ವಿದ್ಯಾರ್ಥಿಗಳ ಜತೆ ಮಾತುಕತೆ; 3 ಪರೀಕ್ಷೆ ರದ್ದುಗೊಳಿಸಲು ಮುಂದಾದ ಜಾರ್ಖಂಡ್ ಸರ್ಕಾರ
Jharkhand exam: ಜಾರ್ಖಂಡ್‌ನಲ್ಲಿ ಪರೀಕ್ಷಾ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ಮುಂದುವರಿದಿದ್ದು, ಒಟ್ಟು ಆರು ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಭಾನುವಾರ ನಡೆದ ಮಾತುಕತೆ ಬಳಿಕ ಮೂರು ಪರೀಕ್ಷೆಗಳನ್ನು ರದ್ದುಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಜಾರ್ಖಂಡ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು -
ನವದೆಹಲಿ, ಆ. 9: ಜಾರ್ಖಂಡ್‌ನಲ್ಲಿ (Jharkhand) ಪರೀಕ್ಷಾ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ವಿದ್ಯಾರ್ಥಿಗಳೊಂದಿಗೆ ಭಾನುವಾರ (ಆಗಸ್ಟ್ 9) ನಡೆದ ಮಾತುಕತೆ ಬಳಿಕ ಮೂರು ಪರೀಕ್ಷೆಗಳನ್ನು ರದ್ದುಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಭಾನುವಾರ 16ನೇ ದಿನಕ್ಕೆ ಕಾಲಿಟ್ಟಿದೆ. ಜಾರ್ಖಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ (JPSC) 2023 ಮತ್ತು 2025ರ ಪರೀಕ್ಷೆಗಳು ಹಾಗೂ 14ನೇ ಪ್ರಿಲಿಮಿನರಿ ಪರೀಕ್ಷೆ ರದ್ದಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರ ಮತ್ತು ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಮಾತುಕತೆಗಳು ಒಮ್ಮತಕ್ಕೆ ಬರದ ಹಿನ್ನೆಲೆಯಲ್ಲಿ ಭಾನುವಾರ ಸಭೆ ನಡೆಸಲಾಯಿತು. ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹತೋ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವರ ಆರೋಗ್ಯದ ಬಗ್ಗೆ ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದ್ದಾರೆ. ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮತ್ತೊಬ್ಬ ವಿದ್ಯಾರ್ಥಿ ರಾಹುಲ್ ಕ್ರಾಂತಿಮ್ ವೈದ್ಯಕೀಯ ನಿಗಾದಲ್ಲಿದ್ದಾರೆ. ಒಟ್ಟು ಆರು ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಭಾನುವಾರ ನಡೆದ ಸಭೆಯಲ್ಲಿ, ಪರೀಕ್ಷಾ ಅಕ್ರಮಗಳ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಹಣಕಾಸಿನ ವಹಿವಾಟುಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ಇಚ್ಛೆ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಲಖನೌ ಮೂಲದ ಖಾಸಗಿ ಪರೀಕ್ಷಾ ಸಂಸ್ಥೆ ಟಿಎಸ್ಆರ್ ಡೇಟಾ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ (TDPL) ನಡೆಸುವ ಎಲ್ಲ ಪರೀಕ್ಷೆಗಳನ್ನು ಪರಿಶೀಲಿಸಲಾಗುವುದು ಎಂದು ವರದುಯೊಂದು ಹೇಳಿದೆ. ಜೆಪಿಎಸ್‌ಸಿ ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗದಲ್ಲಿ (JSSC) ಸುಧಾರಣೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವು ಐಐಎಂ ಮತ್ತು ಎಕ್ಸ್‌ಐಎಸ್‌ಎಸ್‌ನ ಸಹಾಯ ಪಡೆಯಲಿದೆ.
14ನೇ ಜೆಪಿಎಸ್‌ಸಿ ಪರೀಕ್ಷೆ ರದ್ದು? ನೀಟ್ ಬಳಿಕ ಮತ್ತೊಂದು ವಿವಾದ ಎಬ್ಬಿಸಿದ ಜಾರ್ಖಂಡ್ ನಾಗರಿಕ ಸೇವಾ ಪರೀಕ್ಷೆ
ಕೆಲವು ದಿನಗಳಲ್ಲಿ ರಾಜ್ಯ ಸರ್ಕಾರವು ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾದ ಎನ್ಎಸ್‌ಯುಐ, ಜಾರ್ಖಂಡ್ ಛತ್ರ ಮೋರ್ಚಾ (JCM) ಮತ್ತು ಆದಿವಾಸಿ ಛತ್ರ ಸಂಘ (ACS) ಸೇರಿ ವಿವಿಧ ವಿದ್ಯಾರ್ಥಿ ಗುಂಪುಗಳೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದೆ.
ʼʼರಾಜ್ಯ ಸರ್ಕಾರವು ಬಲಿಷ್ಠವಾಗುತ್ತಿದ್ದಂತೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಹಲವರು ಇದ್ದಾರೆ. ಹೀಗಾಗಿ ಅವರು ಸುಳ್ಳು ಮಾಹಿತಿಯನ್ನು ಹರಡುವುದು ಮತ್ತು ಜನರ ದಾರಿ ತಪ್ಪಿಸುವ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಲಾಠಿ ಅಥವಾ ಗುಂಡುಗಳ ಬಳಕೆಯಲ್ಲ, ಮಾತುಕತೆʼʼ ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ತಿಳಿಸಿದ್ದಾರೆ.
ಜೆಪಿಎಸ್‌ಸಿ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಇದುವರೆಗೆ 19 ಜನರನ್ನು ಬಂಧಿಸಲಾಗಿದೆ. ಪ್ಯಾನಲ್ ಮಾಜಿ ಅಧ್ಯಕ್ಷ ಎಲ್ ಖಿಯಾಂಗ್ಟೆ ಅವರನ್ನು ಜುಲೈ 28ರಿಂದ ನಾಲ್ಕು ಬಾರಿ ವಿಚಾರಣೆಗೆ ಒಳಪಡಿಸಲಾಗಿದೆ.