ನವದೆಹಲಿ, ಫೆ. 26: 14 ವರ್ಷದ ಬಾಲಕಿಯರಿಗೆ ರಾಷ್ಟ್ರವ್ಯಾಪಿ ಎಚ್‌ಪಿವಿ ಲಸಿಕೆಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಫೆಬ್ರವರಿ 28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ರಾಜಸ್ಥಾನದ ಅಜ್ಮೀರ್‌ನಲ್ಲಿ 14 ವರ್ಷದ ಬಾಲಕಿಯರಿಗೆ ದೇಶವ್ಯಾಪಿ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ (Human Papillomavirus Vaccination) ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಈ ಲಸಿಕೆ ರೋಗನಿರೋಧಕ ಶಕ್ತಿಯ ಮೂಲಕ ಗರ್ಭಕಂಠದ ಕ್ಯಾನ್ಸರ್ (cervical cancer) ತಡೆಗಟ್ಟುತ್ತದೆ.
ಫೆಬ್ರವರಿ 25ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾದ ಅಧಿಕೃತ ಪತ್ರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಫೆಬ್ರವರಿ 28ರಂದು ಬೆಳಗ್ಗೆ 11.30ಕ್ಕೆ ಅಭಿಯಾನಕ್ಕೆ ಚಾಲನೆ ನೀಡಲು ಮುಂದಾಗಿದೆ. ರಾಜಸ್ಥಾನದ ಅಜ್ಮೀರ್‌ನಿಂದ ಅಭಿಯಾನವನ್ನು ಪ್ರಾರಂಭಿಸಲು ಪ್ರಧಾನ ಮಂತ್ರಿ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದೆ.
ನಮ್ಮ ದೇಶದಲ್ಲಿ ಮತ್ತು ಜಾಗತಿಕವಾಗಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಲ್ಲಿ ಕಂಡುಬರುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಇದು ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ನಿಂದ ಉಂಟಾಗುತ್ತದೆ ಮತ್ತು ಲಸಿಕೆಯಿಂದ ತಡೆಯಬಹುದಾದ ಏಕೈಕ ಕ್ಯಾನ್ಸರ್ ಇದಾಗಿದೆ. ಹೀಗಾಗಿ ಬಾಲಕಿಯರಿಗೆ ಈ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ಕೇಂದ್ರ ತಿಳಿಸಿದೆ.
ಉತ್ತಮ ಆಹಾರ ಸೇವನೆಯಿಂದಲೂ ತಡೆಗಟ್ಟಬಹುದು ಗರ್ಭಕಂಠದ ಕ್ಯಾನ್ಸರ್!
ಈ ಅಭಿಯಾನದ ಆರಂಭದಲ್ಲಿ 14 ವರ್ಷದ ಬಾಲಕಿಯರಿಗೆ ಲಸಿಕೆ ನೀಡಲಾಗುತ್ತದೆ. ಅಂದರೆ ತಮ್ಮ 14ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ, ಆದರೆ ಇನ್ನೂ 15 ವರ್ಷ ತುಂಬದ ಹುಡುಗಿಯರಿಗೆ ನೀಡಲಾಗುತ್ತದೆ. ಇದು ಮೂರು ತಿಂಗಳ ತೀವ್ರ ಕಾರ್ಯಕ್ರಮವಾಗಿ ನಡೆಯಲಿದೆ. ನಂತರ ಇದನ್ನು ನಿಯಮಿತ ಲಸಿಕಾ ಸೇವೆಗಳಲ್ಲಿ ಬಳಸಲಾಗುತ್ತದೆ.
ಖಾಲಿ ಹೊಟ್ಟೆಗೆ ಲಸಿಕೆ ನೀಡಬಾರದು. ಲಸಿಕೆ ಹಾಕಿದ ನಂತರ 30 ನಿಮಿಷಗಳ ಕಾಲ ಅವರನ್ನು ಗಮನಿಸಬೇಕು ಮತ್ತು ಗುಂಪುಗೂಡುವುದನ್ನು ತಪ್ಪಿಸುವುದು ಅಗತ್ಯ ಎಂದು ತಜ್ಞರು ಸೂಚಿಸಿದ್ದಾರೆ. ಮಾರ್ಗಸೂಚಿಯ ಪ್ರಕಾರ ಪ್ರಧಾನ ಮಂತ್ರಿಯು ಲಸಿಕೆಗೆ ಚಾಲನೆ ನೀಡಿದ ನಂತರ ತಕ್ಷಣವೇ ಅನುಷ್ಠಾನವನ್ನು ಪ್ರಾರಂಭಿಸಲು ರಾಜ್ಯಗಳಿಗೆ ನಿರ್ದೇಶಿಸಲಾಗಿದೆ.
ಶ್ವಾಸಕೋಶದ ಕ್ಯಾನ್ಸರ್ ಪತ್ತೆ: 65 ವರ್ಷದ ಮಹಿಳೆಗೆ 'ನ್ಯಾವಿಗೇಷನ್ ಆಧಾರಿತ ಬ್ರಾಂಕೋಸ್ಕೋಪಿ' ಯಶಸ್ವಿ
ಲಸಿಕೆ ಅಭಿಯಾನ ಪ್ರಾರಂಭವಾದ 90 ದಿನಗಳ ನಂತರ 15 ವರ್ಷ ತುಂಬುವ ಹುಡುಗಿಯರು ಸಹ ಎಚ್‌ಪಿವಿ ಲಸಿಕೆಗೆ ಅರ್ಹರಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಎಚ್‌ಪಿವಿ ಲಸಿಕೆ ಸ್ವಯಂಪ್ರೇರಿತವಾಗಿದೆ. ಬಾಲಕಿಯರಿಗೆ ಲಸಿಕೆ ಹಾಕುವ ಮೊದಲು ಪೋಷಕರಿಂದ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಪುನರುಚ್ಚರಿಸಲಾಗಿದೆ. ಆಯುಷ್ಮಾನ್ ಆರೋಗ್ಯ ಮಂದಿರ-ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಉಪ ಜಿಲ್ಲಾ/ಜಿಲ್ಲಾ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಗಳನ್ನು ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.