ನವದೆಹಲಿ, ಆ. 10: ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷವು ವಿದ್ಯಾರ್ಥಿಗಳ ಪ್ರತಿಭಟನೆಯ (Students Protest) ವಿಚಾರವನ್ನು ಚರ್ಚಿಸಬೇಕೆಂದು ಬೇಡಿಕೆಯನ್ನು ಮುಂದಿಟ್ಟಿದೆ. ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ವಿಸ್ತೃತ ಸಿದ್ಧ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜುಲೈ 20ರಂದು ಕಾಕ್ರೋಚ್ ಜನತಾ ಪಾರ್ಟಿಯು (Cockroach Janta Party) ಸಂಸತ್ ಚಲೋಗೆ ಕರೆ ನೀಡಿದಾಗ, ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಉತ್ತರಿಸುವ ನಿರೀಕ್ಷೆಯಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪೊಲೀಸರ ಕ್ರಮವು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿತ್ತು. ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಸಿಜೆಪಿಯು ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಪಟ್ಟು ಮತ್ತಷ್ಟು ಬಿಗಿಗೊಳಿಸಿತ್ತು. ಕೊನೆಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರು.
ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳೂ ಪ್ರದಾನ್ ರಾಜೀನಾಮೆಗೆ ಹೋರಾಟ ನಡೆಸಿದ್ದವು. ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವುದರಿಂದ, ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರಕ್ಕೆ ಗೃಹ ಸಚಿವ ಅಮಿತ್ ಶಾ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿವೆ.
ವಿದ್ಯಾರ್ಥಿಗಳ ಜತೆ ಮಾತುಕತೆ; 3 ಪರೀಕ್ಷೆ ರದ್ದುಗೊಳಿಸಲು ಮುಂದಾದ ಜಾರ್ಖಂಡ್ ಸರ್ಕಾರ
ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಬರುತ್ತಿದ್ದರೂ ಜುಲೈ 20ರಂದು ಆರಂಭವಾದ ಮುಂಗಾರು ಅಧಿವೇಶನದ ಕಲಾಪಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ಸಿಜೆಪಿ ಟೀಕಿಸಿದೆ. ಸಂಸತ್ತಿನಲ್ಲಿ ಅಮಿತ್ ಶಾ ಮಾತನಾಡಬೇಕೆಂಬ ಬೇಡಿಕೆಯನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮುಂದಿಟ್ಟಾಗ, ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ, ಕಲಾಪ ಸ್ಥಗಿತಗೊಳ್ಳಲು ಸರ್ಕಾರ ಹೇಗೆ ಕಾರಣ ಎಂದು ವಿವರಿಸಿದ್ದರು.
ʼʼಸಂಸತ್ತಿನಲ್ಲಿ ವಿರೋಧ ಪಕ್ಷಗಳ ಗದ್ದಲ ವಿದ್ಯಾರ್ಥಿಗಳ ಸಮಸ್ಯೆಗಳು ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಂಬಂಧಿಸಿದ ಬೇಡಿಕೆಗಳ ಬಗ್ಗೆ ಸರ್ಕಾರದ ಹಠಮಾರಿ ಧೋರಣೆಯಿಂದಾಗಿ ಉಂಟಾಯಿತು. ಇನ್ನು ಗೃಹ ಸಚಿವರಾಗಲಿ ಅಥವಾ ಪ್ರಧಾನಿಯಾಗಲಿ ಒಮ್ಮೆಯೂ ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿಗೆ ಬಂದು ಕಲಾಪಗಳಲ್ಲಿ ಭಾಗವಹಿಸಿಲ್ಲ. ಇದು ಕೂಡ ಸುಗಮ ಕಲಾಪಕ್ಕೆ ಅಡ್ಡಿಯಾಗಿದೆʼʼ ಎಂದು ಕಳೆದ ವಾರ ಸಿಂಘ್ವಿ ಹೇಳಿದ್ದರು.
ನೇಮಕಾತಿ ವಿಳಂಬ ಖಂಡಿಸಿ ಹುಲ್ಲು ತಿಂದು ಪ್ರತಿಭಟನೆ ನಡೆಸಿದ ರ್‍ಯಾಂಕ್ ವಿಜೇತ ಉದ್ಯೋಗಾರ್ಥಿಗಳು
ವಿಪಕ್ಷಗಳ ಬೇಡಿಕೆಗಳಿಗೆ ಪ್ರತಿಕ್ರಿಯಿಸಲು ಅಮಿತ್ ಶಾ ಸಂಸತ್ತಿಗೆ ಏಕೆ ಹಾಜರಾಗಲಿಲ್ಲ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗಳ ಮೇಲಿನ ದಮನಕ್ಕೆ ಕೇಂದ್ರ ಪಡೆಗಳು ಕಾರಣ ಎಂದು ಅವರು ಆರೋಪಿಸಿದ್ದಾರೆ.
“ಭಾರತದ ಸಂಸತ್ತು ನಮ್ಮದು. ಅದು ಜನರದ್ದು. ಭಾರತದ ಜನರನ್ನು, ಅದರ ಮಕ್ಕಳನ್ನು, ದೆಹಲಿ ಪೊಲೀಸರು ಮತ್ತು ಕೇಂದ್ರ ಪಡೆಯಾದ ಸಿಆರ್‌ಪಿಎಫ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಆರ್‌ಎಎಫ್ ಸಿಬ್ಬಂದಿ ಕ್ರೂರವಾಗಿ ಥಳಿಸಿದ್ದಾರೆ. ಅವರಲ್ಲಿ ಕೆಲವರು ದೃಷ್ಟಿ ಕಳೆದುಕೊಂಡಿದ್ದಾರೆ” ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.
“ಅವರ ಮುಖ್ಯಸ್ಥರಾಗಿರುವ ಗೃಹ ಸಚಿವ ಅಮಿತ್ ಶಾ ಪೊಲೀಸರ ಈ ಕೃತ್ಯಗಳಿಗೆ ಉತ್ತರಿಸಬೇಕು. ಕಳೆದ ಎರಡು ವಾರಗಳಿಂದ ಅವರು ಸಂಸತ್ತಿಗೆ ಬಂದು ತಮ್ಮ ಅಧೀನದಲ್ಲಿರುವ ಪಡೆಯ ಈ ದಮನಕಾರಿ, ಕ್ರೂರ ಕ್ರಮದ ಬಗ್ಗೆ ಉತ್ತರಿಸುತ್ತಿಲ್ಲ ಏಕೆ? ಎಲ್ಲಕ್ಕೂ ಹೊಣೆಗಾರಿಕೆಯನ್ನು ಸರಿಪಡಿಸಬೇಕಲ್ಲವೇ?” ಎಂದು ದಾಸ್ ಪ್ರಶ್ನಿಸಿದ್ದರು.