ್ಮ ಪಕ್ಷದ ಇನ್‌ಸ್ಟಾಗ್ರಾಂ ಖಾತೆ ಹ್ಯಾಕೆ ಆಗಿದೆ ಎಂದು ದಿಪ್ಕೆ ಆರೋಪಿಸಿದ್ದಾರೆ. ಬ್ಯಾಕಪ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಿಬಿಐ ತನಿಖೆ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಕಾಕ್ರೋಚ್ ಜನತಾ ಪಾರ್ಟಿಯ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೀಡಿದ್ದರು ಎನ್ನಲಾದ ಹೇಳಿಕೆಗಳ ನಂತರ ಈ ತಿಂಗಳ ಆರಂಭದಲ್ಲಿ ವಿಡಂಬನಾತ್ಮಕ ಆನ್‌ಲೈನ್ ಅಭಿಯಾನ ಕಾಕ್ರೋಚ್ ಜನತಾ ಪಾರ್ಟಿ ಜನ್ಮ ತಾಳಿತ್ತು. ಕೇಂದ್ರೀಯ ತನಿಖಾ ದಳ (ಸಿಬಿಐ) ಸಿಜೆಪಿ ಪಕ್ಷದ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ವಕೀಲ ರಾಜಾ ಚೌಧರಿ ಸಲ್ಲಿಸಿರುವ ಈ ಅರ್ಜಿಯು, ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಮಾಡಲಾದ ಮೌಖಿಕ ಅಭಿಪ್ರಾಯಗಳನ್ನು ಕೆಲವು ಚಳವಳಿಗೆ ಸಂಬಂಧಿಸಿದ ವ್ಯಕ್ತಿಗಳು ವಾಣಿಜ್ಯ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಈ ಅಭಿಯಾನದೊಂದಿಗೆ ಗುರುತಿಸಿಕೊಂಡಿರುವ ಕೆಲವು ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ ನಕಲಿ ವಕೀಲರು ಮತ್ತು ನಕಲಿ ಕಾನೂನು ಪದವಿಗಳ ಕುರಿತು ತನಿಖೆ ನಡೆಸುವಂತೆಯೂ ಅದು ಒತ್ತಾಯಿಸಿದೆ.