ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂಪೂರ್ಣ ಅರಾವಳಿ ರಕ್ಷಣೆಗೆ ಬದ್ಧ ಎಂದ ಕೇಂದ್ರ; ಹೊಸ ಗಣಿಗಾರಿಕೆಗೆ ಗುತ್ತಿಗೆ ಇಲ್ಲ

Aravallis Hills: ದೆಹಲಿಯಿಂದ ಗುಜರಾತ್‌ವರೆಗೆ ವ್ಯಾಪಿಸಿರುವ ಅರಾವಳಿ ಪರ್ವತ ಶ್ರೇಣಿಯನ್ನು ರಕ್ಷಿಸುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಪ್ರದೇಶದಲ್ಲಿ ಹೊಸ ಮೈನಿಂಗ್‌ಗೆ ಅವಕಾಶ ನೀಡಬಾರದೆಂದು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ಸರ್ಕಾರಗಳಿಗೆ ಸೂಚನೆ ನೀಡಿದೆ. ಹಲವು ವರ್ಷಗಳಿಂದ ಅರಾವಳಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಕ್ಷಣ ನಿಲ್ಲಿಸಬೇಕೆಂದು ಪರಿಸರ ಹೋರಾಟಗಾರರು ಆಗ್ರಹಿಸುತ್ತಲೇ ಬಂದಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ಉತ್ತರ ಭಾಗದ ಅರಾವಳಿ ಪರ್ವತಗಳನ್ನು(Aravalli hills) ಹಸಿರಿನಿಂದ ಸಂರಕ್ಷಿಸುವ ತನ್ನ ಬದ್ಧತೆಯನ್ನು ಕೇಂದ್ರ ಸರ್ಕಾರ(Central Government) ಪುನರುಚ್ಚರಿಸಿದೆ. ಅರಾವಳಿ ಬೆಟ್ಟಗಳು ಮತ್ತು ಪರ್ವತ ಶ್ರೇಣಿಗಳ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಘೋಷಿಸಲಾದ ಹೊಸ ನಿಯಮಗಳ ಬಗ್ಗೆ ಉಂಟಾದ ವಿವಾದದ ನಡುವೆಯೇ, ಅರಾವಳಿ ಭಾಗದಲ್ಲಿ ಹೊಸ ಗಣಿಗಾರಿಕಾ ಪರವಾನಗಿಗೆ ಸಂಪೂರ್ಣ ನಿಷೇಧ ವಿಧಿಸುವಂತೆ (New Mining Leases) ಕೇಂದ್ರ ಸರ್ಕಾರ ಬುಧವಾರ ಆದೇಶಿಸಿದೆ.

ಸುಸ್ಥಿರ ಗಣಿಗಾರಿಕೆಗೆ ಸಮಗ್ರ ನಿರ್ವಹಣಾ ಯೋಜನೆ ಸಿದ್ಧಪಡಿಸುವವರೆಗೆ ಹೊಸ ಗಣಿಗಾರಿಕೆಗೆ ಪರವಾನಗಿ ನೀಡಬಾರದೆಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಾತ್ಕಾಲಿಕ ತಡೆ ವಿಧಿಸಿದ ಕೆಲವೇ ದಿನಗಳ ನಂತರ ಈ ಆದೇಶ ಹೊರಬಂದಿದೆ. ಈ ನಿಷೇಧವು ಸಂಪೂರ್ಣ ಅರಾವಳಿ ಭಾಗಕ್ಕೆ ಅನ್ವಯವಾಗುತ್ತದೆ ಮತ್ತು ಪರ್ವತಶ್ರೇಣಿಯ ಅಖಂಡತೆಯನ್ನು ಕಾಪಾಡುವ ಉದ್ದೇಶ ಹೊಂದಿದೆ ಎಂದು ಸರ್ಕಾರ ಹೇಳಿದೆ.

ದೆಹಲಿಯಿಂದ ಗುಜರಾತ್‌ವರೆಗೆ ವಿಸ್ತರಿಸಿರುವ ಅರಾವಳಿ ಪರ್ವತ ಶ್ರೇಣಿಯನ್ನು ಅಕ್ರಮ ಗಣಿಗಾರಿಕೆಯಿಂದ ಸಂರಕ್ಷಿಸುವ ನಿಟ್ಟಿನಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEF&CC) ಆ ಭಾಗದಲ್ಲಿ ಹೊಸ ಗಣಿಗಾರಿಕಿಗೆ ಪರವಾನಗಿ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಪರಿಸರ, ಭೌಗೋಳಿಕ ಮತ್ತು ಭೂ ಮಟ್ಟದ ಪರಿಗಣನೆಗಳ ಆಧಾರದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಗಣಿಗಾರಿಕೆ ನಿಷೇಧಿಸಿರುವ ಪ್ರದೇಶಗಳ ಜತೆಗೆ ಅರಾವಳಿ ಭಾಗದಲ್ಲಿ ಗಣಿಗಾರಿಕೆ ನಿಷೇಧಿಸಬೇಕಾದ ಪ್ರದೇಶಗಳನ್ನು ಗುರುತಿಸುವಂತೆ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ICFRE)ಗೆ ಸೂಚಿಸಿದೆ. ಅಷ್ಟೇ ಅಲ್ಲದೇ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಗಣಿಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲಾ ಪರಿಸರ ರಕ್ಷಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುವುದನ್ನು ರಾಜ್ಯ ಸರ್ಕಾರಗಳು ಖಚಿತಪಡಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ಅರಾವಳಿ ಪರ್ವತ ಶ್ರೇಣಿಗೆ ಕಾದಿದೆಯಾ ಕಂಟಕ?

ಏನಿದು ಪ್ರಕರಣ?

ಟಿಎನ್ ಗೋದವರ್ಮನ್ ತಿರುಮುಲ್ಪಾಡ್ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ ಈ ವಿವಾದ ಉದ್ಭವಿಸಿದೆ. MoEF&CC ನೇತೃತ್ವದ ಸಮಿತಿ ಪ್ರಸ್ತಾಪಿಸಿದ ಅರಾವಳಿ ಬೆಟ್ಟಗಳು ಮತ್ತು ಪರ್ವತ ಶ್ರೇಣಿಗಳ ಏಕೀಕೃತ ವೈಜ್ಞಾನಿಕ ವ್ಯಾಖ್ಯಾನವನ್ನು ನ್ಯಾಯಾಲಯ ಅಂಗೀಕರಿಸಿದ್ದು, “MoEF&CC ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ICFRE) ಮೂಲಕ ಸುಸ್ಥಿರ ಗಣಿಗಾರಿಕೆ ನಿರ್ವಹಣಾ ಯೋಜನೆ (MPSM) ಸಿದ್ಧಪಡಿಸುವವರೆಗೆ ಯಾವುದೇ ಹೊಸ ಗಣಿಗಾರಿಕಾ ಪರವಾನಗಿಗಳನ್ನು ನೀಡಬಾರದು” ಎಂದು ಹೇಳಿದೆ.

ಥಾರ್ ಮರುಭೂಮಿ ವಿಸ್ತರಣೆಯ ವಿರುದ್ಧವಾಗಿ “ಹಸಿರು ತಡೆಗೋಡೆ”ಯಾಗಿರುವ ಅರಾವಳಿಗಳ ಪಾತ್ರವನ್ನು ನ್ಯಾಯಾಲಯ ಒತ್ತಿ ಹೇಳಿದೆ. ಅಲ್ಲದೇ ಅದರ ಮಹತ್ವವನ್ನು ಉಲ್ಲೇಖಿಸಿ ಸಂಪೂರ್ಣ ಪರ್ವತಶ್ರೇಣಿಯ ಮೇಲೆ ಒಟ್ಟಾರೆ ಗಣಿಗಾರಿಕಾ ನಿಷೇಧ ಹೇರಬೇಕೆಂಬ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಅಂಥ ಕ್ರಮ ಅಕ್ರಮ ಚಟುವಟಿಕೆಗಳನ್ನು ಉತ್ತೇಜಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ಆದರೆ ಜಾರ್ಖಂಡ್‌ನ ಸರಾಂಡಾ ಮುಂತಾದ ಸೂಕ್ಷ್ಮ ಪರಿಸರ ವ್ಯವಸ್ಥೆಗಳಿಗಾಗಿ ರೂಪಿಸಲಾದ ಯೋಜನೆಗಳ ಮಾದರಿಯಲ್ಲಿ, ಸಮಗ್ರ ಮತ್ತು ವಿಜ್ಞಾನಾಧಾರಿತ MPSM ರೂಪಿಸುವುದನ್ನು ಕಡ್ಡಾಯಗೊಳಿಸಿದೆ.

ಸಾರ್ವಜನಿಕರಲ್ಲಿ ಕಳವಳ

ಬೆಟ್ಟಗಳ ಎತ್ತರ ಆಧಾರಿತ ವ್ಯಾಖ್ಯಾನವನ್ನು ನ್ಯಾಯಾಲಯವು ಅಂಗೀಕರಿಸಿದರೆ, ಅರಾವಳಿಗಳ ಶೇಕಡಾ 90ಕ್ಕೂ ಹೆಚ್ಚು ಭಾಗವನ್ನು ಗಣಿಗಾರಿಕೆಗೆ “ತೆರೆದಿಡುತ್ತದೆ” ಎಂಬ ಆರೋಪಗಳು ಕೇಳಿಬಂದಿದ್ದು ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ. ಅಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲಿ ಇದಕ್ಕೆ ವಿರುದ್ಧವಾಗಿ ಅಭಿಯಾನಗಳು ಶುರುವಾಗಿದ್ದು, ವಿಪಕ್ಷಗಳು ಪರಿಸರವಾದಿಗಳು ಈ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.