ನವದೆಹಲಿ: ಇರಾನ್ (Iran war) ಸಮೀಪದಲ್ಲಿ ಹೊರ್ಮುಜ್ ಜಲಸಂಧಿಯಲ್ಲಿ ( Strait of Hormuz) ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ದಾಳಿಯಾಗಿದ್ದು (attack on MT Liaki Freedom), ನಾಲ್ವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಇದೊಂದು ಸುಳ್ಳು ಸುದ್ದಿ (fake news) ಎಂದು ಭಾರತೀಯ ವಿದೇಶಾಂಗ ಸಚಿವಾಲಯ (Ministry of External Affairs) ಶುಕ್ರವಾರ ಸ್ಪಷ್ಟನೆಯನ್ನು ನೀಡಿದೆ. ಹಡಗಿನ ಮಾಸ್ಟರ್ ಜೊತೆ ಮಾತನಾಡಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.
ಎಂಟಿ ಲಿಯಾಕಿ ಫ್ರೀಡಂ ಹಡಗಿನ ಮೇಲೆ ಮಿಲಿಟರಿ ದಾಳಿ ನಡೆದಿದೆ ಎಂಬ ಸಾಮಾಜಿಕ ಮಾಧ್ಯಮ ವರದಿಗಳನ್ನು ವಿದೇಶಾಂಗ ಸಚಿವಾಲಯ ತಳ್ಳಿಹಾಕಿದ್ದು, ಹಡಗಿನಲ್ಲಿರುವ ಎಲ್ಲಾ ಭಾರತೀಯ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ದೃಢಪಡಿಸಿದೆ.
ಭಾರತೀಯ ನಾವಿಕರಿದ್ದ ಲಿಯಾಕಿ ಫ್ರೀಡಂ ಹಡಗಿನ ಮೇಲೆ ಮಿಲಿಟರಿ ದಾಳಿ ನಡೆದಿದೆ. ಹಡಗಿನಲ್ಲಿದ್ದ ನಾಲ್ವರು ನಾವಿಕರು ಸಾವನ್ನಪ್ಪಿದ್ದಾರೆ ಎನ್ನುವ ಸುಳ್ಳು ಸುದ್ದಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಶುಕ್ರವಾರ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ನಾವು ಲಿಯಾಕಿ ಫ್ರೀಡಂ ಹಡಗಿನ ಮಾಸ್ಟರ್ ಜೊತೆ ಮಾತನಾಡಿದ್ದೇವೆ. ಅವರು ಎಲ್ಲಾ ಸಿಬ್ಬಂದಿ ಸದಸ್ಯರು ಸುರಕ್ಷಿತರಾಗಿದ್ದಾರೆ ಮತ್ತು ವರದಿಯಾದ ಮಾಹಿತಿ ಸುಳ್ಳು ಎಂಬುದಾಗಿ ದೃಢಪಡಿಸಿದ್ದಾರೆ ಎಂದು ಹೇಳಿದೆ.
ಸಾಮಾಜಿಕ ಮಾಧ್ಯಮಗಳು, ವಿವಿಧ ಅನಧಿಕೃತ ಚಾನೆಲ್‌ಗಳ ಮೂಲಕ ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಟಿ ಲಿಯಾಕಿ ಫ್ರೀಡಂ ಟ್ಯಾಂಕರ್ ಮೇಲೆ ದಾಳಿಯಾಗಿದೆ. ನಾಲ್ವರು ನಾವಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ (ಡಿಜಿ ಶಿಪ್ಪಿಂಗ್) ಗೆ ಸಂಬಂಧಿಸಿದ ಮೂಲಗಳು ತಳ್ಳಿ ಹಾಕಿವೆ.
ಈ ಪ್ರದೇಶದಲ್ಲಿ ನಡೆಯುತ್ತಿರುವ ಭದ್ರತಾ ಉದ್ವಿಗ್ನತೆ, ಹಲವು ದಾಳಿಗಳ ಕಾರಣದಿಂದ ಎಂಟಿ ಲಿಯಾಕಿ ಫ್ರೀಡಂ ಹಡಗಿನ ಬಗ್ಗೆ ಸುಳ್ಳು ಮಾಹಿತಿ ಪ್ರಸಾರವಾಗಿದೆ. ನೈಜ್ಯತೆಯನ್ನು ಪರಿಶೀಲಿಸದ ಹೇಳಿಕೆಗಳನ್ನು ನೀಡಲಾಗಿದೆ. ಅಂತಹ ಯಾವುದೇ ಘಟನೆ ಈ ಭಾಗದಲ್ಲಿ ನಡೆದಿಲ್ಲ ಎನ್ನುವುದು ಕೂಡ ದೃಢಪಟ್ಟಿಲ್ಲ.
ಕೆಲವು ದಿನಗಳ ಹಿಂದೆ ಮಧ್ಯೆ ಕೊಲ್ಲಿಯಲ್ಲಿ ಮೂರು ಭಾರತೀಯ ಹಡಗುಗಳನ್ನು ಇರಾನ್ ಗುರಿಯಾಗಿಸಿಕೊಂಡಿತ್ತು. ಇದರ ಬಳಿಕ ಇದೀಗ ಎಂಟಿ ಲಿಯಾಕಿ ಫ್ರೀಡಂ ಹಡಗಿನ ಬಗ್ಗೆ ಸುಳ್ಳು ಸುದ್ದಿ ವೈರಲ್ ಆಗಿದೆ.
ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ಡ್ರೋನ್ ದಾಳಿ ಯತ್ನ: ಇರಾನ್ ವಿರುದ್ಧ ಟ್ರಂಪ್ ಕಿಡಿ
ಕೆಲವು ದಿನಗಳ ಹಿಂದೆ ಓಮನ್ ಕರಾವಳಿಯಲ್ಲಿ ಪಲಾವ್ ಧ್ವಜ ಹೊಂದಿದ್ದ ಟ್ಯಾಂಕರ್ ಎಂಟಿ ಸೆಟ್ಬೆಲ್ಲೊ ಮೇಲೆ ಅಮೆರಿಕದ ಸೇನೆ ದಾಳಿ ನಡೆಸಿತ್ತು. ಇದರಲ್ಲಿ ಮೂವರು ಭಾರತೀಯ ಸಿಬ್ಬಂದಿ ಸಾವನ್ನಪ್ಪಿದರು. ಹಡಗಿನಲ್ಲಿ ಒಟ್ಟು 24 ಭಾರತೀಯ ಸಿಬ್ಬಂದಿ ಇದ್ದು, ಅವರಲ್ಲಿ 21 ಮಂದಿಯನ್ನು ರಕ್ಷಿಸಲಾಗಿತ್ತು. ಇದನ್ನು ನವದೆಹಲಿಯು ತೀವ್ರವಾಗಿ ಖಂಡಿಸಿತ್ತು.