ನವದೆಹಲಿ: ದೆಹಲಿಯ (Delhi) ತಿಹಾರ್ ಜೈಲಿನಲ್ಲಿ (Tihar Jail) ಕೊಲೆ ಆರೋಪದಡಿ ಶಿಕ್ಷೆ ಅನುಭವಿಸುತ್ತಿದ್ದ ಇಬ್ಬರು ಕೈದಿಗಳು (Inmates) ಶುಕ್ರವಾರ (ಆಗಸ್ಟ್ 8, 2025) ಬೆಳಗ್ಗೆ 8:30ರ ಸುಮಾರಿಗೆ ಜೈಲಿನ ಒಳಗಿನ ಮಳೆನೀರಿನ ಒಳಚರಂಡಿಯಲ್ಲಿ (Drain) ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೈಲ್ ನಂ. 8 ರಲ್ಲಿ ಕೈದಿಗಳು ಒಳಚರಂಡಿಯನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿದ್ದಾಗ ಈ ಘಟನೆ ಸಂಭವಿಸಿದೆ.
ಜೈಲಿನ ಸಿಬ್ಬಂದಿಯ ಪ್ರಕಾರ, ಈ ಕೈದಿಗಳಿಗೆ ಮಳೆನೀರಿನ ಒಳಚರಂಡಿಯನ್ನು ಶುಚಿಗೊಳಿಸುವ ಕಾರ್ಯವನ್ನು ನೀಡಲಾಗಿತ್ತು. ಕೆಲಸದ ವೇಳೆ ಅವರು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕಂಡುಬಂದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆಯ ಬಳಿಕ ನ್ಯಾಯಾಂಗ ತನಿಖೆ ಮತ್ತು ಪೊಲೀಸ್ ತನಿಖೆಗೆ ಆದೇಶಿಸಲಾಗಿದೆ. ಜೊತೆಗೆ, ಜೈಲಿನ ಆಡಳಿತವು ಇಲಾಖಾ ತನಿಖೆಯನ್ನು ಘೋಷಿಸಿದೆ. ಸಂಭಾವ್ಯ ಲೋಪಗಳಿಗಾಗಿ ಒಬ್ಬ ಡೆಪ್ಯೂಟಿ ಜೈಲರ್, ಒಬ್ಬ ಸಹಾಯಕ ಜೈಲರ್ ಮತ್ತು ಒಬ್ಬ ವಾರ್ಡನ್ ಅವರನ್ನು ಅಮಾನತುಗೊಳಿಸಲಾಗಿದೆ. ವರದಿಯ ಪ್ರಕಾರ, ತನಿಖಾಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಘಟನೆಯ ಸಂದರ್ಭದಲ್ಲಿ ಹಾಜರಿದ್ದ ಕೈದಿಗಳು ಮತ್ತು ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ರೈಲು ಹಾದು ಹೋಗುತ್ತಿದ್ದರೆ ಸೇತುವೆಯ ಕೆಳಗೆ ಕಾಯುತ್ತ ನಿಂತ ಜನ; ಕಾರಣ ಕೇಳಿದ್ರೆ ನೀವೂ ದಂಗಾಗ್ತೀರಿ
ಸಾವಿನ ನಿಖರ ಕಾರಣವನ್ನು ಪತ್ತೆ ಮಾಡಲು, ಕೈದಿಗಳ ಶವಗಳನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ತಿಹಾರ್ ಜೈಲಿನ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಈ ತನಿಖೆಯನ್ನು ಮುನ್ನಡೆಸುತ್ತಿದ್ದಾರೆ, ಜೊತೆಗೆ ದೆಹಲಿ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ. ದೆಹಲಿ ಜೈಲು ಇಲಾಖೆಯು ಡೈರೆಕ್ಟರ್ ಜನರಲ್‌ಗೆ ಆರಂಭಿಕ ವರದಿಯನ್ನು ಸಲ್ಲಿಸಲಿದೆ.
ಈ ಘಟನೆಯು ಜೈಲಿನ ಆಡಳಿತದಲ್ಲಿ ಸುರಕ್ಷತೆ ಮತ್ತು ಕೈದಿಗಳ ಕೆಲಸದ ವಾತಾವರಣದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ತನಿಖೆಯ ಫಲಿತಾಂಶವನ್ನು ಆಧರಿಸಿ, ಜೈಲಿನ ಆಡಳಿತದ ಲೋಪಗಳಿಗೆ ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.