ನವದೆಹಲಿ, ಅ. 21: ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡುವುದಿಲ್ಲ ಹಾಗೂ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಉಂಟುಮಾಡುವುದಿಲ್ಲ ಎಂದು ಲಿಖಿತ ಮುಚ್ಚಳಿಕೆ ನೀಡಿದ ಹಿನ್ನೆಲೆಯಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (CJP) ಸಹ ಸಂಚಾಲಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಬುಧವಾರ ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.
ಜಂತರ್ ಮಂತರ್ಗೆ ಪ್ರತಿಭಟನೆ ಸ್ಥಳದ ಅಧಿಕೃತ ಮಾನ್ಯತೆ ಕಾನೂನುಬದ್ಧವಾಗಿ ಮರುಸ್ಥಾಪನೆಯಾಗುವವರೆಗೆ ಅಲ್ಲಿ ಪ್ರತಿಭಟನೆಗೆ ಕರೆ ನೀಡುವುದಿಲ್ಲ ಎಂದು ಇಬ್ಬರೂ ಲಿಖಿತವಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ತಾವು ನಡೆಸುವ ಯಾವುದೇ ಪ್ರತಿಭಟನೆಯು ಸಂವಿಧಾನದ ಚೌಕಟ್ಟಿನೊಳಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ಪ್ರತಿಭಟನೆ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಅಕ್ರಮಗಳು ನಡೆದಿವೆ ಹಾಗೂ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು.
ಅಕ್ಟೋಬರ್ 14ರಂದು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಪ್ರಯತ್ನಿಸಿದ ವೇಳೆ, ಅನುಮತಿ ಇಲ್ಲದೆ ನಿಗದಿತ ಪ್ರತಿಭಟನಾ ಸ್ಥಳವನ್ನು ಪ್ರವೇಶಿಸಿ ಹಿಂದಿನ ಶಾಂತಿ ಪಾಲನೆಯ ಮುಚ್ಚಳಿಕೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಜಂತರ್ ಮಂತರ್ಗೆ ಅಕ್ರಮ ಪ್ರವೇಶ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಸಿಜೆಪಿ ನಾಯಕರು 5 ದಿನ ತಿಹಾರ್ ಜೈಲಿಗೆ!
ತಲಾ ₹50,000 ಬಾಂಡ್ ಸಲ್ಲಿಕೆ
ಇಬ್ಬರೂ ತಲಾ ₹50,000 ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಜಾಮೀನು ಬಾಂಡ್ ಸಲ್ಲಿಸಬೇಕು ಎಂದು ಮ್ಯಾಜಿಸ್ಟ್ರೇಟ್ ಸೂಚಿಸಿದ್ದಾರೆ. ವಿಚಾರಣೆಯ ಪ್ರತಿ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಹಾಗೂ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂಬ ಷರತ್ತುಗಳನ್ನೂ ವಿಧಿಸಲಾಗಿದೆ.
ಅಕ್ಟೋಬರ್ 23ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಂದು ಇಬ್ಬರೂ ಜಾಮೀನುದಾರರೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಪೊಲೀಸ್ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆಯೂ ಸೂಚಿಸಲಾಗಿದೆ.