ಜಮ್ಮು-ಕಾಶ್ಮೀರದಲ್ಲಿ CISF ಸಿಬ್ಬಂದಿಯಿಂದಲೇ ಗುಂಡಿನ ದಾಳಿ: ನಾಲ್ವರು ಯೋಧರ ಹತ್ಯೆ
ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಸೇವಾ-2 ಜಲವಿದ್ಯುತ್ ಯೋಜನೆಯ ಶಿಬಿರದಲ್ಲಿ CISF ಸಿಬ್ಬಂದಿ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಸಹಾಯಕ ಕಮಾಂಡೆಂಟ್ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಕರ್ತವ್ಯ ಬದಲಾವಣೆ ವೇಳೆ ವಾಗ್ವಾದ ನಡೆದಿದ್ದು, ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. CISF ಮುಖ್ಯ ಕಚೇರಿ Court of Inquiryಗೆ ಆದೇಶಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತ ಯೋಧರು -
ಶ್ರೀನಗರ, ಸೆ. 29: ಜಮ್ಮು-ಕಾಶ್ಮೀರದ (Jammu and Kashmir) ಕಥುವಾ ಜಿಲ್ಲೆಯ ಸೇವಾ-2 ಜಲವಿದ್ಯುತ್ ಯೋಜನೆಯ ಶಿಬಿರದಲ್ಲಿ ಸಹೋದ್ಯೋಗಿಯೊಬ್ಬರು ನಡೆಸಿದ ಗುಂಡಿನ ದಾಳಿಗೆ ಸಹಾಯಕ ಕಮಾಂಡೆಂಟ್ (Assistant Commandant) ಸೇರಿ ನಾಲ್ವರು ಸಿಐಎಸ್ಎಫ್ (CISF) ಸಿಬ್ಬಂದಿ ಮೃತಪಟ್ಟಿದ್ದಾರೆ. ಕರ್ತವ್ಯ ಬದಲಾವಣೆಯ ಸಂದರ್ಭದಲ್ಲಿ ಸಿಐಎಸ್ಎಫ್ ಸಿಬ್ಬಂದಿ ನಡುವೆ ವಾಗ್ವಾದ ಉಂಟಾಗಿದ್ದು, ಅದು ವಿಕೋಪಕ್ಕೆ ತಿರುಗಿ ಗುಂಡಿನ ದಾಳಿಗೆ ಕಾರಣವಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ಸಿಬ್ಬಂದಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಸಹಾಯಕ ಕಮಾಂಡೆಂಟ್ ಅಂಕಿತ್ ಕುಮಾರ್ ಪಾಂಡೆ, ಸಬ್ ಇನ್ಸ್‌ಪೆಕ್ಟರ್ ಲಕ್ಷ್ಮಣ್ ಸಿಂಗ್, ಕಾನ್‌ಸ್ಟೇಬಲ್ ಸಂಜೀವ್ ಕುಮಾರ್ ಹಾಗೂ ಕಾನ್‌ಸ್ಟೇಬಲ್ ಮೊಹಮ್ಮದ್ ರಫೀಕ್ ಎಂದು ಗುರುತಿಸಲಾಗಿದೆ. ಒಂದೇ ಭದ್ರತಾ ಪಡೆಯ ಸಿಬ್ಬಂದಿ ಪರಸ್ಪರ ಗುಂಡಿನ ದಾಳಿ ನಡೆಸಿದ ಪ್ರಕರಣವೆಂದು ಇದನ್ನು ಪರಿಗಣಿಸಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಥುವಾ ಜಿಲ್ಲಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಯೋಜನೆಯ ಕ್ಯಾಂಪ್‌ನಲ್ಲಿದ್ದಾಗ ಅವಧೇಶ್ ಸಿಂಗ್ ಸರ್ವಿಸ್ ರಿವಾಲ್ವರ್‌ನಿಂದ ತಮ್ಮ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿ ಹೇಳಿದೆ. ಸದ್ಯ ಅವರನ್ನು ಬಂಧಿಸಲಾಗಿದೆ.
ನಾಲ್ವರು ಯೋಧರ ಹತ್ಯೆ:
J&K के कठुआ में CISF कैंप में फायरिंग, जवान ने अपने साथियों पर बरसाईं गोलियां; 4 की मौत https://t.co/uFn4N3Sh1p #JammuKashmir #Kathua #CISF #Firing pic.twitter.com/67kzgvFfPY
— Bhupendra Tiwari (@Bhupend29375158) September 29, 2026
ಸಿಐಎಸ್ಎಫ್‌ನಿಂದ ವಿಚಾರಣಾ ಸಮಿತಿ ರಚನೆ
ಘಟನೆಯ ಸಂಪೂರ್ಣ ವಿವರ ಪತ್ತೆಹಚ್ಚಲು ಹಾಗೂ ಗುಂಡಿನ ದಾಳಿಗೆ ಕಾರಣವಾದ ಸಂದರ್ಭಗಳನ್ನು ತಿಳಿಯಲು ಸಿಐಎಸ್ಎಫ್ ಮುಖ್ಯ ಕಚೇರಿ ನ್ಯಾಯಾಂಗ ಮಾದರಿಯ ವಿಚಾರಣಾ ಸಮಿತಿಯನ್ನು (Court of Inquiry) ರಚಿಸಿದೆ.
ವಾಗ್ವಾದಕ್ಕೆ ಕಾರಣವೇನು ಮತ್ತು ಗುಂಡಿನ ದಾಳಿ ಹೇಗೆ ನಡೆಯಿತು ಎಂಬುದು ಇನ್ನೂ ತಿಳಿದುಬಂದಿಲ್ಲ. ಸಿಐಎಸ್ಎಫ್ ಮಹಾನಿರ್ದೇಶಕರು ಘಟನೆಯ ಬೆಳವಣಿಗೆಗಳು ಹಾಗೂ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಹಿಮಾಚಲ ಪ್ರದೇಶದ ಗಡಿಯ ಸಮೀಪವಿರುವ ಬಾಸೋಲಿ ತಹಶೀಲಿನ ಸೇವಾ-2 ಜಲವಿದ್ಯುತ್ ಯೋಜನೆಯ ಶಿಬಿರದಲ್ಲಿ ಈ ಘಟನೆ ನಡೆದಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.