ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜನಗಣತಿ ನಿಯಮಗಳಿಗೆ ತಿದ್ದುಪಡಿ: ಖಾಸಗಿ ಶಾಲಾ ಶಿಕ್ಷಕರ ನೇಮಕಕ್ಕೆ ಕೇಂದ್ರದಿಂದ ಅಧಿಸೂಚನೆ

Census duty: ಸರ್ಕಾರಿ ಶಾಲೆಗಳ ಶಿಕ್ಷಕರ ಜೊತೆಗೆ ಖಾಸಗಿ ಶಾಲೆಗಳ ಶಿಕ್ಷಕರನ್ನೂ ಜನಗಣತಿ ಕೆಲಸಕ್ಕೆ ಬಳಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೇಮಿಸುವ ಗುಮಾಸ್ತರು ಹಾಗೂ ಇತರ ಸಿಬ್ಬಂದಿಯನ್ನೂ ಜನಗಣತಿದಾರರಾಗಿ ನಿಯೋಜಿಸಬಹುದು ಎಂದು ತಿಳಿಸಲಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಅ.17: ಜನಗಣತಿ ವೇಳೆ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರನ್ನೂ ಗಣತಿದಾರರಾಗಿ ನೇಮಿಸಿಕೊಳ್ಳಲು ರಾಜ್ಯ ಸರ್ಕಾರಗಳು (states) ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರವು 1990ರ ಜನಗಣತಿ ನಿಯಮಗಳಿಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿದೆ. ಅಂದರೆ ಸರ್ಕಾರಿ ಶಾಲೆಗಳ ಶಿಕ್ಷಕರ ಜೊತೆಗೆ ಖಾಸಗಿ ಶಾಲೆಗಳ ಶಿಕ್ಷಕರನ್ನೂ ಜನಗಣತಿ (Census) ಕೆಲಸಕ್ಕೆ ಬಳಸಿಕೊಳ್ಳಬಹುದು. ಭಾರತದ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೇಮಿಸುವ ಗುಮಾಸ್ತರು ಹಾಗೂ ಇತರ ಸಿಬ್ಬಂದಿಯನ್ನೂ ಜನಗಣತಿದಾರರಾಗಿ ನಿಯೋಜಿಸಬಹುದು ಎಂದು ತಿಳಿಸಲಾಗಿದೆ.

ಶುಕ್ರವಾರದ (ಅ.16) ಅಧಿಸೂಚನೆ ಹೊರಬರುವ ಮೊದಲು, 1990ರ ಜನಗಣತಿ ನಿಯಮಗಳ ಪ್ರಕಾರ, ಗಣತಿದಾರರಾಗಿ ನಿಯೋಜಿಸಬಹುದಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಲಾಗಿರಲಿಲ್ಲ. ಶಿಕ್ಷಕರು, ಗುಮಾಸ್ತರು, ಯಾವುದೇ ಅಧಿಕಾರಿ ಅಥವಾ ಇತರ ವ್ಯಕ್ತಿ ಎಂದು ಮಾತ್ರ ಉಲ್ಲೇಖಿಸಲಾಗಿತ್ತು.

ಖಾಸಗಿ ಅನುದಾನರಹಿತ ಶಾಲೆಗಳ ಬೋಧಕ ಸಿಬ್ಬಂದಿಯನ್ನು ಜನಗಣತಿ ಕರ್ತವ್ಯಕ್ಕೆ ನಿಯೋಜಿಸುವುದನ್ನು ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಂತಹ ಅರ್ಜಿಗಳು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿಯೂ ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.

ಒಂದು ಮಗು ತೋಳಿನಲ್ಲಿ, ಮತ್ತೊಂದು ಮಗು ಕೈಯಲ್ಲಿ; ಇಬ್ಬರು ಮಕ್ಕಳೊಂದಿಗೆ ಜನಗಣತಿ ಕರ್ತವ್ಯ ನಿರ್ವಹಿಸುವ ಶಿಕ್ಷಕಿಯ ವಿಡಿಯೊ ವೈರಲ್‌

ಅಧಿಸೂಚನೆಯ ಪ್ರಕಾರ, “1948ರ ಜನಗಣತಿ ಕಾಯ್ದೆಯ (1948ರ 37ನೇ ಕಾಯ್ದೆ) ಸೆಕ್ಷನ್ 18ರ ಉಪವಿಭಾಗ (1)ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕೇಂದ್ರ ಸರ್ಕಾರವು 1990ರ ಜನಗಣತಿ ನಿಯಮಗಳಿಗೆ ಮತ್ತಷ್ಟು ತಿದ್ದುಪಡಿ ತರುವ ಸಲುವಾಗಿ ನಿಯಮಗಳನ್ನು ರೂಪಿಸಿದೆ ಎಂದು ತಿಳಿಸಲಾಗಿದೆ. ಆ ನಿಯಮಗಳು ಏನೇನು ಎಂಬುದು ಇಲ್ಲಿದೆ:

  1. ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಅನುದಾನಿತ ಅಥವಾ ಅನುದಾನರಹಿತ ಖಾಸಗಿ ಸಂಸ್ಥೆಗಳು, ಸಂಘಗಳು ಅಥವಾ ಟ್ರಸ್ಟ್‌ಗಳಿಗೆ ಸೇರಿದ ಯಾವುದೇ ಶಿಕ್ಷಣ ಸಂಸ್ಥೆಯ ಶಿಕ್ಷಕರು.
  2. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು ಅಥವಾ ಸಾರ್ವಜನಿಕ ವಲಯದ ಉದ್ಯಮಗಳು, ಶಾಸನಬದ್ಧ ಸಂಸ್ಥೆಗಳು, ಬ್ಯಾಂಕ್‌ಗಳು, ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಸಂಘಗಳು ಮತ್ತು ಟ್ರಸ್ಟ್‌ಗಳು ಸೇರಿದಂತೆ ಯಾವುದೇ ಸಂಸ್ಥೆಯ ಗುಮಾಸ್ತರು ಅಥವಾ ಅಧಿಕಾರಿಗಳು.
  3. ಗಣತಿದಾರರಾಗಿ ಕರ್ತವ್ಯ ನಿರ್ವಹಿಸಲು ಸೂಕ್ತರೆಂದು ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತವು ಪರಿಗಣಿಸುವ ಯಾವುದೇ ವ್ಯಕ್ತಿ.

ವಿವಿಧ ರಾಜ್ಯಗಳಲ್ಲಿ ಜನಗಣತಿ ವೇಳಾಪಟ್ಟಿ

ಮುಂದಿನ ವರ್ಷ ಈ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಗೋವಾ, ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದ ಹಿಮಪೀಡಿತ ಪ್ರದೇಶಗಳನ್ನು ಹೊರತುಪಡಿಸಿದ ಇತರ ಭಾಗಗಳಲ್ಲಿ ಜನಸಂಖ್ಯೆ ಗಣತಿ ಕಾರ್ಯವು 2026ರ ಡಿಸೆಂಬರ್ 1ರಿಂದ 2027ರ ಜನವರಿ 4ರವರೆಗೆ ನಡೆಯಲಿದೆ.

ಭಾರತದ ರಿಜಿಸ್ಟ್ರಾರ್ ಜನರಲ್ ಕಳೆದ ತಿಂಗಳು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಮಣಿಪುರದಲ್ಲಿ 2027ರ ಜನಗಣತಿಗಾಗಿ ಮನೆಗಳ ಪಟ್ಟಿ ತಯಾರಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮುಂದೂಡಿದೆ. ದೇಶದ ಉಳಿದ ಭಾಗಗಳಲ್ಲಿ ಜನಗಣತಿ ಕಾರ್ಯವು ಮುಂದಿನ ಫೆಬ್ರವರಿಯಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಈ ವೇಳೆ ಪ್ರತಿ ಕುಟುಂಬದ ಸದಸ್ಯರ ಜನಸಂಖ್ಯಾ ವಿವರಗಳು, ಸಾಮಾಜಿಕ-ಸಾಂಸ್ಕೃತಿಕ ಮತ್ತು ಆರ್ಥಿಕ ಮಾಹಿತಿಯ ಜೊತೆಗೆ, ಅವರ ವಲಸೆ ಹಾಗೂ ಮಕ್ಕಳ ಜನನಕ್ಕೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಲಾಗುತ್ತದೆ.