Aravali Hills: ಅರಾವಳಿ ಪರ್ವತ ಶ್ರೇಣಿಗೆ ಕಾದಿದೆಯಾ ಕಂಟಕ? ಕೇಂದ್ರ, ಸುಪ್ರೀಂ ವಿರುದ್ಧ ಜನ ಪ್ರತಿಭಟನೆ ನಡೆಸ್ತಿರೋದ್ಯಾಕೆ?
ಅರಾವಳಿ ಬೆಟ್ಟದ ಕುರಿತು ಪರಿಸರ ವಾದಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ 100 ಮೀಟರ್‌ಗಿಂತ ಕಡಿಮೆ ಎತ್ತರ ಹೊಂದಿರುವ ಅರಾವಳಿ ಪ್ರದೇಶದ ಪರ್ವತಗಳನ್ನು ಅರಣ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು. ಈ ಕುರಿತಂತೆ ಹಲವರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ.
ಸಾಂಧರ್ಬಿಕ ಚಿತ್ರ -
ನವದೆಹಲಿ: ಅರಾವಳಿ ಬೆಟ್ಟದ ಕುರಿತು ಪರಿಸರ ವಾದಿಗಳು ಹಾಗೂ ಕೇಂದ್ರ ಸರ್ಕಾರದ (Central Government) ನಡುವೆ ತಿಕ್ಕಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ (Supreme Court) 100 ಮೀಟರ್‌ಗಿಂತ ಕಡಿಮೆ ಎತ್ತರ ಹೊಂದಿರುವ ಅರಾವಳಿ ಪ್ರದೇಶದ ಪರ್ವತಗಳನ್ನು ಅರಣ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು. ಈ ಕುರಿತಂತೆ (Aravali Hills) ಹಲವರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಗಣಿಗಾರಿಕೆ ಚಟುವಟಿಕೆಗಳು ಹೆಚ್ಚಾಗುವ ಭೀತಿ ಹೆಚ್ಚಿದೆ ಎಂದು ಹಲವರು ವಾದಿಸಿದ್ದಾರೆ. ಅರಾವಳಿಯ ಶೇ.90ರಷ್ಟು ಪ್ರದೇಶ ಸಂರಕ್ಷಿತವಾಗಿ ಉಳಿಯುತ್ತದೆ ಎಂದು ಪ್ರತಿಪಾದಿಸಿರುವ ಕೇಂದ್ರ ಸರ್ಕಾರ, ಭಾರಿ ಪ್ರಮಾಣದ ಗಣಿಗಾರಿಕೆಗೆ ಅವಕಾಶ ನೀಡಲು ಅರಾವಳಿ ಬೆಟ್ಟಗಳ ಕುರಿತ ವ್ಯಾಖ್ಯಾನವನ್ನು ಬದಲಾಯಿಸಲಾಗಿದೆ ಎಂಬ ವರದಿಗಳನ್ನು ತಿರಸ್ಕರಿಸಿದೆ.
ಸಂರಕ್ಷಿತ ಪ್ರದೇಶಗಳು, ಪರಿಸರ ಸೂಕ್ಷ್ಮ ವಲಯಗಳು, ಹುಲಿ ಮೀಸಲು ಪ್ರದೇಶಗಳು, ಜೌಗು ಪ್ರದೇಶಗಳು ಸೇರಿದಂತೆ ಕೋರ್ ಮತ್ತು ಅತಿಕ್ರಮಣ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ನಿಷೇಧಿಸುವ ಸಮಿತಿಯ ಶಿಫಾರಸನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ ಎಂದು ಸರ್ಕಾರ ತಿಳಿಸಿದೆ. ಆದರೆ ಈ ಕುರಿತು ವಿಶ್ವದ ಅತ್ಯಂತ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾದ, 662.5 ಶತಕೋಟಿ ವರ್ಷಗಳಷ್ಟು ಹಳೆಯದಾದ ಅರಾವಳಿ ಪ್ರದೇಶದಲ್ಲಿ, 100 ಮೀಟರ್‌ಗಿಂತ ಕಡಿಮೆ ಎತ್ತರದ ಬೆಟ್ಟಗಳನ್ನು ಅರಣ್ಯ ಎಂದು ಪರಿಗಣಿಸಲಾಗುವುದಿಲ್ಲ.
ಇದರರ್ಥ ಬೆಟ್ಟವು ಅರಾವಳಿ ಪ್ರದೇಶದಲ್ಲಿದೆ ಎಂಬ ಕಾರಣಕ್ಕೆ ಅದನ್ನು ಅರಣ್ಯ ಭೂಮಿ ಎಂದು ಘೋಷಿಸಲಾಗುವುದಿಲ್ಲ. ಪ್ರತಿಯೊಂದು ಭೂಮಿಯ ಕುರಿತಾದ ನಿರ್ಧಾರವು ಕೇವಲ ಎತ್ತರದ ಆಧಾರದ ಮೇಲೆ ಅಲ್ಲ, ದಾಖಲೆಗಳು, ಅಧಿಸೂಚನೆಗಳು ಮತ್ತು ವಾಸ್ತವಿಕ ಪರಿಸ್ಥಿತಿಗಳನ್ನು ಆಧರಿಸಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಸದ್ಯ ಈ ಕುರಿತು ಹರಿಯಾಣದಿಂದ ರಾಜಸ್ಥಾನದವರೆಗೆ ಪ್ರತಿಭಟನೆ ನಡೆಸಲಾಗುತ್ತಿದೆ. ಅರಾವಳಿ ಶ್ರೇಣಿಗಳ ಬಗ್ಗೆ ಕೇಂದ್ರದ ಹೊಸ ವ್ಯಾಖ್ಯಾನವು ಪರಿಸರ ಸಮತೋಲನಕ್ಕೆ ಹಾನಿಕಾರಕವೆಂದು ಪರಿಸರ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹೊಸ ಆದೇಶವನ್ನು ವಿರೋಧಿಸಿ ಉದಯಪುರದಲ್ಲಿ ವಕೀಲಗೂ ಬೀದಿಗಿಳಿದ್ದಾರೆ. ಅರಾವಳಿಯು , ದೆಹಲಿ–ಎನ್‌ಸಿಆರ್ ಭಾಗವನ್ನು ರಕ್ಷಿಸುತ್ತದೆ. ಜೊತೆಗೆ, ಮಳೆನೀರನ್ನು ಹೀರಿಕೊಳ್ಳುವ ಮೂಲಕ ಅಂತರ್ಜಲ ಮರುಪೂರಣಕ್ಕೆ ಸಹಾಯ ಮಾಡುತ್ತದೆ ಮತ್ತು ಅನೇಕ ಸಸ್ಯ–ಪ್ರಾಣಿ ಜಾತಿಗಳಿಗೆ ಆಶ್ರಯವಾಗಿದೆ. ಈ ರಕ್ಷಣೆ ದುರ್ಬಲಗೊಂಡರೆ, ಧೂಳು ಮತ್ತು ವಾಯುಮಾಲಿನ್ಯ ಹೆಚ್ಚಾಗುವುದು, ಅಂತರ್ಜಲ ಮಟ್ಟ ಕುಸಿಯುವುದು, ಕೊಳವೆಬಾವಿಗಳು ಬತ್ತಿ ಹೋಗುವುದು ಮತ್ತು ತೀವ್ರ ಶಾಖದ ಅಲೆಗಳು ಹೆಚ್ಚಾಗುವುದು ಅನಿವಾರ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ.