ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಜನಗಣತಿ ಆರಂಭ; ಆನ್‌ಲೈನ್‌ನಲ್ಲಿ ವಿವರಗಳನ್ನು ನೀವೇ ತುಂಬಲು ಇಲ್ಲಿದೆ ಗೈಡ್‌ಲೈನ್
Census 2027: ದೇಶದ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪ್ರಕ್ರಿಯೆ ಎನಿಸಿಕೊಂಡಿರುವ ಜನಗಣತಿಯ ಮೊದಲ ಹಂತ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಆರಂಭವಾಗಿದೆ. ಈ ಬಾರಿ ಸ್ವಯಂ ಗಣತಿಗೂ ಅವಕಾಶ ನೀಡಲಾಗಿದೆ. ಏನಿದು ಸ್ವಯಂ ಗಣತಿ? ಇದರಿಂದ ಏನೆಲ್ಲ ಅನುಕೂಲವಿದೆ? ಮುಂತಾದ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಮೆಟಾ ಎಐ ಚಿತ್ರ -
ಬೆಂಗಳೂರು, ಏ. 2: ದೇಶದ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪ್ರಕ್ರಿಯೆ ಎನಿಸಿಕೊಂಡಿರುವ ಜನಗಣತಿಯ ಮೊದಲ ಹಂತ ಆರಂಭವಾಗಿದೆ (Census 2027). ಪ್ರತಿ 10 ವರ್ಷಕ್ಕೊಮ್ಮೆ ನಡೆಯಬೇಕಿದ್ದ ಜನಗಣತಿ ಈ ಬಾರಿ 15 ವರ್ಷಗಳ ಬಳಿಕ ನಡೆಯುತ್ತಿದೆ. ಕೊನೆಯ ಬಾರಿ 2011ರಲ್ಲಿ ಸೆನ್ಸಸ್ ನಡೆದಿತ್ತು. ಕೊರೋನಾ ಕಾರಣದಿಂದ 2021ರಲ್ಲಿ ನಡೆಯಬೇಕಿದ್ದ ಗಣತಿಯನ್ನು ಮುಂದೂಡಲಾಗಿತ್ತು. ಇದೀಗ ಕೊನೆಗೂ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ವಿಶೇಷ ಎಂದರೆ 2027ರ ಈ ಜನಗಣತಿ ಡಿಜಿಟಲ್ ರೂಪ ತಾಳಿದೆ. ಹೌದು ಏಪ್ರಿಲ್ 1ರಂದು ಕರ್ನಾಟಕವೂ ಸೇರಿ 8 ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಆರಂಭವಾದ ಜನಗಣತಿ ಡಿಜಿಟಲ್ ವಿಧಾನದಲ್ಲಿ ನಡೆಯುತ್ತಿದೆ. ಜತೆಗೆ ಸ್ವಯಂ ಗಣತಿಗೂ ಅವಕಾಶ ನೀಡಲಾಗಿದೆ. ಅಂದರೆ ನಿಮ್ಮ ವಿವರವನ್ನು ನೀವೇ ಸರ್ಕಾರಕ್ಕೆ ನೀಡಬಹುದು. ಅದು ಹೇಗೆ? ಏನಿದು ಡಿಜಿಟಲ್ ಜನಗಣತಿ? ಇದರಿಂದ ಏನೆಲ್ಲ ಅನುಕೂಲವಿದೆ? ಮುಂತಾದ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಜನಗಣತಿಗೆ ಕೇಂದ್ರ ಸರ್ಕಾರ 11,718 ಕೋಟಿ ರುಪಾಯಿ ಮೀಸಲಿಟ್ಟಿದ್ದು, ಮೊದಲ ಹಂತದಲ್ಲಿ ಕರ್ನಾಟಕ, ಗೋವಾ, ಸಿಕ್ಕಿಂ, ಒಡಿಶಾ, ಮಿಜೋರಾಂ, ದೆಹಲಿ, ಲಕ್ಷದ್ವೀಪ ಮತ್ತು ಅಂಡಮಾನ್‌ನಲ್ಲಿ ನಡೆಯಲಿದೆ. ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಸ್ವಯಂ ಗಣತಿ ಹಾಗೂ ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ ಪಟ್ಟಿ ಮಾಡುವುದು ಮತ್ತು ಮನೆ ಗಣತಿ ನಡೆಯಲಿದೆ. ಆ ಮೂಲಕ ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಮುನ್ನವೇ ಸ್ವಯಂ ನೋಂದಣಿಗೆ 15 ದಿನಗಳ ಅವಕಾಶ ನೀಡಲಾಗಿದೆ. ಮನೆಯಲ್ಲಿಯೇ ಕುಳಿತು 10 ನಿಮಿಷದೊಳಗೆ ಆನ್‌ಲೈನ್‌ನಲ್ಲಿ ನೀವೇ ಮಾಹಿತಿ ನೀಡಬಹುದು. ಈ ವೇಳೆ ಯಾವುದೇ ದಾಖಲೆ ನೀಡಬೇಕಾಗಿಲ್ಲ.
16 ಭಾಷೆಗಳಲ್ಲಿ ಮಾಹಿತಿ ನೀಡಿ
ಸ್ವಯಂಗಣತಿ ವೇಳೆ 16 ಭಾಷೆಗಳಲ್ಲಿ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ 16ನೇ ಗಣತಿ ಸಂಪೂರ್ಣವಾಗಿ ಡಿಜಿಟಲ್ ವೇದಿಕೆ ಬಳಸಿ ನಡೆಯುವ ಮೊದಲ ಜನಗಣತಿ ಎಂಬ ಹೆಗ್ಗಳಿಕೆ ಹೊಂದಿದೆ. ಈ ಡಿಜಿಟಲ್ ಗಣತಿ ಕಾರ್ಯದಲ್ಲಿ ಸುಮಾರು 30 ಲಕ್ಷ ಗಣತಿದಾರರು, ಮೇಲುಸ್ತುವಾರಿಗಳು ಮತ್ತು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಜತೆಗೆ ಗಣತಿಗಾಗಿ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ.
ನೀವೇ ಮಾಹಿತಿ ನೀಡಿ
ನೀವು ತಮ್ಮ ಹಾಗೂ ಕುಟುಂಬದವರ ವಿವರಗಳಲ್ಲಿ ಆನ್‌ಲೈನ್‌ನಲ್ಲೇ ತುಂಬಬಹುದು. ಭರ್ತಿ ಮಾಡಿ ಸಲ್ಲಿಸಿದ ಬಳಿಕ ಸಿಗುವ ಐಡಿಯನ್ನು ಸಮೀಕ್ಷೆಗೆ ಆಗಮಿಸುವ ಗಣತಿದಾರರಿಗೆ ನೀಡಿದರೆ ಸಾಕು. ಅವರು ಈ ಐಡಿಯನ್ನು ಪರಿಶೀಲಿಸಿ ಮಾಹಿತಿ ದೃಢಪಡಿಸುತ್ತಾರೆ.
ಸ್ವಯಂ ಗಣತಿಯಲ್ಲಿ ಭಾಗವಹಿಸುವುದು ಹೇಗೆ?
- ಮೊದಲು ಅಧಿಕೃತ ವೆಬ್ ಪೋರ್ಟಲ್ https://se.census.gov.inಗೆ ಭೇಟಿ ನೀಡಿ.
- ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ನಮೂದಿಸಿ.
- ನಿಮ್ಮ ಮೊಬೈಲ್‌ಗೆ ಬರುವ ಓಟಿಪಿ (OTP) ಅನ್ನು ನಮೂದಿಸುವ ಮೂಲಕ ಲಾಗಿನ್ ಆಗಿ.
- ಅಲ್ಲಿ ಕೇಳಲಾಗುವ ನಿಮ್ಮ ಕುಟುಂಬದ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಬ್‌ಮಿಟ್ ಮಾಡಿ.
- ಮಾಹಿತಿ ಸಲ್ಲಿಕೆ ಪೂರ್ಣಗೊಂಡ ಬಳಿಕ ನಿಮಗೆ ವಿಶೇಷ ಗುರುತಿನ ಸಂಖ್ಯೆ ದೊರೆಯುತ್ತಿದೆ. ಈ ಸಂಖ್ಯೆಯನ್ನು ಗಣತಿದಾರರು ಬಂದಾಗ ತೋರಿಸಿ.
ಏನೆಲ್ಲ ವಿವರ ನೀಡಬೇಕು?
ಸರ್ಕಾರ 33 ಪ್ರಶ್ನೆಗಳು ಸಿದ್ಧಪಡಿಸಿದೆ. ಇದರಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು, ಸದಸ್ಯರ ಸಂಖ್ಯೆ, ವಯಸ್ಸು, ಶಿಕ್ಷಣ, ವೃತ್ತಿ, ನಿಮ್ಮ ಮನೆಗೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಶ್ನೆಗಳಿವೆ. ಅಂದರೆ ಕುಡಿಯುವ ನೀರಿನ ಮುಖ್ಯ ಮೂಲ ಮತ್ತು ಲಭ್ಯತೆ, ಬೆಳಕಿನ ಮೂಲ, ಶೌಚಾಲಯದ ವಿಧ, ತ್ಯಾಜ್ಯ ನೀರು ಹೊರಹೋಗುವ ವ್ಯವಸ್ಥೆ, ಸ್ನಾನ ಮತ್ತು ಅಡುಗೆ ಸೌಲಭ್ಯಗಳ ಲಭ್ಯತೆ, ಎಲ್‌ಪಿಜಿ/ಪಿಎನ್‌ಜಿ ಸಂಪರ್ಕ, ರೇಡಿಯೊ, ಟಿವಿ, ಇಂಟರ್‌ನೆಟ್ ಸೌಲಭ್ಯ, ವಾಹನಗಳ ವಿವರ ಮುಂತಾದ ಮಾಹಿತಿ ಕಲೆ ಹಾಕಲಾಗುತ್ತದೆ.
ಕರ್ನಾಟಕದಲ್ಲಿ ಇಂದಿನಿಂದ ಜನಗಣತಿ ಆರಂಭ, ಸಕ್ರಿಯವಾಗಿ ಪಾಲ್ಗೊಳ್ಳಲು ಗಣ್ಯರ ಕರೆ
ಅನುಕೂಲ
ಡಿಜಿಟಲ್ ಗಣತಿಯಿಂದ ನಿಮ್ಮ ಮನೆಯ ಖಾಸಗಿ ಮಾಹಿತಿಯನ್ನು ನೀವೇ ನೇರವಾಗಿ ಸರ್ಕಾರಕ್ಕೆ ಸಲ್ಲಿಸಬಹುದು. ಜತೆಗೆ ಗಣತಿದಾರರು ಬಂದಾಗ ಗಂಟೆಗಟ್ಟಲೆ ಅವರಿಗೆ ಮಾಹಿತಿ ನೀಡುತ್ತ ಸಮಯ ವ್ಯರ್ಥ ಮಾಡಬೇಕಿಲ್ಲ. ಅಲ್ಲದೆ ನಿಮ್ಮ ಮಾಹಿತಿಯನ್ನು ನೀವೇ ಭರ್ತಿ ಮಾಡುವುದರಿಂದ ತಪ್ಪುಗಳಾಗುವ ಸಾಧ್ಯತೆ ಕಡಿಮೆ.
2 ಹಂತಗಳಲ್ಲಿ ಗಣತಿ
ಈ ಜನಗಣತಿಯನ್ನು 2 ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲ ಹಂತ ಏಪ್ರಿಲ್ 15ರಿಂದ ಸೆಪ್ಟೆಂಬರ್‌ವರೆಗೆ ನಡೆಯಲಿದೆ. ಈ ಹಂತದಲ್ಲಿ ಮನೆಗಳ ಮತ್ತು ವಸತಿ ವ್ಯವಸ್ಥೆಯ ಮಾಹಿತಿ ಕಲೆ ಹಾಕಲಾಗುತ್ತದೆ. 2ನೇ ಹಂತ 2027ರ ಫೆಬ್ರವರಿಯಲ್ಲಿ ನೆರವೇರಲಿದೆ. ಈ ವೇಳೆ ಶಿಕ್ಷಣ, ಉದ್ಯೋಗ ಮುಂತಾದ ವಿವರಗಳನ್ನು ದಾಖಲಿಸಲಾಗುತ್ತದೆ.
ಸಿದ್ದರಾಮಯ್ಯ ಮನವಿ
ʼʼಜನಗಣತಿಯಲ್ಲಿ ನಿಮ್ಮ ಭಾಗವಹಿಸುವಿಕೆ ಅತ್ಯಂತ ಮುಖ್ಯ. ಇದು ಕೇವಲ ಕರ್ತವ್ಯವಲ್ಲ, ಕರ್ನಾಟಕದ ಅಭಿವೃದ್ಧಿಗೆ ನಿಮ್ಮ ಕೊಡುಗೆ. ಇಂದು ನೀವು ನೀಡುವ ನಿಖರ ಮಾಹಿತಿ, ನಾಳೆಯ ಉತ್ತಮ ನೀತಿಗಳು, ಸೇವೆಗಳಿಗೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಆಧಾರವಾಗುತ್ತದೆ. ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಗಣತಿಯಲ್ಲಿ ಯಾರೂ ಬಿಟ್ಟು ಹೋಗದಂತೆ ನಾವು ಖಚಿತಪಡಿಸುತ್ತೇವೆ. ಆದ್ದರಿಂದ ನಿಗದಿತ ಅವಧಿಯಲ್ಲಿ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ ಜನಗಣತಿ 2027 ಅನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಕೈಜೋಡಿಸೋಣʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದೇಶ ನೀಡಿದ್ದಾರೆ.
2011ರ ಜನಗಣತಿಯ ಅಂಕಿ-ಅಂಶ
2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಸುಮಾರು 121 ಜನಸಂಖ್ಯೆ ಇತ್ತು. ಇದರಲ್ಲಿ ಸುಮಾರು 62.31 ಕೋಟಿ ಪುರುಷರು ಮತ್ತು 58.75 ಕೋಟಿ ಮಹಿಳೆಯರಿದ್ದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.