ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ceasefire Violations: ಗಡಿ ರಾಜ್ಯಗಳಲ್ಲಿ ಡ್ರೋನ್‌ ಹಾರಾಟ, ಬ್ಲ್ಯಾಕ್‌ಔಟ್‌; ಕದನ ವಿರಾಮ ಉಲ್ಲಂಘನೆ ಬಳಿಕ ಏನೆಲ್ಲ ಆಯ್ತು?

ನಾಯಿ ಬಾಲ ಡೊಂಕು ಎನ್ನುವಂತೆ ಕದನ ವಿರಾಮ ಒಪ್ಪಂದ ಜಾರಿಯಾದ ಬಳಿಕವೂ ಪಾಕಿಸ್ತಾನ ತನ್ನ ದಾಳಿಯನ್ನು ಮುಂದುವರಿಸಿದೆ. ಶನಿವಾರ ಕದನ ವಿರಾಮ ಜಾರಿಯಾದ ಕೆಲವೇ ಗಂಟೆಗಳಲ್ಲಿ ಭಾರತದ ಮೇಲೆ ದಾಳಿ ನಡೆಸಿತು. ಭಾರತೀಯ ಸೇನೆ ಪಾಕ್‌ ಡ್ರೋನ್‌ಗಳನ್ನು ಹೊಡೆದುರುಳಿಸಿತು. ಜತೆಗೆ ತಕ್ಕ ಪ್ರತ್ಯುತ್ತರ ನೀಡುವ ಎಚ್ಚರಿಕೆ ನೀಡಿತು.

ಕದನ ವಿರಾಮ ಉಲ್ಲಂಘನೆ ಬಳಿಕ ಏನೆಲ್ಲ ಆಯ್ತು?

ಬ್ಲ್ಯಾಕ್‌ಔಟ್‌.

Profile Ramesh B May 11, 2025 3:57 AM

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನಗಳ ನಡುವೆ ಶನಿವಾರ (ಮೇ 10) ಸಂಜೆ ಕದನ ವಿರಾಮ (Ceasefire) ಜಾರಿಯಾದ ಕೂಡಲೇ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಗಡಿ ಪ್ರದೇಶಗಳಲ್ಲಿ ಪಾಕ್‌ನ ಅಪ್ರಚೋದಿತ ದಾಳಿ ಇನ್ನಾದರೂ ಕೊನೆಯಾಗಬಹುದು ಎಂದು ಬಹುತೇಕರು ಅಂದುಕೊಂಡಿದ್ದರು. ಆದರೆ ಈ ಊಹೆ ಸುಳ್ಳಾಗಿದೆ. ಒಪ್ಪಂದ ನಡೆದು ಈ ಬಗ್ಗೆ ಎರಡೂ ದೇಶಗಳು ಅಧಿಕೃತವಾಗಿ ಘೋಷಿಸುತ್ತಿದ್ದಂತೆ ಪಾಕಿಸ್ತಾನ ಬಾಲ ಬಿಚ್ಚಿದೆ (Ceasefire Violations). ರಾತ್ರಿಯಾಗುತ್ತಿದ್ದಂತೆ ಗಡಿ ರಾಜ್ಯಗಳಾದ ಜಮ್ಮು ಕಾಶ್ಮೀರ, ಪಂಜಾಬ್‌, ರಾಜಸ್ಥಾನ, ಗುಜರಾತ್‌ನ ಹಲವೆಡೆಗೆ ಡ್ರೋನ್‌ಗಳನ್ನು ಹಾರಿಸಿದ್ದು, ಇದನ್ನು ಭಾರತೀಯ ಸೇನೆಗಳು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಪಾಕಿಸ್ತಾನ ನಿಜ ಬಣ್ಣ ಮತ್ತೊಮ್ಮೆ ಪ್ರಪಂಚದ ಎದುರು ಬಟಾ ಬಯಲಾಗಿದೆ. ಪಾಕಿಸ್ತಾನವೇ ಕದನ ವಿರಾಮ ಉಲ್ಲಂಘಿಸಿದ್ದು ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿತು.

ಡ್ರೋನ್‌ ಜತೆಗೆ ಜಮ್ಮು ಕಾಶ್ಮೀರದ ಶ್ರೀನಗರ, ಉದ್ಧಂಪುರದಲ್ಲಿ ಶೆಲ್‌ ದಾಳಿಯೂ ನಡೆಯಿತು. ಈ ಹಿನ್ನಲೆಯಲ್ಲಿ ಹಲವು ನಗರಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಬ್ಲ್ಯಾಕ್‌ಔಟ್‌ ಮಾಡಲಾಯಿತು. ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ಚಕಮಕಿ ನಡೆದಿರುವುದಾಗಿ ವರದಿ ತಿಳಿಸಿದೆ. ಜಮ್ಮುವಿನ ನಾಗ್ರೋಟಾ ಸೇನಾ ಶಿಬಿರದ ಬಳಿ ಶಂಕಿತ ವ್ಯಕ್ತಿಯೊಂದಿಗಿನ ಗುಂಡಿನ ಚಕಮಕಿಯಲ್ಲಿ ಸೆಂಟ್ರಿಯೊಬ್ಬರು ಗಾಯಗೊಂಡಿದ್ದಾರೆ.



ಭಾರತದ ಮೇಲೆ ಗೂಬೆ ಕೂರಿಸಿದ ಪಾಕ್‌

ಕದನ ವಿರಾಮ ಒಪ್ಪಂದದ ಅನುಷ್ಠಾನಕ್ಕೆ ಬದ್ಧ ಎಂದು ಬೊಗಳೆ ಬಿಟ್ಟಿರುವ ಪಾಕಿಸ್ತಾನ ತನ್ನ ಪಡೆಗಳು ಪರಿಸ್ಥಿತಿಯನ್ನು ಜವಾಬ್ದಾರಿ ಮತ್ತು ಸಂಯಮದಿಂದ ನಿಭಾಯಿಸುತ್ತಿವೆ ಎಂದು ಹೇಳಿಕೊಂಡಿದೆ. ಭಾರತವು ಒಪ್ಪಂದ ಉಲ್ಲಂಘಿಸುತ್ತಿದೆ ಎಂದು ಗೂಬೆ ಕೂರಿಸಲು ಯತ್ನಿಸಿತು.

ಜೋಕ್‌ ಮಾಡಿದ ಮಾಜಿ ಪ್ರಧಾನಿ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಪಾಕಿಸ್ತಾನ ಶಾಂತಿ ಪ್ರಿಯ ರಾಷ್ಟ್ರ, ತನ್ನನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದು ಅದಕ್ಕೆ ತಿಳಿದಿದೆ ಎಂದು ಹೇಳುವ ಮೂಲಕ ಜೋಕ್‌ ಮಾಡಿದ್ದಾರೆ. ತಕ್ಷಣವೇ ಜಾರಿಯಾಗುವಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಜಾರಿಗೆ ಬಂದಿದೆ ಎಂದು ಅಮೆರಿಕ ಅ‍ಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ ಬೆನ್ನಲ್ಲೇ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.



ಈ ಸುದ್ದಿಯನ್ನೂ ಓದಿ: Ceasefire Violations: ಭಾರತದ ಪ್ರತೀಕಾರ ತಡೆದುಕೊಳ್ಳುತ್ತಾ ಪಾಕಿಸ್ತಾನ? ಕದನ ವಿರಾಮ ಉಲ್ಲಂಘನೆಗೆ ಬೆಲೆ ತೆರಲಿದೆ ಪಾಕ್‌

ಲೇಟೆಸ್ಟ್‌ ಅಪ್‌ಡೇಟ್‌

ಕದನ ವಿರಾಮದ ಹೊರತಾಗಿಯೂ ಡ್ರೋನ್ ಹಾರಾಟ ಮತ್ತು ಸ್ಫೋಟ: ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಸ್ವಲ್ಪ ಸಮಯದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ವಿಗ್ನತೆ ಮತ್ತೆ ಕಂಡುಬಂತು. ಉಧಂಪುರದ ಮೇಲೆ ಕಂಡುಬಂದ ಡ್ರೋನ್‌ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಶ್ರೀನಗರದ ಬಾದಾಮಿ ಬಾಗ್ ಕಂಟೋನ್ಮೆಂಟ್ ಬಳಿ ಸ್ಫೋಟ ನಡೆದಿದೆ. ಸೋಶಿಯಲ್‌ ಮೀಡಿಯಾಗಲಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಹಲವಾರು ಡ್ರೋನ್‌ಗಳ ಹಾರಾಟ ಸೆರೆಯಾಗಿದೆ ಮತ್ತು ಜೋರಾದ ಸ್ಫೋಟದ ಸದ್ದು ಕೇಳಿಸುತ್ತಿದೆ. ಆಡಳಿತ ಸ್ಥಳದಲ್ಲಿ ಕಟ್ಟೆಚ್ಚರ ವಹಿಸಿತು.

ಸ್ವಯಂಪ್ರೇರಿತ ವಿದ್ಯುತ್ ಕಡಿತ: ಡ್ರೋನ್‌ಗಳ ಹಾರಾಟ ಮತ್ತು ಸ್ಫೋಟಗಳ ವರದಿ ಹೊರಬಿದ್ದ ಬಳಿಕ ಜಮ್ಮು ಕಾಶ್ಮೀರದ ಕತ್ರಾ ಮತ್ತು ವೈಷ್ಣೋದೇವಿ ಭವನ ಪ್ರದೇಶದಲ್ಲಿ ಸ್ವಯಂಪ್ರೇರಿತವಾಗಿ ವಿದ್ಯುತ್ ಕಡಿತಗೊಳಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ದೀಪಗಳನ್ನು ಆಫ್ ಮಾಡಲಾಯಿತು. ಜನರು ಮನೆಯೊಳಗೆ ಇರಲು ಅಧಿಕಾರಿಗಳು ಸೂಚನೆ ನೀಡಿದರು.

ಪಂಜಾಬ್‌ನಲ್ಲೂ ಕಂಡುಬಂದ ಡ್ರೋನ್: ಇತ್ತ ಪಂಜಾಬ್‌ನಲ್ಲೂ ಡ್ರೋನ್‌ ಕಂಡು ಬಂದಿದ್ದು, ಅಲ್ಲೂ ಇದೇ ರೀತಿಯ ಭದ್ರತಾ ಕ್ರಮಗಳನ್ನು ಅಳವಡಿಸಲಾಯಿತು. ಅಮೃತಸರದಲ್ಲಿ ಬ್ಲ್ಯಾಕ್‌ಔಟ್‌ ಘೋಷಿಸಲಾಯಿತು. ಗುರುದಾಸ್ಪುರದಲ್ಲಿ ಕಂಡುಬಂದ ಡ್ರೋನ್‌ಗಳು ಉಡೀಸ್‌ ಮಾಡಲಾಯಿತು. ಲುಧಿಯಾನದಲ್ಲಿ ಬೀದಿ ದೀಪಗಳು ಆಫ್ ಮಾಡಲಾಯಿತು. ಫಿರೋಜ್‌ಪುರದಲ್ಲಿ ಜಿಲ್ಲಾಡಳಿತವು ಹಿಂದಿನಂತೆ ಬ್ಲ್ಯಾಕ್‌ಔಟ್‌ ಆದೇಶ ಹೊರಡಿಸಿತು.

ಭಟಿಂಡಾದಲ್ಲಿ ಮೊಳಗಿದ ಸೈರನ್‌: ಪಂಜಾಬ್‌ನ ಭಟಿಂಡಾದಲ್ಲಿ ಸೈರನ್ ಸದ್ದು ಕೇಳಿಬಂದಿದ್ದು, ಸಾರ್ವಜನಿಕರು ಕ್ಷಣ ಕಾಲ ಆತಂಕಕ್ಕೆ ಒಳಗಾದರು. ಇದಕ್ಕೆ ಪ್ರತಿಕ್ರಿಯಿಸಿದ ಭಟಿಂಡಾ ಜಿಲ್ಲಾಡಳಿತವು, ಯಾದರೆ ಬೆದರಿಕೆ ಇಲ್ಲ, ಮುನ್ನೆಚ್ಚರಿಕೆ ಕ್ರಮವಾಗಿ ಸೈರನ್‌ ಮೊಳಗಿಸಿದ್ದಾಗಿ ಧೈರ್ಯ ತುಂಬಿತು. ಕದನ ವಿರಾಮ ಉಲ್ಲಂಘನೆಯಾಗಿದ್ದರೂ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಅಗತ್ಯವಿದ್ದರೆ ಸಾರ್ವಜನಿಕರಿಗೆ ತಕ್ಷಣ ತಿಳಿಸಲಾಗುವುದು ಎಂದು ಸ್ಪಷ್ಟಪಡಿಸಿತು.



ಗುಜರಾತ್, ರಾಜಸ್ಥಾನದಲ್ಲಿ ಡ್ರೋನ್‌ ಹಾವಳಿ: ಗುಜರಾತ್‌, ರಾಜಸ್ಥಾನದಲ್ಲಿಯೂ ಡ್ರೋನ್‌ ಹಾರಾಟ ಕಂಡುಬಂತು. ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಡ್ರೋನ್‌ಗಳು ಕಾಣಿಸಿಕೊಂಡಿವೆ ಎಂದು ಗೃಹ ಸಚಿವ ಹರ್ಷ ಸಂಘವಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು. "ಕಚ್ ಜಿಲ್ಲೆಯಲ್ಲಿ ಹಲವು ಡ್ರೋನ್‌ಗಳು ಕಂಡುಬಂದಿವೆ. ಈಗ ಸಂಪೂರ್ಣ ಬ್ಲ್ಯಾಕ್‌ಔಟ್‌ ಜಾರಿಗೊಳಿಸಲಾಗುವುದು. ದಯವಿಟ್ಟು ಸುರಕ್ಷಿತವಾಗಿರಿ, ಭಯಪಡಬೇಡಿ" ಎಂದು ಅವರು ಎಕ್ಸ್‌ ಪೋಸ್ಟ್‌ ಮೂಲಕ ಅಭಯ ನೀಡಿದರು. ಇತ್ತ ರಾಜಸ್ಥಾನದ ಬಾರ್ಮರ್‌, ಜೈಸಲ್ಮೇರ್‌ನಲ್ಲಿ ಬ್ಲ್ಯಾಕ್‌ಔಟ್‌ ಘೋಷಿಸಲಾಯಿತು.